ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಕೀಳರಿಮೆಯಿಂದ ಮುಕ್ತಗೊಂಡು, ಆತ್ಮವಿಶ್ವಾಸದಿಂದ ದುಡಿಯುವಂತಹ ಸ್ವಾವಲಂಬನೆಯ ಹಾದಿಯಲ್ಲಿ ಸಾಗುವಂತಹ ಸಮಾಜಮುಖೀ ಯೋಚಿಸುವ ಹೊಸ ಪೀಳಿಗೆಯನ್ನು ರೂಪಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ದತ್ತಿ ಉಪನ್ಯಾಸ, 10ನೇ ತರಗತಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕುಂಭಕ ಸಾಹಿತ್ಯಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃಭಾಷೆ ಶಿಕ್ಷಣದಿಂದ ಮೊದಲ್ಗೊಂಡು ರಾಜ್ಯ ಭಾಷೆಗೆ ಆದ್ಯತೆ ನೀಡುವ ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ಅವಕಾಶ ನೀಡುವಂತಹ ಕೌಶಲ್ಯವನ್ನು ಚಿಕ್ಕವಯಸ್ಸಿನಲ್ಲೇ ಕಲೆತು, ಸ್ವಾವಲಂಬಿಯಾಗಿ ಬದುಕುವಂತಹ ಸೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ 7 ವರ್ಷಗಳ ಅನುಭವದ ಆಧಾರದ ಮೇಲೆ ರೂಪಿಸಿದೆ ಎಂದರು. ಸಾಹಿತಿ ಕುಂ. ವೀರಭದ್ರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಅವರ ದೇವರಗುಡ್ಡ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ಈ ದೇಶ ಶೇ.2ರಷ್ಟಿರುವ ಸಮುದಾಯಕ್ಕೆ ಸೇರಿದ್ದಲ್ಲ ಇದು ಎಲ್ಲರಿಗೂ ಸೇರಿದೆ. ಎಲ್ಲ ವರ್ಗದವರೂ ಈ ರಾಷ್ಟ್ರವನ್ನು ಕಟ್ಟಿ ಬೆಳೆಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಶೇ.60ರಷ್ಟು ಮುಸಲ್ಮಾನರಿದ್ದಾರೆ. ಹಾಗಾಗಿ ನಾವು ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.
ಸಾಹಿತ್ಯ ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಮನಸ್ಸನ್ನು ವಿಕಸನಗೊಳಿಸುತ್ತದೆ. ಪ್ರತಿಭಟನೆಯಿಲ್ಲದ ಯಾವುದೇ ಸಾಹಿತ್ಯ ಮತ್ತು ಕೃತಿಯಿಲ್ಲ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೃತಿಗಳೂ ಸಹ ಪ್ರತಿಭಟನೆ ಎದುರಿಸಿವೆ. ಲೇಖಕ ತನ್ನ ಬರವಣಿಗೆಯಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ಪ್ರತಿಭಟಿಸಬೇಕು, ಮೂಢನಂಬಿಕೆ, ಸಾಮಾಜಿಕ ಪಿಡುಗುಗಳ ವಿರುದ್ಧ ಬರೆಯಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಅಪಾಯಕಾರಿ ಧೋರಣೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದೆಂದರೆ ನಮ್ಮ ಹೃದಯವನ್ನು ಮುಚ್ಚಿದಂತೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಸಮಾಜಮುಖೀಗಳಾಗುತ್ತಾರೆ. ದೇಶ ಭಕ್ತರಾಗುತ್ತಾರೆ, ಆಂಗ್ಲ ಮಾಧ್ಯಮದಲ್ಲಿ ಓದುವವರು ತಮ್ಮ ತಂದೆ- ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಅನ್ನ ಕೊಡುವ ಶಕ್ತಿ ಇರುವುದು ಕನ್ನಡಕ್ಕೆ. ಹಾಗಾಗಿ ನಾವು ಮಾತೃಭಾಷೆಯನ್ನು ಮರೆಯಬಾರದು ಎಂದು ತಿಳಿಸಿದರು.
ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 10ನೇ ತರಗತಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ ಐ.ಪಿ. ತನ್ಮಯಿ, ಕೆ.ಸಿ. ಸಂಜನಾ, ಕೆ.ಎಸ್. ಸುರಕ್ಷಾ, ಪಿ. ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ರವೀಶ್ ಬಸಪ್ಪ ಅವರಿಗೆ ಕುಂಭಕ ಸಾಹಿತ್ಯಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ| ಜೆ.ಪಿ. ಕೃಷ್ಣೇಗೌಡ ಮತ್ತು ಕುಂದೂರು ಭದ್ರಮ್ಮ ಕಲ್ಲೇಗೌಡ ದತ್ತಿ ಉಪನ್ಯಾಸ ನಡೆಯಿತು. ಮೂಡಿಗೆರೆ
ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ ಮಾತನಾಡಿದರು. ನ್ಯಾಯವಾದಿ ಮಡ್ಡಿಕೆರೆ ಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಭೈರೇಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಜಿ. ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ಕೆ. ಚಂದ್ರಯ್ಯ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರೊ| ಕೆ.ಎನ್. ಲಕ್ಷ್ಮೀ ಕಾಂತ್ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಎಂ.ಆರ್. ಪ್ರಕಾಶ್ ವಂದಿಸಿದರು.