Advertisement
ಮಹಾನಗರ: “ಜನಸಾಮಾನ್ಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಮೊದಲ ಆದ್ಯತೆ. ಜತೆಗೆ, ತೆರಿಗೆ ವಂಚನೆ, ನೀರಿನ ಅಕ್ರಮ ಸಂಪರ್ಕ ಸಹಿತ ಪಾಲಿಕೆಯಲ್ಲಿ ಆದಾಯ ಸೋರಿಕೆ ತಡೆಗಟ್ಟಲು ಯಾವುದೇ ಒತ್ತಡಗಳಿಗೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’
ಹೊಸ ಆಡಳಿತ, ಜನಪ್ರತಿನಿಧಿಗಳ ಅಧಿಕಾರ ಆರಂಭವಾಗುವ ಮೊದಲೇ ಏಕಾಏಕಿಯಾಗಿ 5 ವರ್ಷಗಳ ಅನಂತರ ಒಂದೇ ಬಾರಿಗೆ ನೀರಿನ ಬಿಲ್ ಏರಿಸಲಾಗಿತ್ತು. 4 ತಿಂಗಳುಗಳ ಬಿಲ್‌ನ್ನು ಕೂಡ ಒಟ್ಟಿಗೆ ಕಳುಹಿಸಲಾಗಿತ್ತು. ಇದು ಜನಸಾಮಾ ನ್ಯರಿಗೆ ಭಾರೀ ಹೊರೆಯಾಯಿ ತು. ಅಲ್ಲದೆ ಈ ಹಿಂದೆ ಇದ್ದ 25 ಸಾವಿರ ಲೀಟರ್ ಮಿತಿಯನ್ನು 8 ಸಾವಿರಕ್ಕೆ ಇಳಿಸ ಲಾಯಿತು. ಅಧಿಕಾರ ವಹಿಸಿಕೊಂಡ ಕೂಡಲೇ ನೀಡಿರುವ ಭರವಸೆಯಂತೆ ಶೀಘ್ರವೇ ನೀರಿನ ಶುಲ್ಕ ಇಳಿಸಿ ಮಿತಿಯನ್ನು 15 ಸಾವಿರ ಲೀಟರ್‌ಗೆ ಹೆಚ್ಚಿಸಲಾಗುವುದು ಎಂದರು.
Related Articles
ತುಂಬೆಯಿಂದ ಮಂಗಳೂರುವರೆಗೂ ಹಲವೆಡೆ ನೀರಿನ ಅಕ್ರಮ ಸಂಪರ್ಕಗಳು ಇರುವುದು ತಿಳಿದಿದೆ. ನಗರದಲ್ಲೂ ಅಕ್ರಮ ಸಂಪರ್ಕಗಳಿವೆ. ಕೆಲವರು ತೋಟಗಳಿಗೂ ಇದೇ ನೀರು ಬಳಸುತ್ತಿದ್ದಾರೆ. ಗ್ರಾ.ಪಂ.ಗಳಿಗೆ ಪ್ರತ್ಯೇಕ ನೀರು ಸಂಪರ್ಕ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ. ನಗರಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆಗೆ ಸಮೀಕ್ಷೆ ನಡೆಯುತ್ತಿದೆ. 3 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಇದಕ್ಕೆ ಜನರು, ಜನಪ್ರತಿನಿಧಿಗಳ ಸಹಕಾರ ಬೇಕು.
Advertisement
ನೀರು ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಪೂರೈಕೆ ಸಾಮರ್ಥ್ಯ ಹಿಂದಿನಷ್ಟೇ ಇದೆ. ಪ್ರಸ್ತುತ ಕೆಲವು ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಸಮರ್ಪಕವಾಗಿಲ್ಲ. ಬೇಸಗೆಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅಂಥ ಪ್ರದೇಶಗಳಿಗೆ ಕನಿಷ್ಠ 2 ಗಂಟೆ ಯಾದರೂ ಪ್ರಶರ್‌ನಲ್ಲಿ ನೀರು ಒದಗಿಸಲು ಈ ಬಾರಿ ಹೆಚ್ಚಿನ ಗಮನಹರಿಸಿ, ಕ್ರಮ ಕೈಗೊಳ್ಳುತ್ತೇವೆ. ಅಡ್ಯಾರ್, ಗರೋಡಿಯಲ್ಲಿ ನೀರಿನ ಸೋರಿಕೆಯನ್ನು ಈಗಾಗಲೇ ತಡೆದಿದ್ದು, ಇತರೆಡೆಗಳಲ್ಲೂ ತಡೆಗೆ ಸೂಚನೆ ನೀಡಿದ್ದೇನೆ.
ನೀರು ರೇಶನಿಂಗ್ ಇಲ್ಲಕಳೆದ ಬೇಸಗೆಗೆ ಹೋಲಿಸಿದರೆ ಈ ಬಾರಿ ನಗರದಲ್ಲಿ ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ತುಂಬೆಯಲ್ಲಿ ಕಳೆದ ಬಾರಿ ಈ ವೇಳೆಗೆ ನೀರಿನ ಮಟ್ಟ 5.73 ಮೀಟರ್ ಇತ್ತು. ಈ ಬಾರಿ 6.01 ಮೀಟರ್ ಇದೆ. ನೀರಿನ ಒಳಹರಿವು ಇನ್ನೂ ಇದೆ. ಹೀಗಾಗಿ ನೀರು ರೇಶನಿಂಗ್ ಇರದು. ಜತೆಗೆ ನೀರಿನ ಲಭ್ಯತೆ ಸಮಸ್ಯೆ ಎದುರಾಗದಂತೆ ನಿಗಾ ವಹಿಸಲಾಗುತ್ತಿದೆ. ಮಳೆಗಾಲಕ್ಕೆ ಸಿದ್ಧತೆ
ಮಳೆಗಾಲದಲ್ಲಿ ನಗರದ ಹಲವೆಡೆ ಕೃತಕ ನೆರೆ ಉಂಟಾಗುತ್ತಿದೆ. ಅಸಮರ್ಪಕ ಚರಂಡಿ ಇದಕ್ಕೆ ಕಾರಣ. ಪ್ರಮುಖ ಚರಂಡಿಗಳ ಹೂಳೆತ್ತುವ ಕಾರ್ಯ ಎಪ್ರಿಲ್. 10 ರಿಂದ ಆರಂಭಗೊಳ್ಳಲಿದೆ. ಪ್ರತಿ ಬಾರಿಯೂ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಚರಂಡಿ ದುರಸ್ತಿ -ರಾಜ ಕಾಲುವೆ ಸ್ವತ್ಛಗೊಳಿಸಿರುವುದಾಗಿ ಹೇಳಿದರೂ ಕೃತಕ ನೆರೆ ಸಮಸ್ಯೆ ಕಂಡುಬರುತ್ತಿದೆ. ಈ ಬಾರಿ ಗುತ್ತಿಗೆದಾರರು ಚರಂಡಿ ಸ್ವತ್ಛತೆ ಕಾಮಗಾರಿ ಪೂರ್ಣಗೊಳಿಸಿದ ಕೂಡಲೇ ಪಾಲಿಕೆ ಅಧಿಕಾರಿಗಳು ಜತೆ ಪರಿಶೀಲನೆ ನಡೆಸಲಾಗುವುದು. ಜನ-ಜನಪ್ರತಿನಿಧಿಗಳ ನಿಗಾ
ಕೆಲವು ಕಡೆ ಕಾಮಗಾರಿಗಳ ಬಗ್ಗೆ ಸ್ಥಳೀಯರು, ಕಾರ್ಪೊರೇಟರ್‌ಗಳಿಗೂ ಮಾಹಿತಿ ಇರದು. ಇದು ಅಸಮರ್ಪಕ ಕಾಮಗಾರಿ, ಭ್ರಷ್ಟಾಚಾರಕ್ಕೂ ಅವಕಾಶ ನೀಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಮಗಾರಿ ನಡೆಸುವಾಗ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಪೊರೇಟರ್‌ಗಳು, ಸ್ಥಳೀಯರಿಗೆ ಮಾಹಿತಿ ನೀಡಲು ಸೂಚಿಸಿದ್ದೇನೆ. ಆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಜನರು, ಕಾರ್ಪೊರೇಟರ್‌ಗಳು ನಿಗಾ ವಹಿಸಲಿದ್ದಾರೆ. ತ್ಯಾಜ್ಯ ಸಮಸ್ಯೆಗೆ ಪರಿಹಾರ
ತ್ಯಾಜ್ಯ ವಿಲೇವಾರಿ ಸಮರ್ಪಕವಾಗಲು ಆದ್ಯತೆ ನೀಡುತ್ತೇನೆ. ಪ್ರತಿ ವಸತಿ ಸಮುಚ್ಚಯಗಳು ತಮ್ಮಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ ಲಾಗುವುದು. ಪಚ್ಚನಾಡಿಯ ನಿರಾಶ್ರಿತರಿಗೆ ಬೇರೆಡೆ ಮನೆ ನಿರ್ಮಿಸಲು 8 ಕೋ.ರೂ. ಮಂಜೂರಾಗಿದೆ. ಒಂದು ವಾರ ದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ. ಜತೆಗೆ ತ್ಯಾಜ್ಯ ವಿಲೇವಾರಿಗೆ ವಿಪಕ್ಷದ ಸದಸ್ಯರು, ಪರಿಣತರು ಸಹಿತ ಎಲ್ಲರೊಂದಿಗೆ ವಿಶೇಷ ಸಭೆ ನಡೆಸಿ ಶಾಶ್ವತವಾದ ಪರಿಸರ ಸ್ನೇಹಿ ಯೋಜನೆ ಅಳವಡಿಸಲು ಚಿಂತಿಸಲಾಗುವುದು. ನಿತ್ಯ 2-3 ವಾರ್ಡ್‌ಗಳಿಗೆ ಭೇಟಿ
ಜನರು ತುರ್ತಾಗಿ, ತೀರಾ ಅಗತ್ಯಗಳಿಗೆ ಜನಪ್ರತಿನಿಧಿ ಗಳನ್ನು ಸಂಪರ್ಕಿಸುತ್ತಾರೆ. ಆಗ ಅವರಿಗೆ ಸ್ಪಂದಿಸುವುದು ಅತ್ಯಗತ್ಯ. ನಾನು ಜನರ ಸಮಸ್ಯೆಗಳನ್ನು ಸ್ವತಃ ಆಲಿಸಲು ನಿತ್ಯವೂ 2ರಿಂದ 3 ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದೇನೆ. ವಾರ್ಡ್ ಸಮಿತಿ ರಚನೆಗೂ ಆದ್ಯತೆ ನೀಡುವೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಲಾಗುವುದು. ವಿಪಕ್ಷ ಸಹಿತ ಎಲ್ಲ ಪಕ್ಷಗಳು, ಹಿರಿಯರು, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ರಹಿತವಾಗಿ ನಗರದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಸುಂದರೀಕರಣ, ಹಸುರೀಕರಣ
ಮಂಗಳೂರನ್ನು ಸಿಂಗಾಪುರ ಮಾಡುತ್ತೇವೆ, ಮೆಟ್ರೋದಂತಹ ಸೌಲಭ್ಯ ಕೊಡುತ್ತೇವೆ ಎಂದು ಈಗ ಹೇಳುವುದಿಲ್ಲ. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಜತೆಗೆ ಮೂಲಸೌಕರ್ಯ ಒದಗಿಸಿ ನಗರದ ಸುಂದರೀಕರಣ, ಹಸುರೀಕರಣಕ್ಕೂ ಗಮನ ನೀಡುತ್ತೇವೆ.
“ಕುಡಿಯುವ ನೀರು, ಸಮರ್ಪಕ ಒಳಚರಂಡಿ ಮೊದ ಲಾದವುಗಳನ್ನು ಒದಗಿಸಿಕೊಡುವುದು ಅತ್ಯಗತ್ಯ. ಶಾಸಕರು ಸಹಿತ ಜನಪ್ರತಿನಿಧಿಗಳು, ಜನರ ಸಲಹೆಯೊಂದಿಗೆ ಕಾರ್ಯಪ್ರವೃತ್ತ
ರಾಗುತ್ತೇವೆ’ ಎಂದರು ಉಪಮೇಯರ್ ವೇದಾವತಿ. ಸಮೀಕ್ಷೆಗೆ ಸಹಕರಿಸಿ: ಮನವಿ
ನಗರದ ಜನರಿಗೆ ಅಡೆ- ತಡೆಯಿಲ್ಲದೆ ನಿರಂತರ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಅನುಷ್ಠಾನ ಹಂತದಲ್ಲಿದೆ. ಇದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ. ಈ ಯೋಜನೆ ಮೂರು ವರ್ಷಗಳೊಳಗೆ ಕಾರ್ಯಗತಗೊಳಿಸಬೇಕಿದೆ. ಇದಕ್ಕಾಗಿ ಪಾಲಿಕೆ ವಿಶೇಷ ಮುತುವರ್ಜಿ ವಹಿಸಿದ್ದು, ಇದೀಗ ಎಲ್ಲೆಡೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಈಗಾಗಲೇ ಶೇ.50ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಸುರತ್ಕಲ್ ಸಹಿತ ಕೆಲವೊಂದು ಭಾಗದಲ್ಲಿ ನಾಗರಿಕರು ಸಮೀಕ್ಷೆಗೆ ಅಧಿಕಾರಿಗಳಿಗೆ ಸಹಕಾರ ನೀಡುತ್ತಿಲ್ಲ. ಇದು ಪೂರ್ಣಗೊಳಿಸಲು ತೊಡಕಾಗಿದ್ದು, ಸಮೀಕ್ಷೆಗೆ ಮನೆಗೆ ಬರುವ ಅಧಿಕಾರಿಗಳಿಗೆ ಜನರು ಪೂರ್ಣ ಸಹಕಾರ ನೀಡಬೇಕು ಎಂದು
ಮೇಯರ್ ಮನವಿ ಮಾಡಿದರು. ಮಧ್ಯವರ್ತಿಗಳ ಹಾವಳಿಗೆ ತಡೆ
ಮಧ್ಯವರ್ತಿಗಳ ಹಾವಳಿ ಪಾಲಿಕೆಯಲ್ಲಿಯೂ ಇದೆ. ಟ್ರೇಡ್ ಲೈಸನ್ಸ್, ಜನನ- ಮರಣ ನೋಂದಣಿ ವಿಭಾಗಗಳಲ್ಲಿ ಈ ಪಿಡುಗು ಜಾಸ್ತಿ ಇದೆ. ಈ ವಿಭಾಗಗಳಲ್ಲಿ ಅರ್ಜಿದಾರರೇ ನೇರವಾಗಿ ವ್ಯವಹರಿಸಿದರೆ ಪ್ರಮಾಣ ಪತ್ರ ನೀಡಲು ಸತಾಯಿಸಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆದರೆ ಮಧ್ಯವರ್ತಿಗಳ ಮೂಲಕ ಅರ್ಜಿದಾರರು ವ್ಯವಹರಿಸಿದರೆ ತತ್‌ಕ್ಷಣ ಕೆಲಸ ಆಗುತ್ತಿದೆ ಎಂದ ಮೇಯರ್, ಅಧಿಕಾರಿಗಳು ಈ ರೀತಿ ಮಾಡದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ತಪಾಸಣೆಗೆ ಒಳಪಡಿಸಿ ಆದಷ್ಟು ಶೀಘ್ರದಲ್ಲಿ ಪ್ರಮಾಣ ಪತ್ರ ವಿತರಿಸಲು ಸೂಚಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದರು. ಕೊರೊನಾ ತಡೆಗೆ ಕ್ರಮ
ಜಗತ್ತಿನಲ್ಲಿ ವ್ಯಾಪಿಸಿರುವ ಕೊರೊನಾ ವೈರಸ್ ಸೋಂಕು ನಗರದಲ್ಲಿ ಹರಡದಂತೆ ಪಾಲಿಕೆ ವತಿಯಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಾಲಿಕೆಯ ಆರೋಗ್ಯ ಅಧಿಕಾರಿ, ಸಿಬಂದಿ ಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಎಲ್ಲ ಕಾನೂನು ಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪಾಲಿಕೆ ಕೂಡ ಹೆಚ್ಚಿನ ಗಮನಹರಿಸುತ್ತಿದೆ ಎಂದು ಮೇಯರ್ ತಿಳಿಸಿದರು. ಸಮನ್ವಯ ಸಮಿತಿ ರಚನೆ
ನಗರದಲ್ಲಿ ಯಾವುದೇ ಸಿವಿಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಾಗ ವಿವಿಧ ಇಲಾಖೆಗಳ ಅನುಮತಿ ಪಡೆಯುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿ, ಆಡಳಿತದ ಮುಖ್ಯಸ್ಥರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗುವುದು ಎಂದು ಮೇಯರ್ ದಿವಾಕರ ತಿಳಿಸಿದರು. ಪೊಲೀಸ್, ರಾಷ್ಟ್ರೀಯ ಹೆದ್ದಾರಿ, ಮೆಸ್ಕಾಂ, ರೈಲ್ವೇ ಮತ್ತಿತರ ಇಲಾಖೆಗಳ ಮತ್ತು ಪಾಲಿಕೆಯ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ ಎಂದರು. “ಜನ-ದನಿ’ ಸಮಸ್ಯೆ
ಸ್ಪಂದನೆಗೆ ಅಧಿಕಾರಿ ನಿಯೋಜನೆ
ಸುದಿನದ “ಜನದನಿ’ಯಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಪ್ರತಿವಾರ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸುತ್ತಿರುವ ಕಾರ್ಯ ಶ್ಲಾಘನೀಯ. ಇಲ್ಲಿ ಸಾರ್ವಜನಿಕರಿಂದ ಬರುವ ಪ್ರತಿ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ ತುರ್ತು ಸ್ಪಂದನೆಗೆ ಕ್ರಮ ಕೈಗೊಳ್ಳಬೇಕು. ಏಕೆಂದರೆ, ನಮ್ಮ ಗಮನಕ್ಕೂ ಎಷ್ಟೋ ಸಮಸ್ಯೆಗಳು ಬಂದಿರುವುದಿಲ್ಲ. ಹೀಗಿರುವಾಗ, “ಜನ-ದನಿ’ ಅಂಕಣವು ಜನರ ಸಮಸ್ಯೆ-ದೂರುಗಳಿಗೆ ಸ್ಪಂದಿಸಲು ಇರುವ ಉತ್ತಮ ವೇದಿಕೆ. ಹೀಗಾಗಿ, “ಜನದನಿ’ಯಲ್ಲಿ ಪ್ರಕಟವಾಗುವ ಅಹವಾಲುಗಳಿಗೆ ಸ್ಪಂದಿಸಲು ವಾರದೊಳಗೆ ಓರ್ವ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ. ಓದುಗರ ಸಲಹೆ- ಸಮಸ್ಯೆಗಳಿಗೆ ಮೇಯರ್ ಸ್ಪಂದನೆ ಭರವಸೆ
ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಅನುಷ್ಠಾನ ಸಾಧ್ಯವಿಲ್ಲವೇ?
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ. ಅದರ ಸಂಪೂರ್ಣ ನಿಷೇಧದ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಆಗಾಗ ಧಾಳಿ ನಡೆಸಲಾಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಾಣಿಜ್ಯ ಸಂಸ್ಥೆಗಳ ನಕ್ಷೆಯಲ್ಲಷ್ಟೇ ಪಾರ್ಕಿಂಗ್ ಜಾಗ ಇರುತ್ತದೆಯೇ ಹೊರತು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿರುವುದಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ?
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ. ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಇದಕ್ಕೆ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುವುದು. ವಾಣಿಜ್ಯ ಸಂಸ್ಥೆಗಳಿಗೆ ಕಡ್ಡಾಯ ಪಾರ್ಕಿಂಗ್ ಸ್ಥಳ ಮಾಡಲು ಇರುವ ನಿಯಮವನ್ನು ಪರಿಣಾಮಕಾರಿಯಾಗಿ ರೂಪಿಸಲಾಗುವುದು. ನಗರದ ನಾಗರಿಕರ ಬಹುಮುಖ್ಯ ಬೇಡಿಕೆಯಾದ ವಾರ್ಡ್ ಸಮಿತಿ ರಚನೆ ಯಾವಾಗ?
ಪಾಲಿಕೆಯ ಬಹುತೇಕ ಸದಸ್ಯರು ಹೊಸಬರೇ ಆಗಿರುವುದರಿಂದ ಜನರ ಮೂಲ ಆದ್ಯತೆಗಳನ್ನು ಪರಿಹರಿಸುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಜನರ ಮುಖ್ಯ ಬೇಡಿಕೆಯಾದ ವಾರ್ಡ್ ಸಮಿತಿ ರಚನೆ ಬಗ್ಗೆ ಗಮನದಲ್ಲಿದೆ. ಈ ಬಗ್ಗೆ ಪಾಲಿಕೆಯ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ಚರ್ಚಿಸಲಾಗುವುದು. ನಗರದ ಸಮಸ್ಯೆಗಳನ್ನು ನೇರವಾಗಿ ಮೇಯರ್‌ಗೆ ತಲುಪಿಸಲು ವಾರ್ಡ್‌ಗಳಲ್ಲಿ ಮೇಯರ್ ಬಾಕ್ಸ್ ಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ. ನೀವೇನಂತೀರಿ?
ನಾನು ಪ್ರತೀ ದಿನ ನಗರದ ಐದು ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಈ ಹಿಂದೆ ನಿರ್ಧರಿಸಿದ್ದೆ. ವಾರ್ಡ್‌ಗಳಲ್ಲಿ ಹೆಚ್ಚಿನ ಸಮಸ್ಯೆ ಇರುವುದರಿಂದ ದಿನಕ್ಕೆ ಮೂರು ವಾರ್ಡ್ ಭೇಟಿ ಮಾಡುವ ನಿರ್ಧಾರ ಮಾಡುತ್ತಿದ್ದೇನೆ. ಯಾವ ವಾರ್ಡ್‌ಗೆ ಯಾವ ದಿನ ಬರುತ್ತೇನೆ ಎಂಬುವುದಾಗಿ ಸಾರ್ವಜನಿಕರಿಗೆ ತಿಳಿಸುವಂತೆ ಸ್ಥಳೀಯ ಕಾರ್ಪೊರೇಟರ್‌ಗೆ ಮೊದಲೇ ಮಾಹಿತಿ ನೀಡುತ್ತೇನೆ. ಮಳೆಗಾಲದಲ್ಲಿ ರಸ್ತೆಗಳಲ್ಲಾದ ಹೊಂಡ
ಗುಂಡಿಗಳಿಗೆ ಕೇವಲ ತೇಪೆ ಹಾಕುವ ಕೆಲಸ ನಡೆಯುತ್ತಿದೆಯೇ ವಿನಾ ಶಾಶ್ವತ ವ್ಯವಸ್ಥೆ ಇಲ್ಲವೇ?
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾವ ರಸ್ತೆಯಲ್ಲಿ ಹೊಂಡ-ಗುಂಡಿಗಳಿವೆಯೇ ಅದರನ್ನು ಗುರುತಿಸಿ ಡಾಮರು ಹಾಕಲು ಸೂಚಿಸಲಾಗಿದೆ. ಬರುವ ಮಳೆಗಾಲದಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆ ರೂಪಿಸಲಾಗುವುದು. ರಸ್ತೆಗಳಲ್ಲಿನ ಹಂಪ್ಸ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ನಂತೂರು, ಪಂಪ್‌ವೆಲ್ ಸೇರಿದಂತೆ ಇನ್ನಿತರ
ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಪಾಲಿಕೆ ಅಧಿಕಾರಿಗಳು ಹೆದ್ದಾರಿ ಇಲಾಖೆ, ಹೆದ್ದಾರಿ ಇಲಾಖೆ ಪಾಲಿಕೆಯನ್ನು ದೂರಲಾಗುತ್ತಿದೆಯೇ ವಿನಾ ಕ್ರಮಕೈಗೊಳ್ಳುತ್ತಲ್ಲವಲ್ಲ?
ಹೌದು… ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದರ ಕುರಿತಂತೆ ಹೆದ್ದಾರಿ ಇಲಾಖೆ, ಟ್ರಾಫಿಕ್, ಮಹಾನಗರ ಪಾಲಿಕೆ, ರೈಲ್ವೇ ಸೇರಿದಂತೆ ಇತರೇ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ ಮಾಡಲಾಗುವುದು. ಸಭೆಗೆ ಕಡ್ಡಾಯವಾಗಿ ಈ ಇಲಾಖಾ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ.