ಪಣಜಿ: ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೋಪಾ ಮತ್ತು ಹತ್ತಿರದ ಹಳ್ಳಿಗಳಲ್ಲಿ ಉತ್ತರ ಗೋವಾ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.
ಈ ಆದೇಶದಡಿಯಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚು ನಾಗರಿಕರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ. ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉತ್ತರ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದ ಪ್ರಕಾರ, ಮೋಪಾ ವಿಮಾನ ನಿಲ್ದಾಣ ವ್ಯಾಪ್ತಿಯ ಮೋಪಾ, ವಾಖರ್ಂಡ್, ನಾಗಝಾರ್ ಮತ್ತು ಚಂದೇಲ್ ಗ್ರಾಮಗಳಲ್ಲಿ ಮೆರವಣಿಗೆಗಳು, ಬಂದೂಕುಗಳು, ಕೋಲುಗಳು ಮತ್ತು ಇತರ ಆಯುಧಗಳನ್ನು ಒಯ್ಯುವುದು, ಧ್ವನಿವರ್ಧಕಗಳ ಬಳಕೆ, ಘೋಷಣೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.
ಕರ್ತವ್ಯ ಮತ್ತು ಪೂರ್ವಾನುಮತಿ ಪಡೆದಿರುವ ಮದುವೆ ಅಥವಾ ಅಂತ್ಯಕ್ರಿಯೆ ಅಥವಾ ಕಾರ್ಯಕ್ರಮಗಳಿಗೆ ಸಾರ್ವಜನಿಕ ಸೇವಕರಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಆದೇಶಗಳು ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತವೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕರು ಮತ್ತು ಗ್ರಾಮಸ್ಥರಿಂದ ಆಂದೋಲನ ಸಾಧ್ಯತೆಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಉತ್ತರ ಗೋವಾ ಪೋಲಿಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಮೋಪಾ, ವಾಖರ್ಂಡ್, ನಾಗ್ಜರ್ ಮತ್ತು ಚಂದೇಲ್ ಗ್ರಾಮಗಳ ಜನರು ಪ್ರತಿಭಟಿಸುವ ಸಾಧ್ಯತೆ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.