ಹೊಸದಿಲ್ಲಿ/ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಮಂಗಳವಾರ ರಾತ್ರಿ ನಡೆದ ತೀವ್ರ ಸ್ವರೂಪದ ಹಿಂಸಾಚಾರ ಹಾಗೂ ತದನಂತರದ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣ ಆಯೋಗ, ಇದೇ ಮೊದಲ ಬಾರಿಗೆ ಸಂವಿಧಾನದ 324ನೇ ವಿಧಿಯನ್ನು ಜಾರಿಗೊಳಿಸಿದೆ. ಅದರಂತೆ, ಪಶ್ಚಿಮ ಬಂಗಾಲದಲ್ಲಿ ಕೊನೆಯ ಹಂತದ ಮತದಾನ ಎದುರಿಸಲಿರುವ 9 ಕ್ಷೇತ್ರಗಳಲ್ಲಿ ಗುರುವಾರ ರಾತ್ರಿ 10 ಗಂಟೆಯೊಳಗಾಗಿ ಚುನಾವಣ ಪ್ರಚಾರ ಅಂತ್ಯಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.
ಮೇ 19ರಂದು ಈ ಎಲ್ಲ 9 ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಸಾಮಾನ್ಯ ನಿಯಮದ ಪ್ರಕಾರ, ಶುಕ್ರವಾರ ಸಂಜೆವರೆಗೆ ಬಹಿರಂಗ ಪ್ರಚಾರಕ್ಕೆ ಅವಕಾಶವಿತ್ತು. ಆದರೆ ಸದ್ಯದ ಪರಿಸ್ಥಿತಿ ತೀರಾ ಹದಗೆಟ್ಟಿರುವುದನ್ನು ಗಣನೆಗೆ ತೆಗೆದುಕೊಂಡು ಒಂದು ದಿನ ಮುಂಚಿತವಾಗಿಯೇ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಚುನಾವಣ ಆಯೋಗದ ಅಧಿಕಾರಿಗಳು, “ಮಂಗಳವಾರದ ಹಿಂಸಾಚಾರದ ವೇಳೆ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ಕಳವಳಕಾರಿ. ಆದಷ್ಟು ಬೇಗನೆ ತಪ್ಪಿತಸ್ಥರನ್ನು ಪೊಲೀಸರು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆಯಿದೆ. ಈ ಬೆಳವಣಿಗೆಗಳನ್ನು ಮನಗಂಡು ನಾವು ಇದೇ ಮೊದಲ ಬಾರಿಗೆ ಸಂವಿಧಾನದ 324ನೇ ವಿಧಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಶಾಂತಿಯುತ ಮತದಾನಕ್ಕೆ ಸಮಸ್ಯೆ ಉಂಟುಮಾಡುವಂಥ ಘಟನೆಗಳು ಮುಂದುವರಿದರೆ ಇಂತಹ ಕ್ರಮಗಳೂ ಮುಂದುವರಿಯಬೇಕಾಗುತ್ತವೆ’ ಎಂದು ಹೇಳಿದ್ದಾರೆ.
ಪ.ಬಂಗಾಲದ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ (ಸಿಐಡಿ) ರಾಜೀವ್ ಕುಮಾರ್ ಹಾಗೂ ಪ್ರಧಾನ ಗೃಹ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯರನ್ನು ಚುನಾವಣ ಕರ್ತವ್ಯದಿಂದ ಆಯೋಗ ವಜಾ ಮಾಡಿದೆ. ಚುನಾವಣ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಇವರ ಮೇಲಿದೆ. ಚುನಾವಣ ಆಯೋಗದ ದೀರ್ಘ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.