Advertisement

ಸಣ್ಣ, ಮಧ್ಯಮ ಉದ್ಯಮ ಉತ್ತೇಜಿಸಿ: ಕಾಸಿಯಾ ಆಗ್ರಹ

01:25 AM Oct 22, 2019 | Team Udayavani |

ಮಂಗಳೂರು: ದೇಶದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಇ) ತೀವ್ರ ಸಂಕಷ್ಟಕ್ಕೊಳಗಾಗಿವೆ. ಅವುಗಳನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಷ್ಟು ಉತ್ತೇಜನಕಾರಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಗ್ರಹಿಸಿದೆ.

Advertisement

ಈ ಬಗ್ಗೆ ಕಾಸಿಯಾ ಅಧ್ಯಕ್ಷ ಆರ್‌. ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಳು ವರ್ಷಗಳಲ್ಲೇ ಆಗಸ್ಟ್‌ನಲ್ಲಿ ಕೈಗಾರಿಕೆ ಉತ್ಪಾದನ ಸೂಚ್ಯಂಕ ಅತ್ಯಂತ ಕಡಿಮೆ ಮಟ್ಟಕ್ಕಿಳಿ ದಿದೆ. ಪ್ರಸ್ತುತ ಆಟೋಮೊಬೈಲ್‌, ಜವುಳಿ ಮತ್ತು ಸಿದ್ಧ ಉಡುಪು ಹಾಗೂ ಗ್ರಾಹಕರ ವಸ್ತು ಸೇರಿದಂತೆ ಇತರ ತಯಾರಿಕೆ ವಲಯಗಳು ತೀವ್ರ ಕುಸಿತ ಕಂಡಿವೆ ಎಂದರು.

ರಾಜ್ಯದಲ್ಲಿ ಅನೇಕ ಎಸ್‌ಎಂಇ ಘಟಕಗಳು ವಹಿವಾಟಿನಲ್ಲಿ ಶೇ. 30ರಿಂದ ಶೇ. 70ರಷ್ಟು ಕುಸಿತ ಕಂಡಿವೆ. ಪಾಳಿ ಸಂಖ್ಯೆಗಳನ್ನು ಮೊಟಕು ಗೊಳಿಸಲಾಗಿದೆ. ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಇಂತಹ ಘಟಕಗಳ ಕಾರ್ಯನಿರ್ವಹಣೆಗೆ ಹೂಡಿಕೆ ಮತ್ತು ನೆರವು ಪಡೆಯುವುದು ಕಷ್ಟವಾಗಿದೆ ಎಂದರು.

ಸರಕಾರದ ಕ್ರಮ ಸ್ವಾಗತಾರ್ಹ
ಸರಕಾರ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ. ಸಾಲ ವಸೂಲಾತಿಯಲ್ಲಿ ವಿಳಂಬ ಮಾಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿರುವುದು, ಎನ್‌ಪಿಎ ನಿಯಮಗಳ ಜಾರಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸುಲಭವಾಗಿ ದೊರೆಯುವಂತೆ ಮಾಡಲು ಅನೇಕ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಆದರೂ ಕಾರ್ಪೊರೇಟ್‌ ಉದ್ಯಮ ಗಳಲ್ಲದಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಈ ಕ್ರಮಗಳಿಂದ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

ಗೋಡಂಬಿ ಆಮದು ಸಂದರ್ಭ ಶೇ. 60ರಿಂದ 80ರ ಪ್ರಕರಣಗಳಲ್ಲಿ ಸುಂಕ ಅಧಿಕಾರಿಗಳು ಆಮದು ಮೌಲ್ಯವನ್ನು ಸರಕು ಪಟ್ಟಿಯ ಬೆಲೆಗಿಂತ ಹೆಚ್ಚಿಗೆ ಮರು ಮೌಲ್ಯಮಾಪನ ಮಾಡುವ ಕ್ರಮ ಸಮಸ್ಯೆಯಾಗಿದೆ. ಇದನ್ನು ಕೇಂದ್ರ ಸರಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Advertisement

ರಸ್ತೆ ಅಭಿವೃದ್ಧಿಪಡಿಸಿ
ಎಸ್‌ಎಂಇಗಳು ಮಂಗಳೂರು ಬಂದರನ್ನು ಸಮರ್ಪಕವಾಗಿ ಬಳಸಲು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಸಕಲೇಶಪುರದಿಂದ ಉಪ್ಪಿನಂಗಡಿ ವರೆಗಿನ ಯೋಜಿತ ಟ್ಯೂಬ್‌ ರೋಡ್‌ ಯೋಜನೆಯನ್ನು ಜಾರಿಗೊಳಿಸ ಬೇಕು, ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು, ಮಲ್ಟಿ-ಮೋಡಲ್‌ ಲಾಜಿಸ್ಟಿಕ್ಸ್‌ ಪಾರ್ಕ್‌ ಮತ್ತು ನವೀನ ಮಾದರಿಯ ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸಣ್ಣ ಕೈಗಾರಿಕಾ ಸಂಘದ ಕೃಷ್ಣದಾಸ್‌ ಕಾಮತ್‌, ವಿಶಾಲ್‌ ಸಾಲ್ಯಾನ್‌, ಐಸಾಕ್‌ ವಾಸ್‌, ಅರುಣ್‌ ಪಡಿಯಾರ್‌, ಕೆ.ವಿ. ಅರಸಪ್ಪ, ರಾಜಗೋಪಾಲ್‌, ವಿಶ್ವನಾಥ ಗೌಡರ್‌, ಹುಸೈನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next