ಬೆಂಗಳೂರು: ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ‘ಬಾಲಿವುಡ್ ಮಾದಕ’ ಜಗತ್ತಿನ ಸದ್ದು ಜೋರಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ನಶೆ ನಂಜಿನ ಬಗ್ಗೆ ಮಾಹಿತಿ ಸ್ಪೋಟವಾಗಿದೆ. ಎನ್ ಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಈ ಮಾಹಿತಿ ಬಯಲಾಗಿದ್ದು, 145 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ ಸಿಬಿ) ಅಧಿಕಾರಿಗಳು ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರದ ಹೋಟೆಲ್ ಒಂದರಲ್ಲಿ ದಾಳಿ ಮಾಡಿ 2.20 ಲಕ್ಷ ರೂ. ನಗದು, 145 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿತ್ತು. ದಾಳಿಯ ಮುಂದುವರಿದ ಭಾಗವಾಗಿ ನಗರದಲ್ಲಿ ಮತ್ತೊಂದು ದಾಳಿಯಲ್ಲಿ 96 ಎಮಡಿಎಂಎ ಮಾತ್ರೆಗಳನ್ನು ಮತ್ತು 180 ಎಲ್ ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂತರ ಅಧಿಕಾರಿಗಳು ಮತ್ತೊಂದು ದಾಳಿ ನಡೆಸಿದ್ದು, ಪ್ರಖರಣದ ಪ್ರಮುಖ ಕಿಂಗ್ ಪಿನ್ ಆಗಿದ್ದ ಮಹಿಳೆಯೋರ್ವರ ಮನೆಗೆ ದಾಳಿ ಮಾಡಿ 270 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಬಂಧಿತರನ್ನು ಎಂ. ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ. ಡಿ ಎಂಬ ಎಂದು ಗುರುತಿಸಲಾಗಿದೆ.
ಈ ಬಂಧಿತ ಆರೋಪಿಗಳು ಪ್ರಮುಖ ಸಂಗೀತಗಾರರು ಮತ್ತು ನಟರು ಮತ್ತು ಕಾಲೇಜು ವಿದ್ಯಾರ್ಥಿಗಳು , ಯುವಕರು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಮಾದಕ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.