ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವ ಏಕೈಕ ದೊಡ್ಡ ಮಾಂಸಹಾರಿ ಪ್ರಾಣಿ. ಮಾನವ – ವನ್ಯ ಜೀವಿಗಳ ಸಂಘರ್ಷ, ಬೇಟೆ, ಆವಾಸಸ್ಥಾನದ ನಾಶದಿಂದಾಗಿ ಈ ಸಂತತಿ ದೇಶದಿಂದ ಮರೆಯಾಗಿತ್ತು. ಭಾರತ ಸರ್ಕಾರವು ದೇಶದಲ್ಲಿ ಚೀತಾ ಸಂತತಿ ಸಂಪೂರ್ಣವಾಗಿ ನಾಶವಾಗಿದೆ ಎಂದು 1952ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿತ್ತು.
ಭಾರತದ ನೆಲದಿಂದ ಕಣ್ಮರೆಯಾಗಿದ್ದ ಚೀತಾಗಳು ಸುಮಾರು 70 ವರ್ಷಗಳ ಬಳಿಕ ಭಾರತದಲ್ಲಿ ಚೀತಾಗಳು ಹೆಜ್ಜೆಯಿಟ್ಟಿವೆ. ಮಧ್ಯ ಪ್ರದೇಶದ ಕುನೋ ಅರಣ್ಯ ಪ್ರದೇಶದಲ್ಲಿ ಈ ಚೀತಾಗಳ ಸಾಮ್ರಾಜ್ಯ ಆರಂಭವಾಗಿದೆ. ಸೆ. 17 ನೈಜೀರಿಯಾದಿಂದ ಎಂಟು ಚೀತಾಗಳನ್ನು ವಿಶೇಷ ವಿಮಾನ ಮೂಲಕ ತಂದು, ಕುನೋ ಅರಣ್ಯದಲ್ಲಿ ಬಿಡಲಾಗಿದೆ.
ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಸ್ಥಳಾಂತರ ಮಾಡಿದ ವಿಧಾನವನ್ನು ಕೊಂಡಾಡಿದ್ದಾರೆ. ಹಲವು ಮಾಧ್ಯಮಗಳು ಈ ಯೋಜನೆಗಾಗಿ ಬಳಸಿದ ವಿಶೇಷ ವಿಮಾನವೆಂದು ಹುಲಿಯ ಮುಖದ ಚಿತ್ರ ಬಿಡಿಸಿರುವ ವಿಮಾನದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಯೋಜನೆಗಾಗಿ ಭಾರತೀಯ ವಿಮಾನಕ್ಕೆ ಚಿರತೆಯ ಚಿತ್ರವನ್ನು ಬಿಡಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಬಳಸಲಾಗುತ್ತಿರುವ ವಿಮಾನದ ಮೂಗಿನ ಮೇಲಿನ ಚಿತ್ರದಲ್ಲಿ ಕಾಣುವುದು ಹುಲಿ ಹೊರತು ಚಿರತೆಯಲ್ಲ. ವಿಮಾನವು ಭಾರತೀಯ ಒಡೆತನ ಹೊಂದಿಲ್ಲ ಮತ್ತು ಈ ಸಂದರ್ಭಕ್ಕಾಗಿ ವಿಶೇಷವಾಗಿ ಬಣ್ಣ ಬಳಿಯಲಾಗಿಲ್ಲ ಎಂದು newschecker.in ಸತ್ಯ ಪರಿಶೋಧನೆ ವೇಳೆ ಕಂಡು ಬಂದಿದೆ.
ಚಿರತೆ ತರಲು ಹುಲಿಯ ಚಿತ್ರವನ್ನು ಏಕೆ ಚಿತ್ರಿಸಿದ್ದಾರೆ ಎಂಬ ಅನುಮಾನವು ಈ ಚಿತ್ರದ ಹಿಂದಿರುವ ಸತ್ಯಾಂಶವನ್ನು ಬಹಿರಂಗಪಡಿಸಿದೆ. ಅಲ್ಲದೇ ಈ ವಿಮಾನದ ಚಿತ್ರವು 2015 ರಲ್ಲೇ ಸೈಬೀರಿಯನ್ ಟೈಮ್ಸ್ , ದಿ ಡೈಲಿ ಮೇಲ್ ಮೊದಲಾದ ಮಾಧ್ಯಮಗಳು 2015 ರಲ್ಲಿ ಮಾಡಿರುವ ವರದಿಯಲ್ಲಿ ಈಗ ವೈರಲ್ ಆಗುತ್ತಿರುವ ( ಹುಲಿ ಮೂತಿಯ ) ವಿಮಾನದ ಚಿತ್ರವು ಕಂಡುಬಂದಿದೆ.
ರಷ್ಯಾದ ವಾಹಕ ಟ್ರಾನ್ಸರೋ ಜೂನ್ 2015 ರಲ್ಲಿ ತನ್ನ ದೀರ್ಘ ಪ್ರಯಾಣದ ಬೋಯಿಂಗ್ 747-400 ವಿಮಾನಗಳಲ್ಲಿ ಹುಲಿ ಮುಖವನ್ನು ಒಳಗೊಂಡ ವಿಶಿಷ್ಟ ವಿನ್ಯಾಸವನ್ನು ಅನಾವರಣಗೊಳಿಸಿದೆ ಎಂದು ವರದಿ ಹೇಳಿದೆ. ಅಮುರ್ ಟೈಗರ್ ಕೇಂದ್ರದ ಸಂರಕ್ಷಣಾ ಕಾರ್ಯವನ್ನು ಉತ್ತೇಜಿಸಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಕೇರಿಂಗ್ ದಿ ಟೈಗರ್ಸ್ ಟುಗೆದರ್‌ಗಾಗಿ ಜೂನ್ 2015 ರಲ್ಲಿ ವಿಮಾನವನ್ನು ವಿಶೇಷ ಬಣ್ಣಗಳಿಂದ ಚಿತ್ರಿಸಲಾಗಿದೆ ಎಂದು ಟೆರಾ ಏವಿಯಾ ವೆಬ್‌ಸೈಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾಗಿ , ಈ ವಿಮಾನವನ್ನು ಚೀತಾಗಳನ್ನು ಕರೆತರಲು ಭಾರತ ಸರ್ಕಾರ ತಯಾರಿಸಿಲ್ಲವೆಂದು ಸಾಬೀತಾಗಿದೆ ಎಂದು newschecker.in ನಡೆಸಿದ ಸತ್ಯ ಪರಿಶೋಧನೆಯಲ್ಲಿ ತಿಳಿದುಬಂದಿದೆ.