Advertisement

China ದ ಷಡ್ಯಂತ್ರಕ್ಕೆ ಭಾರತದಿಂದ ನಿಷೇಧ ಅಸ್ತ್ರ

11:30 PM Aug 09, 2023 | Team Udayavani |

ದೇಶದ ಸೇನಾಪಡೆಗಳಿಗೆಂದೇ ತಯಾರಿಸಲಾಗುವ ಡ್ರೋನ್‌ಗಳಲ್ಲಿ ಚೀನದ ಬಿಡಿಭಾಗಗಳ ಬಳಕೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಭದ್ರತ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸರಕಾರ ಈ ಆದೇಶ ಹೊರಡಿಸಿದ್ದು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ.

Advertisement

ಗಡಿಯಲ್ಲಿ ನಿರಂತರವಾಗಿ ಸುಖಾಸುಮ್ಮನೆ ಕ್ಯಾತೆ ತೆಗೆಯುತ್ತಲೇ ಬಂದಿರುವ ಚೀನ ಸೇನೆ ಭಾರತದ ವಿರುದ್ಧ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕತ್ತಿ ಮಸೆಯುತ್ತಲೇ ಬಂದಿದೆ. ಭಾರತದ ಕಾರ್ಯತಂತ್ರ, ಗೂಢಚರ್ಯೆ ಸಹಿತ ರಕ್ಷಣ ಸಾಮರ್ಥ್ಯದ ಮಾಹಿತಿಗಳನ್ನು ಒಂದಲ್ಲ ಒಂದು ತೆರನಾಗಿ ಕಲೆಹಾಕಲು ಚೀನ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದ ಸೇನಾಪಡೆಗಳಿಗಾಗಿ ತಯಾರಿಸಲಾಗುವ ಡ್ರೋನ್‌ಗಳಲ್ಲಿ ಚೀನದಿಂದ ಆಮದು ಮಾಡಿಕೊಳ್ಳಲಾದ ಬಿಡಿಭಾಗಗಳನ್ನು ಬಳಸದಿರುವಂತೆ ಡ್ರೋನ್‌ ತಯಾರಿಕ ಕಂಪೆನಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ಸೇನಾ ಡ್ರೋನ್‌ಗಳಲ್ಲಿ ಚೀನದ ಬಿಡಿಭಾಗಗಳನ್ನು ಬಳಸಿದಲ್ಲಿ ದೇಶದ ಪ್ರಮುಖ ಸೇನಾನೆಲೆ, ಗಡಿಯಲ್ಲಿ ಸೇನಾ ನಿಯೋಜನೆ ಆದಿಯಾಗಿ ದೇಶದ ಭದ್ರತೆಗೆ ಸಂಬಂಧಿಸಿದ ವ್ಯೂಹಾತ್ಮಕ ಕಾರ್ಯತಂತ್ರಗಳ ಸಹಿತ ಸೂಕ್ಷ್ಮವಿಚಾರಗಳು ಸೋರಿಕೆಯಾಗಿ, ಚೀನ ಈ ಮಾಹಿತಿಗಳನ್ನು ದುರುಪ ಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆ ಮತ್ತು ಅರುಣಾಚಲ ಪ್ರದೇಶ ವಿಚಾರದಲ್ಲಿ ಪದೇಪದೆ ತಕರಾರು ತೆಗೆಯುವ ಮೂಲಕ ಚೀನ, ಭಾರತದ ಮೇಲೆ ತನ್ನ ದಬ್ಟಾಳಿಕೆಯನ್ನು ಪ್ರದರ್ಶಿಸುವ ಪ್ರಯತ್ನ ನಡೆಸುತ್ತಲೇ ಬಂದಿದೆ. 2020ರ ಜೂನ್‌ನಲ್ಲಿ ಚೀನ ಸೇನೆ ಮತ್ತು ಭಾರತೀಯ ಸೇನೆ ನಡುವೆ ಎಲ್‌ಒಸಿಯ ಗಾಲ್ವಾನ್‌ನಲ್ಲಿ ಸಂಘರ್ಷ ಸಂಭವಿಸಿದ ಬಳಿಕ ಕೇಂದ್ರ ಸರಕಾರ ಚೀನದ ವಿರುದ್ಧ ಕಠಿನ ನಿಲುವನ್ನು ತಾಳಿದೆ. ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಪಡೆಗಳನ್ನು ನಿಯೋಜಿಸುವುದರ ಜತೆಯಲ್ಲಿ ಗಡಿಭಾಗದ ತನ್ನ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ. ಅಷ್ಟು ಮಾತ್ರವಲ್ಲದೆ ಭಾರತೀಯ ಯೋಧರ ಸುರಕ್ಷೆಗೂ ಹೆಚ್ಚಿನ ಆದ್ಯತೆ ನೀಡಿದೆ.

ಇದೇ ವೇಳೆ ಭಾರತ ಸರಕಾರ, ಚೀನದೊಂದಿಗಿನ ವಾಣಿಜ್ಯ ಚಟು ವಟಿಕೆಗಳ ಮೇಲೂ ಕೆಲವು ನಿರ್ಬಂಧ, ನಿಯಂತ್ರಣಗಳನ್ನು ಹೇರುವ ಮೂಲಕ ಆರ್ಥಿಕವಾಗಿ ಆ ದೇಶಕ್ಕೆ ಹೊಡೆತ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರಕಾರ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಪರ್ಸನಲ್‌ ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್‌ ಸಾಧನಗಳ ಆಮದಿಗೆ ನಿಷೇಧ ಹೇರಿತ್ತಾದರೂ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇವುಗಳ ಲಭ್ಯತೆ ಇಲ್ಲದಿರುವುದರಿಂದ ತನ್ನ ಈ ಕಠಿನ ನಿಲುವನ್ನು ಕೊಂಚ ಸಡಿಲಿಸಿ ಷರತ್ತುಬದ್ಧ ಆಮದಿಗೆ ತನ್ನ ಒಪ್ಪಿಗೆ ಸೂಚಿಸಿತ್ತು. ಈ ಸಾಧನಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಮತ್ತು ಭದ್ರತಾ ಕಾರಣಗಳಿಗಾಗಿಯೇ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

Advertisement

ಚೀನದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಈ ಎಲೆಕ್ಟ್ರಾನಿಕ್‌ ಸಾಧನಗಳು ಆಮದಾ ಗುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಇಂತಹ ನಿರ್ಧಾರವನ್ನು ಕೈಗೊಂಡಿತ್ತು.

ಭಾರತದ ವಿರುದ್ಧದ ತನ್ನ ಷಡ್ಯಂತ್ರದ ಭಾಗವಾಗಿ ಭಾರತದಲ್ಲಿನ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನೆಗೆ, ಪ್ರತ್ಯೇಕತಾವಾದ ಹೋರಾ ಟಗಳಿಗೆ ಹಣಕಾಸು ನೆರವು ನೀಡುವ ಕಾರ್ಯದಲ್ಲೂ ಚೀನ ನಿರತವಾಗಿದೆ. ಚೀನದ ಈ ಎಲ್ಲ ಕುಟಿಲ ರಣತಂತ್ರಗಳನ್ನು ಭೇದಿಸಿ, ಸೂಕ್ತ ಪ್ರತ್ಯುತ್ತರವನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಅಷ್ಟು ಮಾತ್ರವಲ್ಲದೆ ಚೀನದ ಉತ್ಪನ್ನಗಳ ಆಮದಿಗೆ ನಿರ್ಬಂಧಗಳನ್ನು ಹೇರುವ ಮೂಲಕ ಅದರ ಆರ್ಥಿಕತೆಗೆ ಹೊಡೆತ ನೀಡುವ ಚಾಣಾಕ್ಷ ನಡೆಯನ್ನು ಭಾರತ ಅನುಸರಿಸುತ್ತ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next