ತುಮಕೂರು: ಕೋವಿಡ್ 19 ವೈರಸ್ ಸೋಂಕು ಹರಡದಂತೆ ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 4 ರಿಂದ 17ರವರೆಗೆ ಜಿಲ್ಲಾದ್ಯಂತ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕ ಸಾರಿಗೆ ಸಂಪರ್ಕ, ಧಾರ್ಮಿಕ ಕೇಂದ್ರ, ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಪೂಜಾ ಕೈಂಕರ್ಯ ಹೊರತುಪಡಿಸಿ ಎಲ್ಲಾ ಸಾಮೂಹಿಕ ಸೇವೆ, ಜಿಲ್ಲೆಯಲ್ಲಿ ನಡೆಯುವ ಜಾತ್ರೆ, ಉತ್ಸವ, ಸಂತೆ ಮತ್ತಿತರ ಜನಸಂದಣಿ ಸೇರುವಂತಹ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ನಿಷೇಧಾಜ್ಞೆಯನ್ವಯ ರಸ್ತೆ ಬದಿ ಅಥವಾ ಇನ್ನಿತರ ಸಾರ್ವಜನಿಕ ಪ್ರದೇಶದ ತೆರೆದ ಸ್ಥಳಗಳಲ್ಲಿ ಯಾವುದೇ ತರಹದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ದೇವರ ಸೇವೆ ರೂಪದಲ್ಲಿ ನಡೆಸುವ ಸಾಮೂಹಿಕ ಭೋಜನ ಕಾರ್ಯಕ್ರಮವನ್ನು ಸಹ ರದ್ದುಪಡಿಸಲಾಗಿದೆ. ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಬರುವ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧ ಗೊಳಿಸಲಾಗಿದೆ.
ಆಸ್ಪತ್ರೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸಂಸ್ಥೆ, ತಯಾರಿಕಾ ಮತ್ತು ವಿತರಣಾ ಘಟಕ, ಖಾಸಗಿ ಮತ್ತು ಸಾರ್ವಜನಿಕ ವಲಯಗಳು, ಔಷಧಾಲಯಗಳು, ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ಪೂರೈಸುವ ಮಳಿಗೆ, ಪ್ರಯೋಗಾಲಯ, ನರ್ಸಿಂಗ್ ಹೋಂ, ಆ್ಯಂಬುಲೆನ್ಸ್, ಪಶುಚಿಕಿತ್ಸಾಲಯ, ಜನೌಷಧಿಕೇಂದ್ರ, ಸಂಶೋಧನಾ ಪ್ರಯೋಗಾಲಯಗಳ ಸೇವೆಗಳು ಮುಂದುವರಿಯುತ್ತವೆ. ಆಹಾರ ಮಳಿಗೆ ಸೇರಿದಂತೆ ದಿನಸಿ ಅಂಗಡಿ, ಹಣ್ಣು ಮತ್ತು ತರಕಾರಿ, ಹಾಲು ಮತ್ತು ಡೇರಿ ಉತ್ಪನ್ನ ಮಾರಾಟ ಮಳಿಗೆ, ಮಾಂಸ ಮತ್ತು ಮೀನಿನ ಆಹಾರ ಮಾರಾಟದ ಅಂಗಡಿ, ಪೆಟ್ರೋಲ್ ಬಂಕ್‌ಗಳನ್ನು ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದೇಶ ಉಲ್ಲಂಘಿಸಿದವವರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.