Advertisement

ಸ್ವಂತ ದುಡ್ಡಲ್ಲಿ ಕೃಷಿ ಅಧ್ಯಯನ ಪ್ರವಾಸ ಹೊರಟಿರುವ ಪ್ರಗತಿಪರ ರೈತರು

08:45 AM Oct 24, 2017 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಪ್ರವಾಸದ ಬಳಿಕ ಇದೀಗ ಆಧುನಿಕ ಕೃಷಿ ಅಧ್ಯಯನಕ್ಕೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ 23 ಮಂದಿ ಪ್ರಗತಿಪರ ರೈತರ ತಂಡವೊಂದು ಇಸ್ರೇಲ್‌ ದೇಶದ ಕೃಷಿ ಅಧ್ಯಯನ ಪ್ರವಾಸಕ್ಕೆ ಹೊರಟುನಿಂತಿದೆ. ರೈತರೆಲ್ಲ ತಮ್ಮ ಸ್ವಂತ ಖರ್ಚಿನಲ್ಲಿ ಈ ಪ್ರವಾಸ ಕೈಗೊಳ್ಳುತ್ತಿದ್ದು, ಅ. 30ರಂದು ಬೆಂಗಳೂರಿನಿಂದ ಮುಂಬಯಿ ಮಾರ್ಗವಾಗಿ ಇಸ್ರೇಲ್‌ಗೆ ತೆರಳಲಿದ್ದಾರೆ.

Advertisement

ಪ್ರಗತಿಪರ ಕೃಷಿಕರು ಹಾಗೂ ವಿ.ವಿ.ಗಳ ಪ್ರೊಫೆಸರ್‌ಗಳನ್ನು ಒಳಗೊಂಡ ಈ 23 ಮಂದಿಯ ತಂಡದಲ್ಲಿ ದ.ಕ. ಜಿಲ್ಲೆಯ 9 ಮಂದಿ ಪ್ರಗತಿಪರ ರೈತರೂ ಇದ್ದಾರೆ. ಬೆಳ್ತಂಗಡಿ ಮುಂಡಾಜೆಯ ಪ್ರಗತಿಪರ ಕೃಷಿಕ ಹಾಗೂ ಮಾಜಿ ಸೇನಾಧಿಕಾರಿ ಲೆ| ಗಜಾನನ ವಝೆ ಮುಂದಾಳತ್ವ ವಹಿಸಿದ್ದಾರೆ.

ತಂಡದಲ್ಲಿ …
ತಂಡದಲ್ಲಿ ದ.ಕ. ಜಿಲ್ಲೆಯಿಂದ ಆಧುನಿಕ ಕೃಷಿ ಯಲ್ಲಿ ಆಸಕ್ತಿ ಹೊಂದಿರುವ ಮುಂಡಾಜೆಯ ಅನಂತ ಭಟ್‌, ಬೆಳ್ತಂಗಡಿಯ ಡಾ| ಶಶಿಧರ ಡೊಂಗ್ರೆ, ಯಶವಂತ ಪಟವರ್ಧನ್‌, ಧನಂಜಯ ರಾವ್‌, ಬಂಟ್ವಾಳದ ವಾರಣಾಶಿ ಫಾರ್ಮ್ನ ವಾರಣಾಶಿ ಕೃಷ್ಣಮೂರ್ತಿ, ವಾರಣಾಶಿ ಅಶ್ವಿ‌ನಿ ಕೃಷ್ಣಮೂರ್ತಿ, ಪುತ್ತೂರಿನ ಗಣಪತಿ ಭಟ್‌ ಏಕಡ್ಕ ಹಾಗೂ ಸುಳ್ಯದ ಎಂ.ಜಿ. ಸತ್ಯನಾರಾಯಣ ಕುಕ್ಕುಜಡ್ಕ ಇದ್ದಾರೆ. ಉಳಿದಂತೆ ಮಹೇಶ್‌, ಹರೀಶ್‌, ಬಸವನಗೌಡ, ರಾಜಾ ಬುಡ್ಡಿ, ನಾಚೆ ಗೌಡ, ನಾಗಭೂಷಣ್‌ ಪ್ರಕಾಶ್‌, ಗುರುಪ್ರಸಾದ್‌, ಸುಬ್ಬಣ್ಣ, ಶಿವಯೋಗಿ ಗುರುಸಿದ್ದಪ್ಪ, ಯೋಗಾನಂದ, ಅಂಬಿಕಾ ಚರಣ್‌ವಾಡಿ, ಮುರಲೀಧರ ಭಟ್‌ ಅವರು ತಂಡದ ಸದಸ್ಯರಾಗಿದ್ದು ಇವರು ಮೈಸೂರು, ಬೆಂಗಳೂರು, ದಾವಣಗೆರೆ ಜಿಲ್ಲೆಗಳಿಗೆ ಸೇರಿದವರು.

ತಂಡವು ಅ. 30ರಂದು ಅಪರಾಹ್ನ 3 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಮುಂಬಯಿಗೆ ತೆರಳಿ ಅಲ್ಲಿಂದ ರಾತ್ರಿ 11 ಗಂಟೆಗೆ ನೇರ ವಿಮಾನದ ಮೂಲಕ ಇಸ್ರೇಲ್‌ಗೆ ಪ್ರಯಾಣಿಸಲಿದೆ. ಒಟ್ಟು ಏಳು ದಿನಗಳ ಅಧ್ಯಯನ ಪ್ರವಾಸ ಇದಾಗಿದ್ದು, ಪ್ರತಿಯೋರ್ವರಿಗೆ ವಿಮಾನ ವೆಚ್ಚ , ವಸತಿ ಹಾಗೂ ಪ್ರಯಾಣ ಸಹಿತ ತಲಾ 1.18 ಲಕ್ಷ ರೂ. ಶುಲ್ಕವನ್ನು ಪ್ರವಾಸ ಆಯೋಜನೆ ಸಂಸ್ಥೆಯು ನಿಗದಿಪಡಿಸಿದೆ. ಉಳಿದಂತೆ 20ರಿಂದ 25,000 ರೂ. ವೈಯಕ್ತಿಕವಾಗಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ವಾಟ್ಸ್‌ಆ್ಯಪ್‌ನಿಂದ ಒಟ್ಟುಗೂಡಿದ ಆಸಕ್ತರು
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಪುಟ್ಟ ದೇಶ ಇಸ್ರೇಲ್‌. ಇಸ್ರೇಲ್‌ನ ಆಧುನಿಕ ಕೃಷಿ ವಿಧಾನ, ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿದ್ದ ರೈತರಲ್ಲಿ ಇದನ್ನು ಕಣ್ಣಾರೆ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಬೇಕೆಂಬ ಬಯಕೆ ಮೊದಲಿಗೆ ವಝೆ ಅವರಲ್ಲಿ ಮೂಡಿತ್ತು. ಆದರೆ ಆಸಕ್ತ ರೈತರನ್ನು ಒಗ್ಗೂಡಿಸುವುದು ಹೇಗೆ ಎಂಬ ಪ್ರಶ್ನೆ ಕಾಡಿದಾಗ ಹೊಳೆದದ್ದು ವಾಟ್ಸ್‌ಆ್ಯಪ್‌. ಕೃಷಿಕರು ಇರುವ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಇಸ್ರೇಲ್‌ ಪ್ರವಾಸದ ಬಗ್ಗೆ ಶೇರ್‌ ಮಾಡಿದರು. ಕೆಲವೇ ದಿನಗಳಲ್ಲಿ ಆಸಕ್ತ ರೈತರಿಂದ ಅದಕ್ಕೆ ಉತ್ತಮ ಸ್ಪಂದನೆ ಕೂಡ ದೊರೆಯಿತು. ಆರಂಭದಲ್ಲಿ 17 ಮಂದಿಯ ತಂಡ ಸಿದ್ಧವಾಗಿತ್ತು. ಮತ್ತೆ 6 ಮಂದಿ ಹೊಸದಾಗಿ ಸೇರ್ಪಡೆಗೊಂಡು ಇದೀಗ 23 ಮಂದಿಯ ದೊಡ್ಡ ರೈತರ ತಂಡವೊಂದು ಇಸ್ರೇಲ್‌ನ ಕೃಷಿ ಅಧ್ಯಯನಕ್ಕೆ ಮುಂದಾಗಿರುವುದು ವಿಶೇಷ. ಪ್ರವಾಸ ಆಯೋಜನೆ ಸಂಸ್ಥೆಯೊಂದು ಪ್ರವಾಸದ ಪೂರ್ಣ ಉಸ್ತುವಾರಿ ವಹಿಸಿಕೊಂಡಿದೆ. ಖರ್ಚು-ವೆಚ್ಚ ವೈಯಕ್ತಿಕ.

Advertisement

ಐದು ದಿನ ಕೃಷಿ ಅಧ್ಯಯನ
ಇಸ್ರೇಲ್‌ನ ಕಿಬ್ಬುಟ್ಜ ಶಾರ್‌ ಅತಿಥಿಗೃಹದಿಂದ ಅ. 31ರಂದು ತಂಡ ಅಧ್ಯಯನ ಪ್ರವಾಸ ಆರಂಭಿಸಲಿದೆ. ಕಿಬ್ಬುಟ್ಜ ಸದಸ್ಯರನ್ನು ಭೇಟಿಯಾಗಿ ಅವರ ಜೀವನ ಪದ್ಧತಿ ಬಗ್ಗೆ ಅರಿತುಕೊಳ್ಳಲಿದ್ದಾರೆ. ಕಿಬ್ಬುಟ್ಜ ಎಂಬುದು ಒಂದು ವಿನೂತನ ಕೃಷಿಕ ಕುಟುಂಬಗಳ ಸಹಬಾಳ್ವೆ ವ್ಯವಸ್ಥೆ. ಸುಮಾರು 50 ಕುಟುಂಬಗಳು ಒಂದೇ ಕಡೆಯಿದ್ದು ಕೃಷಿ, ವ್ಯವಹಾರವನ್ನು ಜತೆ ಸೇರಿ ಮಾಡಿ ಅದರ ಲಾಭಾಂಶವನ್ನು ಹಂಚಿಕೊಳ್ಳುತ್ತಾರೆ. ಇವರಿಗೆಲ್ಲ ಒಂದೇ ಅಡುಗೆ ಮನೆ. ಎಲ್ಲರೂ ಹಂಚಿ ಕೊಂಡು ಊಟ ಮಾಡುವುದು, ಬಳಿಕ ಬಾಳೆ ಕೃಷಿಗೆ ಪ್ರಸಿದ್ಧಿ ಪಡೆದಿರುವ ಜೋರ್ಡಾನ್‌ ಕಣಿವೆಗೆ ತೆರಳಿ ಅಧ್ಯಯನ ಮಾಡಲಿದೆ. ಕಿಬುಟ್ಜದ ಹೈನುಗಾರಿಕೆ ಫಾರ್ಮ್ ಹಾಗೂ ಹಟ್ಟಿಗಳನ್ನು ವೀಕ್ಷಣೆ ನಡೆಸಲಿದೆ. ದಾಳಿಂಬೆ ಕೃಷಿ, ಖರ್ಜೂರ ಕೃಷಿ, ಸಾವಯವ ಕೃಷಿ, ಕಾಂಪೋಸ್ಟ್‌ ಜೈವಿಕ ಕೀಟನಾಶಕ ಮುಂತಾ ದವು ಗಳ ವೀಕ್ಷಣೆ ಹಾಗೂ ಅಧ್ಯಯನ ನಡೆಸಲಿದೆ.

ಇಸ್ರೇಲ್‌ ಜೈವಿಕ ಕೀಟನಾಶಕದಲ್ಲಿ ವಿಶ್ವದಲ್ಲೇ ನಾಯಕ ಸ್ಥಾನದಲ್ಲಿದೆ. ಇದಲ್ಲದೆ ಪ್ರವಾಸ ದಲ್ಲಿ ಅತ್ಯಾಧುನಿಕ ನೀರಾವರಿ ತಂತ್ರಜ್ಞಾನ ಗಳು, ತ್ಯಾಜ್ಯ ನೀರು ಸಂಸ್ಕರಿಸಿ ಕೃಷಿಗೆ ಬಳಕೆಯ ವೀಕ್ಷಣೆ ಮತ್ತು ತಜ್ಞರ ಜತೆ ಸಂವಾದ, ಸಮುದ್ರದ ಉಪ್ಪು ನೀರು ಸಂಸ್ಕರಣ ಸ್ಥಾವರಗಳು ಹಾಗೂ ತಂತ್ರಜ್ಞಾನ ಹೀಗೆ ಕೃಷಿಗೆ ಸಂಬಂಧಪಟ್ಟ ಹಲವು ಮಾದರಿ, ತಂತ್ರಜ್ಞಾನಗಳ ವೀಕ್ಷಣೆ ಹಾಗೂ ಅಧ್ಯಯನ, ಟಿಶ್ಯೂ ಕಲ್ಚರ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು, ಕೃಷಿಯಲ್ಲಿ ಆಗಿರುವ ಇತ್ತೀಚಿನ ಸಂಶೋಧನೆಗಳ ಬಗ್ಗೆ ಮಾಹಿತಿ, ಮಾರುಕಟ್ಟೆ ವ್ಯವಸ್ಥೆ, ಆಗ್ರೋ-ರಿಸರ್ಚ್‌ ಸೆಂಟರ್‌ಗೆ ಭೇಟಿ, ಅಧ್ಯಯನ ನಡೆಸಲಾಗುವುದು. ಏಸು ಕ್ರಿಸ್ತರ ಜನ್ಮಸ್ಥಾನ ಬೆತ್ಲೆಹೇಮ್‌ ಸಹಿತ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲಾಗುವುದು. ಒಟ್ಟು 6 ದಿನಗಳ ಪ್ರವಾಸ ಮುಗಿಸಿ 7ನೇ ದಿನಕ್ಕೆ ಟೆಲಿಅವೀವ್‌ ವಿಮಾನ ನಿಲ್ದಾಣ ಮೂಲಕ ಭಾರತಕ್ಕೆ ವಾಪಸಾಗುತ್ತೇವೆ ಎಂದು ನೇತೃತ್ವ ವಹಿಸಿರುವ ಗಜಾನನ ವಝೆ “ಉದಯವಾಣಿ’ಗೆ ವಿವರಿಸಿದ್ದಾರೆ.

ಚಿಂತನೆಗೆ ಮೋದಿಯೇ ಪ್ರೇರಣೆ
ಇಸ್ರೇಲ್‌ನ ಆಧುನಿಕ ಕೃಷಿ ಪದ್ಧತಿ, ನೀರಾವರಿ ತಂತ್ರಜ್ಞಾನಗಳ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಬಹಳ ಕುತೂಹಲವಿತ್ತು. ಅಲ್ಲಿ ಪ್ರವಾಸ ಮಾಡಿ ಅವುಗಳನ್ನು ವೀಕ್ಷಿಸಬೇಕು, ಮಾಹಿತಿ ಗಳನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇತ್ತು. ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದನ್ನು ಟಿವಿಯಲ್ಲಿ  ವೀಕ್ಷಿಸಿದ ಅನಂತರ ಅಲ್ಲಿಗೆ ಹೋಗ ಬೇಕೆಂಬ ಬಯಕೆ ಇನ್ನಷ್ಟು ಹೆಚ್ಚಾ ಯಿತು. ಮಾಜಿ ಮುಖ್ಯ  ಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಕೂಡ ಇತ್ತೀಚೆಗೆ ಅಲ್ಲಿಗೆ ತೆರಳಿ ಅಲ್ಲಿನ ಕೃಷಿ ಬಗ್ಗೆ ತಿಳಿದು ಕೊಂಡು ಬಂದಿದ್ದಾರೆ. ಕೃಷಿಕ ರಿಗೆ ಸಂಬಂಧಿಸಿದ ನನ್ನ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಇಸ್ರೇಲ್‌ ಪ್ರವಾಸದ ಬಗ್ಗೆ ಪ್ರಸ್ತಾ ವಿಸಿದಾಗ ಅನೇಕ ಆಸಕ್ತರು ಇರುವುದು ಗೊತ್ತಾಯಿತು. ಅದರಂತೆ ಎಲ್ಲರೊಂದಿಗೆ ಚರ್ಚಿಸಿ ಹೀಗೊಂದು ಕೃಷಿ ಅಧ್ಯಯನ ಪ್ರವಾಸ ವನ್ನು ಅಂತಿಮಗೊಳಿ ಸಿದ್ದು, ಇಸ್ರೇಲ್‌ ದೇಶದಿಂದಲೂ ನಮಗೆ ಎಲ್ಲ ರೀತಿಯ ಬೆಂಬಲ, ಮಾರ್ಗದರ್ಶನ ಲಭಿಸಿದೆ.
ಗಜಾನನ ವಝೆ ಪ್ರಗತಿಪರ ಕೃಷಿಕರು, ಬೆಳ್ತಂಗಡಿ

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next