Advertisement

ಮಂಗಳೂರು ಸಹಿತ ರಾಜ್ಯದ ಮೂರು ಸಿಟಿಗಳಲ್ಲಿ ಯೋಜನೆ ಅನುಷ್ಠಾನ

09:54 AM Aug 12, 2018 | Team Udayavani |

ಮಹಾನಗರ: ‘ತಂಬಾಕು ಮುಕ್ತ ನಗರ’ವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ರಾಜ್ಯ ಸರಕಾರವು ತನ್ನ ಪ್ರಾಯೋಗಿಕ ಯೋಜನೆಯಡಿ ಮಂಗಳೂರು, ತುಮಕೂರು ಹಾಗೂ ಮೈಸೂರು ನಗರಗಳನ್ನು ಈ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement

ಆ ಮೂಲಕ ಮೂರು ನಗರಗಳಲ್ಲಿರುವ ಪ್ರಮುಖ ಸರಕಾರಿ ಇಲಾಖೆ/ಸಂಸ್ಥೆ/ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆ, ಬಸ್‌ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ‘ಸಿಗರೇಟು ಸೇದುವಂತಿಲ್ಲ ಹಾಗೂ ತಂಬಾಕು ಜಗಿಯುವಂತಿಲ್ಲ’ ಎನ್ನುವ ಕಟ್ಟು ನಿಟ್ಟಿನ ನಿಯಮಗಳು ಅನುಷ್ಠಾನಕ್ಕೆ ಬರಲಿವೆ ! ಮುಂದಿನ ವಾರ ಈ ಯೋಜನೆಗೆ ಚಾಲನೆ ನೀಡಿ, ನಾಲ್ಕು ತಿಂಗಳೊಳಗೆ ಈ ನಗರವನ್ನು ಸಂಪೂರ್ಣ ತಂಬಾಕು ಮುಕ್ತವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಅದರಂತೆ ಡಿಸೆಂಬರ್‌ ವೇಳೆಗೆ ತಂಬಾಕು ಮುಕ್ತವಾಗಲಿವೆ.

ಶೀಘ್ರ ಚಾಲನೆ ನಿರೀಕ್ಷೆ
ಈ ಸಂಬಂಧ ದ.ಕ. ಜಿಲ್ಲಾಧಿಕಾರಿ, ಆರ್‌ಟಿಒ ಕಚೇರಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣ, ಅಬಕಾರಿ ಇಲಾಖೆ, ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ, ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿ.ಪಂ., ತಾ.ಪಂ.ಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಹಾಗೂ ಎನ್‌ಜಿಒ ಪ್ರಮುಖರು ತೆರಳಿ ಮಾಹಿತಿ ನೀಡುವ ಕಾರ್ಯವನ್ನು ಆರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ಈ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ ನೀಡುವ ನಿರೀಕ್ಷೆ ಇದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನವಾಗಿಲ್ಲ. ಹೀಗಾಗಿ ಪೈಲೆಟ್‌ ಪ್ರೊಜೆಕ್ಟ್‌ನಡಿ ಈ ನಗರಗಳನ್ನು ಆಯ್ಕೆ ಮಾಡಿ ಕಟ್ಟುನಿಟ್ಟಾಗಿ ನಿಯಮ ಜಾರಿಗೆ ಉದ್ದೇಶಿಸಲಾಗಿದೆ. ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಎನ್‌ ಜಿಒ ಸಂಸ್ಥೆಯ ಸಹಕಾರದೊಂದಿಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ರಸ್ತೆ ಸಾರಿಗೆ, ಶಿಕ್ಷಣ, ಅಬಕಾರಿ ಇಲಾಖೆ, ಸ್ಥಳೀಯಾಡಳಿತ ಸಹಿತ ಎಲ್ಲ ಇಲಾಖೆಗಳನ್ನು ಸೇರಿಸಿಕೊಂಡು ಯೋಜನೆ ಅನುಷ್ಠಾನಿಸಲು ನಿರ್ಧರಿಸಲಾಗಿದೆ.

ಸಂಬಂಧಿತ ಇಲಾಖೆಯಿಂದಲೇ ದಂಡ
‘ತಂಬಾಕು ಮುಕ್ತ’ ನಗರ ಪೂರ್ಣಗೊಂಡಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಸಂಸ್ಥೆಗಳೇ ಇದರ ಜವಾಬ್ದಾರಿ ವಹಿಸಬೇಕಾಗಿದೆ. ಅಂದರೆ, ನಿಗದಿತ ಇಲಾಖೆ/ ಸಂಸ್ಥೆಯ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು ಸೇದುವುದು ಅಥವಾ ತಂಬಾಕು ಜಗಿಯುವುದು ಕಂಡರೆ ಸಂಬಂಧಪಟ್ಟ ಇಲಾಖೆಗೆ ದಂಡ ವಿಧಿಸಲು ಅವಕಾಶವಿದೆ.

Advertisement

‘ತಂಬಾಕು ನಿಷೇಧಿತ ಪ್ರದೇಶ’ ಬೋರ್ಡ್‌ ಕಡ್ಡಾಯ
ನಗರಗಳ ಪ್ರತಿ ಸರಕಾರಿ ಇಲಾಖೆ, ಅಂಗಡಿ, ಮಾಲ್‌, ಶಿಕ್ಷಣ ಸಂಸ್ಥೆಗಳ ವ್ಯಾಪ್ತಿ, ಖಾಸಗಿ- ಸರಕಾರಿ ಬಸ್‌ಗಳು, ಬಸ್‌ ನಿಲ್ದಾಣ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳದಲ್ಲಿ ‘ತಂಬಾಕು ನಿಷೇಧಿತ ಪ್ರದೇಶ’ ಬೋರ್ಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು

15 ದಿನಗಳಲ್ಲಿ ಚಾಲನೆ
ಮಂಗಳೂರನ್ನು ತಂಬಾಕು ಮುಕ್ತ ನಗರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಕಾರದಿಂದ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ತಂಬಾಕು  ಯಂತ್ರಣ ಕೋಶದ ನೇತೃತ್ವದಲ್ಲಿ ಎನ್‌ ಜಿಒ ಸಹಾಯದಿಂದ ನಗ ರದ ಎಲ್ಲ ಇಲಾಖೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ತಂಬಾಕು ಮುಕ್ತ ಪರಿಕಲ್ಪನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 15 ದಿನಗಳೊಳಗೆ ಚಾಲನೆ ಸಿಗುವ ಸಾಧ್ಯತೆಯಿದೆ.
 - ಡಾ| ರಾಜೇಶ್‌, ಜಿಲ್ಲಾ ತಂಬಾಕು
    ನಿಯಂತ್ರಣ ಕೋಶ, ಅಧಿಕಾರಿ

ಬಸ್‌ನಿರ್ವಾಹಕರಿಂದ ದಂಡ ವಸೂಲಿ
ತಂಬಾಕು ಮುಕ್ತ ನಗರದಡಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವ್ಯಾಪ್ತಿಯನ್ನು ಸನ್ನದ್ಧಗೊಳಿಸಲಾಗುತ್ತಿದೆ. ಇದೀಗ ಪ್ರಾರಂಭಿಕ ಅರಿವು ಕಾರ್ಯ ಕ್ರಮ ನಡೆಯುತ್ತಿದೆ. ಮುಂದೆ ಎಲ್ಲ ಬಸ್‌ ಗಳಲ್ಲೂ ಇದನ್ನು ಜಾರಿಗೊಳಿಸಲಾಗುವುದು. ಬಸ್‌ ಗಳಲ್ಲಿ ಸಿಗರೇಟು ಸೇದುವುದು ಅಥವಾ ತಂಬಾಕು ಜಗಿಯುವ ಪ್ರಕರಣಗಳು ಕಂಡು ಬಂದರೆ ಆಯಾ ಬಸ್‌ನ ನಿರ್ವಾಹಕರೇ ಸಂಬಂಧಪಟ್ಟವರ ಮೇಲೆ ದಂಡವಿಧಿಸಲು ಸೂಚಿಸಲಾಗುವುದು.
– ದೀಪಕ್‌ ಕುಮಾರ್‌, ಕೆಎಸ್‌ಆರ್‌ಟಿಸಿ
ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next