Advertisement
ಜನಭಾವನೆಯ ಅನಾದರ ಓರ್ವ ಸಾಹಿತಿ ದೇವರ ವಿಗ್ರಹಗಳ ಮೇಲೆ ತಾವು ಮೂತ್ರ ವಿಸರ್ಜಿಸಿರುವುದಾಗಿ ಅಸಭ್ಯ ಹೇಳಿಕೆ ನೀಡಿದರೆ, ಇನ್ನೋರ್ವರು ಶ್ರೀರಾಮನ ಜನ್ಮದ ಹಿನ್ನೆಲೆಗೆ ಅಸಭ್ಯ ಅರ್ಥಕೊಡಲು ಯತ್ನಿಸುತ್ತಾರೆ. ಮಗದೋರ್ವ ವೈಚಾರಿಕರು ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂದು ಜರೆಯಲೂ ಹಿಂಜರಿಯುವುದಿಲ್ಲ. ಆಸ್ತಿಕರ ನಿರುಪದ್ರವಿ ನಂಬಿಕೆ ಯನ್ನು ನಷ್ಟ ಪಡಿಸುವುದರಿಂದ ಕೀಳು ಪ್ರಚಾರ ದೊರೆಯುವುದರ ಜತೆಯಲ್ಲಿ ಕೆಲವು ವೈರಿಗಳನ್ನು ಪಡೆಯಬಹುದಷ್ಟೇ ವಿನಾ ಸಮಾಜ ಸುಧಾರಣೆ ಸಾಧ್ಯವಿಲ್ಲ. ಸಮಾಜವನ್ನು ಈ ರೀತಿಯ ವೈಚಾರಿಕತೆಯ ದಾರಿಯಲ್ಲಿ ಕೊಂಡೊಯ್ಯುವುದು ಖಂಡಿತ ಅಸಾಧ್ಯ.ಅವರವರ ನಂಬಿಕೆಗಳು ಅವರವರಿಗೆ. ಭಾವನಾತ್ಮಕ ನಂಬಿಕೆಗಳನ್ನು ಟೀಕಿಸುವಾಗಲೂ ಸಭ್ಯತೆಯ ಸೀಮೋಲ್ಲಂಘನೆ ಸರಿಯಲ್ಲ.
ಬಲು ಬೇಗ ಸಾಮಾಜಿಕ ಶಾಂತಿ ಕದಡುವ ಕಾರಣ ವಾಗಿ ಬಿಡುತ್ತವೆ. ಸಾಮಾನ್ಯ ವ್ಯಕ್ತಿಯೂ ಈ ಕುರಿತು ಅತ್ಯಂತ ಜಾಗರೂಕನಾಗಿರಬೇಕಾಗುತ್ತದೆ. ಮಾಧ್ಯಮ ಕ್ರಾಂತಿಯ ಇಂದಿನ ಯುಗದಲ್ಲಿ ಸಾಹಿತಿಗಳು, ವಿಮರ್ಶಕರು, ವಿಚಾರವಾದಿಗಳು,
ಸಮಾಜದ ಗಣ್ಯರು ಕೊಂಚ ಎಡವಿದರೂ ದೊಡ್ಡ ವಿವಾದವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು, ವೈಚಾರಿಕರೆನಿಸಿಕೊಂಡವರು ಬಹುಸಂಖ್ಯಾತರ ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ಪ್ರಸಿದ್ಧಿಯ ಶಿಖರವೇರ ಬಯಸುವ
ಕಳವಳಕಾರಿ ಘಟನೆಗಳು ಹೆಚ್ಚುತ್ತಿವೆ.
Related Articles
ಸಾಹಿತ್ಯ ಕ್ಷೇತ್ರದ ಉತ್ತುಂಗಕ್ಕೆ ಏರುವ ಮಹತ್ವಾಕಾಂಕ್ಷೆ ಯುಳ್ಳವರು ಇಂತಹ ಸುಲಭ ದಾರಿ ಹಿಡಿಯುತ್ತಾರೆ. ಇನ್ನು ಕೆಲವರು ತಮ್ಮ ಪುಸ್ತಕಗಳಿಗೆ ಅಗ್ಗದ ಪ್ರಚಾರಕ್ಕಾಗಿ ಇಂತಹ ಅಡ್ಡ ಮಾರ್ಗ ಕಂಡುಕೊಳ್ಳುತ್ತಾರೆ.
Advertisement
ಹಿಂದುಯೇತರ ಧರ್ಮಗಳನ್ನು ಟೀಕಿಸಿದರೆ ಸಮಾಜವಿರೋಧಿ, ಕೋಮು ಸಾಮರಸ್ಯ ಕಂಟಕ ಎನಿಸಿದರೆ ಬಹುಸಂಖ್ಯಾತರ ಹಿಂದೂ ಧರ್ಮವನ್ನು ಟೀಕಿಸಿದರೆ ಜಾತ್ಯತೀತವಾದಿ ಎನ್ನುವ ಸ್ಥಿತಿ ಅತಿರೇಕಕ್ಕೆ ತಲುಪಿದ್ದರಿಂದಲೇ ದೇಶದಲ್ಲಿ ಅನೇಕ ಸಂಘಟನೆಗಳ ಹುಟ್ಟಿಗೆ, ಮತ್ತು ಹಿಂಸೆಯ ವೃದ್ಧಿಗೆ ಕಾರಣವಾಗಿದೆ. ಭಾಷಾ ಸಂಯಮ ಅಗತ್ಯ ವೈಚಾರಿಕರ ಉದ್ರೇಕಕಾರಿ ಭಾಷಣಗಳಿಂದ ಸಾಕಷ್ಟು ಹಿಂಸೆ ನಡೆಯುತ್ತಿದೆ. ಅರಿವಿನ ಕೊರ ತೆಯಿಂದ ಸಾಮಾನ್ಯರು ಹಿಂಸೆಯಲ್ಲಿ ತೊಡಗಿದರೆ, ವೈಚಾರಿಕ ರೆನ್ನಿಸಿಕೊಂಡವರು ತಮ್ಮ ಶಬ್ದಪ್ರಯೋಗದಿಂದ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಸೈದ್ಧಾಂತಿಕ ಮತಬೇಧಗಳನ್ನು ವ್ಯಕ್ತಪಡಿಸುವಾಗಲೂ ಭಾಷಾ ಸಂಯಮವನ್ನು ತೋರಬೇಕೆನ್ನುವ ಕನಿಷ್ಟ ಸಭ್ಯತೆಯೂ ಹಲವು ವೈಚಾರಿಕರೆನ್ನಿಸಿಕೊಂಡವರಲ್ಲಿ ಇಲ್ಲದಿರುವುದು ದುರದೃಷ್ಟಕರ.
ಗಣ್ಯರೆನ್ನಿಸಿಕೊಂಡವರೇ ಸಂಯಮ ಮೀರಿ ಜನಭಾವನೆಗಳನ್ನು ಉದ್ರೇಕಿಸುವ ಮಾತನಾಡು ವುದು ಸರಿಯೇ? ಜನಾಕ್ರೋಶಕ್ಕೆ ಗುರಿಯಾದ ಇಂತಹ ಚಿಂತಕರಿಗೆ ಸರಕಾರ ಇದೀಗ ಪೊಲೀಸ್ ಭದ್ರತೆ ಕೊಡುವ ಚಿಂತನೆ ಮಾಡುತ್ತಿರುವುದು ಜನರ ತೆರಿಗೆ ಹಣದ ದುರ್ಬಳಕೆಯೇ ಸರಿ. ಪೊಲೀಸ್ ಸಂರಕ್ಷಣೆ ಬಯಸುವ ಇಂತಹ ಚಿಂತಕರ ಕುರಿತು ಜನಸಾಮಾನ್ಯರ ಅಭಿಪ್ರಾಯಗಳೇನು ಎಂದು ಸರಕಾರ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲ ವಾದರೆ, ಮುಂಬರುವ ದಿನಗಳಲ್ಲಿ ಇಂತಹವರ ಸಂಖ್ಯೆಯಲ್ಲಿ ಇನ್ನಷ್ಟು ವೃದ್ಧಿ ಕಾಣಬಹುದು. ನಾ. ಡಿಸೋಜಾರೆಂದಂತೆ ಗನ್ ಮ್ಯಾನ್ ಇರುವವರು ಮತ್ತು ಇಲ್ಲದವರು ಎಂದು ಎರಡು ಹೊಸ ವರ್ಗಸೃಷ್ಟಿಯಾಗಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಧೀಮಂತ ಸಾಹಿತಿಗಳ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಕುವೆಂಪು, ಬೇಂದ್ರೆ, ಕಾರಂತರಂತಹ ಸಾಹಿತಿಗಳು ತಮ್ಮ ಚಿಂತನೆಗಳನ್ನು ಬರವಣಿಗೆಯಲ್ಲಿ ದಾಖಲಿಸುವಾಗಲೀ ಅಥವಾ ತಮ್ಮ ಭಾಷಣಗಳಲ್ಲಾಗಲೀ ಜನಭಾವನೆಯನ್ನು ಕೆರಳಿಸಿದ ಉದಾಹರಣೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹುಸಂಖ್ಯಾತರ ಧರ್ಮ, ಆಚಾರ-ವಿಚಾರಗಳನ್ನು ಸಾರಾಸಗಟಾಗಿ ಅವಹೇಳನ ಮಾಡುವ ಚಿಂತಕರು ಹುಟ್ಟಿಕೊಳ್ಳುತ್ತಿರುವುದು ವಿಷಾದನೀಯ. ನಿಜವಾದ
ಚಿಂತಕ ತನ್ನ ನಡೆ-ನುಡಿಗಳಿಂದ ದೊಡ್ಡತನವನ್ನು ಮೆರೆಯುತ್ತಾನೆ. ಢೋಂಗಿ ಸಾಹಿತಿಗಳನ್ನು, ಅವರನ್ನು ಸಂರಕ್ಷಿಸುವ ರಾಜಕಾರಣಿಗಳನ್ನು ಜನರು ತಿರಸ್ಕರಿಸಲಿ. *ಬೈಂದೂರು ಚಂದ್ರಶೇಖರ ನಾವಡ