Advertisement

ಕೇಂದ್ರದ ಪ್ರಾಯೋಜಿತ ಯೋಜನೆಗಳ ಪ್ರಗತಿ ಪರಿಶೀಲನೆ

10:24 AM May 03, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಕಾಮಗಾರಿ ವೇಗ ತೀವ್ರಗೊಳಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ಸೂಚನೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಕೇಂದ್ರ ಪ್ರಾಯೋಜಿತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಲಮಿತಿ ಹಾಕಿಕೊಂಡು ನಿಗದಿತ ಅವಧಿಯಲ್ಲಿಯೋಜನೆ ಪೂರ್ಣಗೊಳಿಸುವತ್ತ ಹೆಚ್ಚು ಗಮನ ನೀಡಿ. ಇಲ್ಲವಾದರೆ ಯೋಜನಾವೆಚ್ಚ ಹೆಚ್ಚಾಗುತ್ತದೆ ಎಂದು ತಾಕೀತು ಮಾಡಿದರು.

Advertisement

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯಲ್ಲೂ
ಅನುದಾನ ಬಿಡುಗಡೆ ಸಂಬಂಧ ವಿಳಂಬ ವಾಗದು. ರಾಜ್ಯ ಸರ್ಕಾರ ಪ್ರತಿ ಕೆಲಸಕ್ಕೂ ದೆಹಲಿವರೆ ಬರುವುದು ತಡೆಯುವ
ಸಲುವಾಗಿಯೇ ನಾವೇ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಒಕ್ಕೂಟ ವ್ಯವಸ್ಥೆಯಡಿ ಎಲ್ಲ ರಾಜ್ಯಗಳನ್ನು ಕೇಂದ್ರ ಸರ್ಕಾರ ಸಮಾನವಾಗಿ ನೋಡಲಿದೆ. ಪಕ್ಷ ರಾಜಕಾರಣ ಚುನಾವಣೆವರೆಗೆ ಮಾತ್ರ, ಆ ನಂತರ ಯಾವುದೇ ರಾಜಕೀಯ ಇರುವುದಿಲ್ಲ. ಪ್ರಧಾನಿ ಮೋದಿ, ಟೀಂ ಇಂಡಿಯಾ ಕಲ್ಪನೆಯಡಿ ಎಲ್ಲರೂ ಜತೆಗೂಡಿ ಕೆಲಸ ಮಾಡಲು ಬಯಸಿ ರಾಜ್ಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದರು.

ಮೂರು ವರ್ಷಕ್ಕೆ 4953 ಕೋಟಿ ರೂ.: ಸ್ಮಾರ್ಟ್‌ ಸಿಟಿ, ಅಮೃತ್‌, ಪಿಎಸ್‌ ಎವೈ ಹಾಗೂ ಸ್ವತ್ಛ ಭಾರತ್‌ ಮಿಷನ್‌
ಯೋಜನೆಯಡಿ ರಾಜ್ಯದಲ್ಲಿ ಮೂರು ವರ್ಷಗಳ ಅವಧಿಗೆ 4953 ಕೋಟಿ ರೂ. ಮೊತ್ತದ ಯೋಜನೆಗೆ ಮಂಜೂರಾತಿ
ನೀಡಲಾಗಿದ್ದು, ಕೇಂದ್ರ ಸರ್ಕಾರ 2319 ಕೋಟಿ ರೂ. ಅನುದಾನ ನೀಡಲಿದ್ದು ಉಳಿದ ಮೊತ್ತ ರಾಜ್ಯ ಸರ್ಕಾರ ಹಾಗೂ
ಸ್ಥಳೀಯ ಸಂಸ್ಥೆಗಳು ಭರಿಸಬೇಕು ಎಂದು ಹೇಳಿದರು.

ನವೆಂಬರ್‌ ಅಂತ್ಯಕ್ಕೆ ಎಲ್ಲ ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ. 134 ಯೋಜನೆಗಳ ಕಾಮಗಾರಿ ಡಿಸೆಂಬರ್‌
ವೇಳಗೆ ಶೇ.25 ರಷ್ಟು ಮುಗಿಯಲಿವೆ. 178 ಯೋಜನೆ ಕಾಮಗಾರಿಗಳು 2018 ಡಿಸೆಂಬರ್‌ ಅಂತ್ಯಕ್ಕೆ ಶೇ.50ರಷ್ಟು
ಮುಗಿಯಲಿವೆ. 2020ರ ಫೆಬ್ರವರಿ ವೇಳಗೆ ಎಲ್ಲ ಯೋಜನೆಗಳ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆ ಯಾಗಿರುವ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಮಹಾ ನಗರಗಳಿಗೆ ಸೂಕ್ತ ಅನುದಾನ ಒದಗಿಸಲಾಗಿದೆ.

Advertisement

ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಮೂರನೇ ಹಂತದಲ್ಲಿ ಬೆಂಗಳೂರು ಸಹ ಯೋಜನೆಯಡಿ ಪಾಲ್ಗೊಳ್ಳಲು
ಅವಕಾಶ ಮಾಡಿಕೊಡಲಾಗಿದೆ. ಬೆಳಗಾವಿ ಮತ್ತು ದಾವಣಗೆರೆ ಮಹಾನಗರಗಳಿಗೆ ಕಳೆದ ಆಗಸ್ಟ್‌ನಲ್ಲಿ ತಲಾ 200
ಕೋಟಿ ರೂ. ನೀಡಲಾಗಿತ್ತು. ಇದೀಗ ತಲಾ 107 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಸಮೀಕ್ಷೆ: ಸ್ವತ್ಛ ಭಾರತ್‌ ಮಿಷನ್‌ನಡಿ ಕಳೆದ ಬಾರಿ 70 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದೆವು. ಆ ಪೈಕಿ ಮೈಸೂರು ಮೊದಲ ಸ್ಥಾನಪಡೆದಿತ್ತು. ಈ ಬಾರಿ 500 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು 17,500 ಸ್ಥಳಗಳಿಂದ 80 ಲಕ್ಷ ಮಾದರಿ ಸಂಗ್ರಹಿಸಿ 37ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಸದ್ಯದಲ್ಲೇ ದೆಹಲಿಯಲ್ಲಿ ಫ‌ಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸ್ವತ್ಛ ಭಾರತ್‌ ಮಿಷನ್‌ನಡಿ ನಡೆಸಿದ
ಸಮೀಕ್ಷೆಯಲ್ಲಿ ಶೇ.83ರಷ್ಟು ಜನರು ಕಳೆದ ವರ್ಷಕ್ಕಿಂದ ಈ ವರ್ಷ ಸ್ವತ್ಛತೆ ಕಾಯ್ದುಕೊಳ್ಳುವ ವಿಚಾರದಲ್ಲಿ ಉತ್ತಮ
ಸಾಧನೆಯಾಗಿರುವುದಾಗಿ ತಿಳಿಸಿದ್ದಾರೆ. ಶೇ.82ರಷ್ಟು ಜನ ಪ್ರಗತಿಯ ಪ್ರಮಾಣ ಹೆಚ್ಚಾಗಿರುವುದರ ಬಗ್ಗೆ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ:
ಶೌಚಾಲಯ ನಿರ್ಮಾಣ ಮೂಲಕ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ರೂಪಿಸುವತ್ತ ರಾಜ್ಯ ಸರ್ಕಾರ ಉತ್ತಮ
ಕೆಲಸ ಮಾಡುತ್ತಿದೆ. ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಧನ ಸಹಾ ಯದ ಜತೆಗೆ ರಾಜ್ಯದ ವತಿಯಿಂದಲೂ ಹೆಚ್ಚಿನ ಹಣ ಕೊಡುತ್ತಿದೆ. ಮೈಸೂರು, ಮಂಗಳೂರು, ಉಡುಪಿ ನಗರ ಬಯಲು ಬಹಿರ್ದೆಸೆ ಮುಕ್ತಗೊಳಿಸಿದೆ. ರಾಜ್ಯದ 276 ನಗರ-ಪಟ್ಟಣಗಳಲ್ಲೂ ಈ ಪ್ರಯತ್ನ ಜಾರಿಯಲ್ಲಿರಿಸಿದೆ. 2017ರ ಆಗಸ್ಟ್‌ ವೆಳೆಗೆ ರಾಜಧಾನಿ ಬೆಂಗಳೂರು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದರ ಜತೆಗೆ ಅಕ್ಟೋಬರ್‌ ವೇಳೆಗೆ ಇನ್ನೂ 97 ನಗರ -ಪಟ್ಟಣ ಬಯಲು ಬಹಿರ್ದೆಸೆ ಮುಕ್ತಗೊಳಿಸುವುದಾಗಿ ತಿಳಿಸಿದೆ. ಒಟ್ಟಾರೆ 2018ರ ಅಂತ್ಯಕ್ಕೆ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next