Advertisement
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿ ಸಿದ ಮಸೂದೆಗೆ ಸದನ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದೆ. ಬಹುಕಾಲದಿಂದ ವಕೀಲರು ಸಲ್ಲಿಸಿದ್ದ ಮನವಿಗೆ ಈ ಮೂಲಕ ಸರಕಾರ ಮನ್ನಣೆ ನೀಡಿದೆ. ನ್ಯಾಯ ವಾದಿಗಳು ಯಾವುದೇ ಭಯ ಅಥವಾ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ತಮ್ಮ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ. ಹಲ್ಲೆಗೊಳಗಾದ ನ್ಯಾಯವಾದಿಗಳಿಗೆ ವಕೀಲರ ಕಲ್ಯಾಣ ನಿಧಿಯಿಂದ ನ್ಯಾಯಾಲಯ ನಿಗದಿ ಮಾಡಿದ ಹಣವನ್ನು ಪರಿಹಾರವಾಗಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪಾಟೀಲ್ ವಿವರಿಸಿದರು. ಇದರ ಜತೆಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಮಸೂದೆ, ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಗೂ ಸದನ ಒಪ್ಪಿಗೆ ನೀಡಿದೆ.
ಈ ಕಾಯ್ದೆ ಪ್ರಕಾರ ವಕೀಲರ ಮೇಲೆ ಹಲ್ಲೆ ನಡೆಸುವುದನ್ನು ಜಾಮೀನುರಹಿತ ಪ್ರಕರಣ ಎಂದು ಪರಿಗಣನೆ. ಹಲ್ಲೆ ಆರೋಪ ಸಾಬೀತಾದರೆ ಆರೋಪಿಗೆ 6 ತಿಂಗಳಿಂದ 3 ವರ್ಷಗಳ ವರೆಗಿನ ಕಾರಾಗೃಹ ವಾಸ, 1 ಲಕ್ಷ ರೂ. ದಂಡ.ಅಪರಾಧ ಸಂದರ್ಭದಲ್ಲಿ ನ್ಯಾಯವಾದಿಯನ್ನು ಪೊಲೀಸರು ಬಂಧಿಸಿದರೆ 24 ಗಂಟೆಯೊಳಗಾಗಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಚಾರ ತಿಳಿಸಬೇಕು. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಡಿಮೆ ಇಲ್ಲದ ನ್ಯಾಯಾಲಯದ ಮೂಲಕ ವಿಚಾರಣೆ.