ತುಮಕೂರು: ಪ್ರವಾಸೋದ್ಯಮ, ಯುವ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಗಳನ್ನು ವಿಲೀನಗೊಳಿಸಿ ಒಂದೇ ಸಚಿವಾಲಯದಡಿ ತರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ. ಈ ಸಂಬಂಧ ಕಂದಾಯ ಸಚಿವರ ಗಮನಕ್ಕೆ ತರಲಾಗಿದೆ ಎಂದು ಪ್ರವಾಸೋದ್ಯಮ , ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಮೂರು ಇಲಾಖೆಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮೂರು ಇಲಾಖೆಗಳಲ್ಲಿ ಶೇ. 62ರಿಂದ 65ರಷ್ಟು ಹುದ್ದೆಗಳು ಖಾಲಿಯಿರುವುದರಿಂದ ಇಲಾಖೆಗಳ ವಿಲೀನ ಗೊಳಿಸುವ ಸಂಪುಟದಲ್ಲಿ ಚರ್ಚೆಯಾಗಿ ಅನುಮೋದನೆ ದೊರೆತರೆ ಆಡಳಿತ ಸುಧಾರಣೆಯಾಗಲು ಸಾಧ್ಯವಾಗು ತ್ತದೆ ಎಂದರು.
ಆರ್ಥಿಕ ಉಳಿತಾಯ ಸಾಧ್ಯ: ಇಲಾಖೆ ಗಳನ್ನು ವಿಲೀನಗೊಳಿಸುವುದರಿಂದ ಸಮರ್ಪಕ ಕಾರ್ಯ ಹಾಗೂ ಆರ್ಥಿಕ ಉಳಿತಾಯವಾಗು ತ್ತದೆ. ಹಲವಾರು ಇಲಾಖೆಗಳಲ್ಲಿ ವಾರ್ಷಿಕ ವೆಚ್ಚದ ಶೇ.90ರಷ್ಟು ಭಾಗ ವೇತನ ಪಾವತಿಗಾಗಿ ಹಾಗೂ ಉಳಿದ ಶೇ. 10ರಷ್ಟು ಮಾತ್ರ ಕ್ರಿಯಾ ಯೋಜನೆಗೆ ಖರ್ಚಾಗುತ್ತಿದೆ. ವಾರ್ಷಿಕ ವೆಚ್ಚದ ಶೇ. 25 ಭಾಗ ಮಾತ್ರ ವೇತನ ಪಾವತಿ ಹಾಗೂ ಶೇ. 75ರಷ್ಟು ಕ್ರಿಯಾ ಯೋಜನೆಗಳಿಗೆ ವೆಚ್ಚ ಮಾಡಿದಾಗ ಮಾತ್ರ ಆರ್ಥಿಕ ಉಳಿತಾಯ ಸಾಧ್ಯ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ 39.41 ಕೋಟಿ: ಜಿಲ್ಲೆಯ ಪ್ರವಾಸೋದ್ಯಮ ಅಭಿ ವೃದ್ಧಿಗಾಗಿ 2017-18ನೇ ಸಾಲಿನಿಂದ ಈವರೆಗೂ 39.41 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ 85 ಕಾಮಗಾರಿಗಳು ಅನುದಾನ ಮಂಜೂರು ಮಾಡಲಾಗಿದೆ ಎಂದರು.
9 ಕಾಮಗಾರಿಗಳು ಪೂರ್ಣ: ಈ ಪೈಕಿ 42 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ 9 ಕಾಮಗಾರಿಗಳು ಪೂರ್ಣಗೊಂಡಿದ್ದು, 36 ಕಾಮಗಾರಿಗಳನ್ನು ತಾಂತ್ರಿಕ ಕಾರಣಗಳಿಂದ ಈವರೆಗೂ ಪ್ರಾರಂಭಿಸಿರುವುದಿಲ್ಲ. ಪ್ರಾರಂಭ ವಾಗದ ಕಾಮಗಾರಿಗಳಲ್ಲಿ ನಿವೇಶನ ಸಮಸ್ಯೆಯಿರುವ ಕಾಮಗಾರಿಗಳನ್ನು ಕೂಡಲೇ ರದ್ದುಪಡಿಸಲು ಸೂಚನೆ ನೀಡಲಾಗಿದೆ. ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಕಲಾವಿದರಿಗೆ ನೆರವು: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಸುಮಾರು 17 ಸಾವಿರ ಕಲಾವಿದರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ.ನಂತೆ ಆರ್ಥಿಕ ನೆರವನ್ನು ಒದಗಿಸಲಾಗಿದೆ ಎಂದರು. ಇತ್ತೀಚೆಗಷ್ಟೇ ಕೇಂದ್ರದ ಪ್ರವಾಸೋದ್ಯಮ ಹಾಗೂ ಕ್ರೀಡಾ ಖಾತೆ ಸಚಿವರನ್ನು ಭೇಟಿ ಮಾಡಿ ಪ್ರವಾಸೋದ್ಯಮದ ಹೊಸ ಯೋಜನೆಗಳಿಗೆ ಅನುಮೋದನೆ ನೀಡ ಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯದಲ್ಲಿ ಜೈನ್ ಸರ್ಕ್ನೂಟ್, ಕೋಸ್ಟಲ್(ಕರಾವಳಿ) ಸರ್ಕ್ನೂಟ್, ಡೆಕ್ಕನ್ ಸೆರ್ಕ್ನೂಟ್, ಜೋಗ್ ಮತ್ತು ಚಿತ್ರದುರ್ಗ ಸರ್ಕ್ನೂಟ್ ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ದೊರೆಯುವ ಬಗ್ಗೆ ಸಕಾರಾತ್ಮಕ ವಿಶ್ವಾಸವಿದ್ದು, ಕೇಂದ್ರವು ಹೆಚ್ಚಿನ ಅನುದಾನ ಒದಗಿಸಲಿದೆ ಎನ್ನುವ ಭರವಸೆ ಇದೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮತ್ತಿತರರು ಇದ್ದರು