Advertisement

Swetha Leonilla Dsouza; ಕರಾವಳಿ ಹುಡುಗಿ ಕೈತುಂಬಾ ಸಿನಿಮಾ

11:13 AM Dec 25, 2023 | Team Udayavani |

“ಖಾಸಗಿ ಪುಟಗಳು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಎಂಟ್ರಿಯಾಗಿರುವ ಕರಾವಳಿ ಲಿಯೋನಿಲ್ಲ ಶ್ವೇತಾ ಡಿಸೋಜಾ. ತಮ್ಮ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರು ಮತ್ತು ಸಿನಿ ಮಂದಿಯ ಮನ, ಗಮನ ಎರಡನ್ನೂ ಸೆಳೆಯಲು ಯಶಸ್ವಿಯಾಗಿರುವ ಲಿಯೋನಿಲ್ಲ ಶ್ವೇತಾ ಡಿಸೋಜಾ ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಚಿತ್ರರಂಗದಲ್ಲಿ ತಮಗೆ ಸಿಗುತ್ತಿರುವ ಅವಕಾಶಗಳು, ಮುಂಬರಲಿರುವ ಸಿನಿಮಾಗಳ ಬಗ್ಗೆ ಶ್ವೇತಾ ಒಂದಷ್ಟು ಮಾತನಾಡಿದ್ದಾರೆ.

Advertisement

“ನಾನು ಸಿನಿಮಾಕ್ಕೆ ಬರುತ್ತೇನೆ ಅಂಥ ಚಿಕ್ಕ ವಯಸ್ಸಿನಲ್ಲಿ ಅಂದುಕೊಂಡಿರಲಿಲ್ಲ. ನಮ್ಮ ಮನೆಯಲ್ಲೂ ಯಾವತ್ತೂ ಈ ಬಗ್ಗೆ ಮಾತಾಡಿರಲಿಲ್ಲ. ಇಂಜಿನಿಯರಿಂಗ್‌ ಓದುತ್ತಿರುವಾಗ ಅಭಿನಯದ ಕಡೆಗೆ ಒಂದಷ್ಟು ಆಸಕ್ತಿ ಮುಡಿತು. ಆ ಬಳಿಕ ಒಂದಷ್ಟು ಶಾರ್ಟ್‌ ಫಿಲಂಗಳಲ್ಲಿ ಅಭಿನಯಿಸಿದೆ. ಅದಾದ ನಂತರ ನಟ ಮತ್ತು ನಿರ್ದೇಶಕ ರಾಜ್‌ ಬಿ. ಶೆಟ್ಟಿ ಅವರ ಪರಿಚಯವಾಯಿತು. ಅಲ್ಲಿಂದ ಸಿನಿಮಾದ ಕಡೆಗೆ ನನಗಿದ್ದ ದೃಷ್ಟಿಕೋನವೇ ಬದಲಾಯಿತು…’ ಇದು ನಟಿ ಲಿಯೋನಿಲ್ಲ ಶ್ವೇತಾ ಡಿಸೋಜಾ ಮಾತು.

“ಖಾಸಗಿ ಪುಟಗಳು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಎಂಟ್ರಿಯಾಗಿರುವ ಕರಾವಳಿ ಲಿಯೋನಿಲ್ಲ ಶ್ವೇತಾ ಡಿಸೋಜಾ, ಮೊದಲ ಸಿನಿಮಾದಲ್ಲೇ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ನಟಿ.

ಶ್ವೇತಾ ಈಗಾಗಲೇ ಹಿಂದಿಯ “ದಿ ವೈ’ ಮತ್ತು ಕನ್ನಡದ “ಖಾಸಗಿ ಪುಟಗಳು’ ಎರಡು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಎರಡೂ ಸಿನಿಮಾಗಳು ಮತ್ತು ಅದರಲ್ಲಿ ಸಿಕ್ಕಿರುವ ಎರಡೂ ಪಾತ್ರಗಳೂ ತುಂಬ ವಿಭಿನ್ನ ಮತ್ತು ವಿಶೇಷವಾದವು ಎಂಬುದು ಶ್ವೇತಾ ಮಾತು.

ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಪ್ರೊಫೈಲ್‌ ನೋಡಿದ ನಿರ್ದೇಶಕರು “ಖಾಸಗಿ ಪುಟಗಳು’ ಸಿನಿಮಾಕ್ಕೆ ನನ್ನನ್ನು ಅಪ್ರೋಚ್‌ ಮಾಡಿದರು. ಮೊದಲ ಹಿಂದಿಯ ಸಿನಿಮಾಕ್ಕೂ ಎರಡನೇ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಮೊದಲ ಸಿನಿಮಾಕ್ಕೆ ಸಂಪೂರ್ಣ ವಿರುದ್ದವಾದ ಪಾತ್ರ ಎರಡನೇ ಸಿನಿಮಾದಲ್ಲಿ ಸಿಕ್ಕಿತು. ನಟಿಯಾಗಿ ಪಾತ್ರಗಳನ್ನು ಹೇಗೆ ನಿಭಾಯಿಸಬೇಕು, ಏನೆಲ್ಲ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಈ ಸಿನಿಮಾಗಳಲ್ಲಿ ಕಲಿತಿದ್ದೇನೆ’ ಎನ್ನುತ್ತಾರೆ ಶ್ವೇತಾ.

Advertisement

ಅಂದಹಾಗೆ, ಲಿಯೋನಿಲ್ಲ ಶ್ವೇತಾ ಡಿಸೋಜಾ ಮೂಲತಃ ಮಂಗಳೂರಿನ ಬಜ್ಪೆಯ ಹುಡುಗಿ. ತಂದೆ-ತಾಯಿಯರ ಏಕಮಾತ್ರ ಪುತ್ರಿ ಶ್ವೇತಾ, ತನ್ನ ಪ್ರಾಥಮಿಕ ಶಿಕ್ಷಣವನ್ನು ಬಜ್ಪೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಪಿಯುಸಿ ಮಂಗಳೂರಿನಲ್ಲಿ ಮುಗಿಸಿದ್ದಾರೆ.

ಬಳಿಕ ಇಂಜಿನಿಯರಿಂಗ್‌ ಶಿಕ್ಷಣಕ್ಕಾಗಿ ಬೆಂಗಳೂರಿನತ್ತ ಮುಖ ಮಾಡಿದ ಶ್ವೇತಾಗೆ ನಿಧಾನವಾಗಿ ಬಣ್ಣದ ಲೋಕದ ನಂಟು ಶುರುವಾಯಿತು. ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ಒಳ್ಳೆಯ ಕೆಲಸ, ಕೈತುಂಬ ಸಂಪಾದನೆಯಿದ್ದರೂ, ಶ್ವೇತಾಗೆ ಅಭಿನಯದ ಕಡೆಗಿದ್ದ ಆಸಕ್ತಿ ಅವರನ್ನು ಐಟಿ ಕ್ಷೇತ್ರದಲ್ಲಿ ಹೆಚ್ಚು ಸಮಯ ಇರಲು ಬಿಡಲಿಲ್ಲ. ಜಾಹೀರಾತೊಂದರ ಆಡಿಷನ್‌ ಸಂದರ್ಭದಲ್ಲಿ ಶ್ವೇತಾಗೆ “ಒಂದು ಮೊಟ್ಟೆಯ ಕಥೆ’ ಖ್ಯಾತಿಯ ನಟ ಕಂ ನಿರ್ದೇಶಕ ರಾಜ್‌ ಬಿ. ಶೆಟ್ಟಿ ಪರಿಚಯವಾಯಿತು. ಬಳಿಕ ರಾಜ್‌ ಬಿ. ಶೆಟ್ಟಿ ಅವರಿಂದ ಕೆಲ ಕಾಲ ಅಭಿನಯಕ್ಕೆ ಸಂಬಂಧಿಸಿದ ಒಂದಷ್ಟು ತರಬೇತಿ, ತಯಾರಿ ಮಾಡಿಕೊಂಡು ಪೂರ್ಣ ಪ್ರಮಾಣದಲ್ಲಿ ಸಿನಿಮಾದತ್ತ ಮುಖ ಮಾಡುವ ನಿರ್ಧಾರಕ್ಕೆ ಬಂದರು.

ಸದ್ಯ ಶ್ವೇತಾ ಡಿಸೋಜಾ “ಹೆಜ್ಜಾರು’, “ನೆಲ್ಸನ್‌’ ಸೇರಿದಂತೆ ಇನ್ನೂ ಹೆಸರಿಡದ ಎರಡು-ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗಳ ಹೆಸರು ಮತ್ತು ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next