Advertisement

ಮಾಗಡಿಯಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್‌ ಬ್ಯಾನ್‌ ಆಗಲಿ

04:14 PM Jun 15, 2023 | Team Udayavani |

ಮಾಗಡಿ: ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಶಾಸಕ ಎಚ್‌.ಸಿ.ಬಾಲಕೃಷ್ಣ ತಾಕೀತು ಮಾಡಿದರು.

Advertisement

ಪಟ್ಟಣದ ಪುರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಎಲ್ಲಂದರಲ್ಲಿ ಪ್ಲಾಸ್ಟಿಕ್‌ ಕವರ್‌ಗಳ ರಾಶಿಗಳು ಕಂಡು ಬರುತ್ತಿದೆ. ಹೀಗಾಗಿ ಪಟ್ಟಣದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್‌ ಬ್ಯಾನ್‌ ಆಗಬೇಕು. ಸ್ವತ್ಛತೆ ಕಾಪಾಡುವ ಮೂಲಕ ತಿಂಗಳೊಳಗೆ ಪ್ಲಾಸ್ಟಿಕ್‌ ಮುಕ್ತ ಮಾಗಡಿಯನ್ನಾಗಿಸಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಕಾರ್ಯೋನ್ಮಕರಾಗಬೇಕು ಎಂದರು.

ಪಟ್ಟಣದಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಪಟ್ಟಿ ಮಾಡಿ ನಂಬರ್‌ ಪ್ಲೇಟ್‌ ಅಳವಡಿಸಲು ಕ್ರಮ ವಹಿಸಬೇಕು. ಮನಸ್ಸಿಲ್ಲದೆ ಕೆಲಸ ನಿರ್ವಹಿಸಿದರೆ ಕೆಲಸ ಸಮರ್ಪಕವಾಗಿರುವುದಿಲ್ಲ, ಒಳ್ಳೆ ಮನಸ್ಸಿನಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಅಮಾನತು ಎದುರಿಸಲು ಸಿದ್ಧರಾಗಿ ಎಂದರು.

ಕೆಎಂಆರ್‌ಪಿಯಲ್ಲಿ ಭ್ರಷ್ಟಾಚಾರ: ಪಟ್ಟಣದಲ್ಲಿ ಸುಮಾರು 28 ಕೋಟಿರೂ ವೆಚ್ಚದಲ್ಲಿ ದಿನದ 24/7 ಕುಡಿವ ನೀರಿನ ಪೂರೈಕೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆ ಕುರಿತು ಪುರಸಭೆಯಲ್ಲಿ ಮಾಹಿತಿಯೇ ಇಲ್ಲ. ಎಂಜಿನಿಯರ್‌ ಮತ್ತು ಗುತ್ತಿಗೆದಾರರು ಸೇರಿ ನೀರು ಕುಡಿದಂತೆ ಹಣ ನುಂಗಿದ್ದಾರೆಯೇ ಹೊರೆತು, ಮಾಗಡಿ ಜನ ಮಾತ್ರ ದಿನಪೂರ್ತಿ ನೀರು ಕುಡಿಯಲು ಸಾಧ್ಯವಾಗಿಲ್ಲ, ಈ ಯೋಜನೆಯ ಭ್ರಷ್ಟಾಚಾರ ಕುರಿತು ಪುರಸಭೆ ಕಚೇರಿಗೆ ಮುಂದಿನ ಮಂಗಳವಾರ ಆಗಮಿಸಿ ಸಂಪೂರ್ಣ ವರದಿ ನೀಡುವಂತೆ ಉನ್ನತ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ಶಾಸಕರು ತರಾಟೆಗೆ ತೆಗೆದುಕೊಂಡರು.

ಪುರಸಭೆ ಅಂಗಡಿ ಮಳಿಗೆ ಬಹಿರಂಗ ಹರಾಜು: ಪಟ್ಟಣದಲ್ಲಿ ಇರುವ ಪುರಸಭೆ ಅಂಗಡಿ ಮಳಿಗೆ ಬಾಡಿಗೆಯ ಅವಧಿ ಮುಗಿದಿದ್ದು, ಬಹಿರಂಗ ಹರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಇರುವವರನ್ನೇ ಮುಂದುವರಿಸಲು ಅವಕಾಶವಿಲ್ಲ, ಬಹಿರಂಗ ಹರಾಜು ಮೂಲಕವೇ ಮಳಿಗೆ ಪಡೆಯಬಹುದು ಎಂದರು.

Advertisement

ಆಶ್ರಯ ನಿವೇಶನ ಹಂಚಿಕೆ: ಪುರಸಭೆ ನಿರ್ಮಿಸಿರುವ ಸುಮಾರು 500 ಆಶ್ರಯ ನಿವೇಶನಗಳಿದ್ದು, ಹಲವು ವರ್ಷಗಳಿಂದ ಇರುವ ಜನರಿಗೆ ಪಟ್ಟಿ ಮಾಡಿ ಅರ್ಹತೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸುವಂತೆ ಮುಖ್ಯಾಧಿಕಾರಿಗೆ ಶಾಸಕರು ಸೂಚಿಸಿದರು. ಕುರಿ ಕೋಳಿ ಮಾಂಸದ ಅಂಗಡಿಗಳು ಎಲ್ಲಂದರಲ್ಲಿ ತಲೆ ಎತ್ತುತ್ತಿವೆ ಎಂದು ಸದಸ್ಯರು ಶಾಸಕರ ಗಮನಕ್ಕೆ ತಂದರು.

ಎಲ್ಲ ಒಂದೆಡೆ ಸಿಗುವಂತೆ ಖಸಾಯಿಖಾನೆ ಸ್ಥಾಪಿಸಲು ಕ್ರಮ ವಹಿಸಲು ಯೋಜನೆ ರೂಪಿಸಲಾಗುವುದು. ಕೊಳಚೆ ನಿರ್ಮೂಲನೆ ಮಂಡಲಿ ನಿರ್ಮಿಸಿರುವ ಮನೆ ಇನ್ನೂ ಪೂರ್ಣಗೊಂಡಿಲ್ಲ, ಈಗಾಗಲೇ ಬಹುತೇಕ ಬಡವರಿಗೆ ಮನೆ ಹಂಚಿಕೆಯಾಗಿವೆ. ಆದರೂ, ಪೂರ್ಣಗೊಳ್ಳದ ಕಾರಣ ಬಡವರ ಬದುಕು ಡೋಲಾಯಮಾನವಾಗಿದೆ ಎಂದು ಹತ್ತಾರು ಪಲಾನುಭವಿಗಳು ಶಾಸಕರ ಗಮನಕ್ಕೆ ತಂದರು. ಶೀಘ್ರದಲ್ಲಿಯೇ ಮನೆಗಳನ್ನು ಪೂರ್ಣಗೊಳಿಸುವಂತೆ ಶಾಸಕರು ಮಂಡಳಿ ಅಧಿಕಾರಿ ಕುಮಾರ್‌ ಈಶ್ವರ್‌ಗೆ ತಾಕೀತು ಮಾಡಿದರು.

ಸಿಬ್ಬಂದಿಗಳ ಕೊರತೆಯಿದೆ: ಮುಖ್ಯಾಧಿಕಾರಿ ಕೃಷ್ಣಪ್ರಸಾದ್‌ ಮಾತನಾಡಿ, ಪುರಸಭೆಯಲ್ಲಿ ಎಂಜಿನಿಯರ್‌ ಹಾಗೂ ಸಿಬ್ಬಂದಿಗಳ ಕೊರತೆಯಿದೆ. ಹುದ್ದೆ ಭರ್ತಿಗೆ ಸರ್ಕಾರದಲ್ಲಿ ಚರ್ಚಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸಿಬ್ಬಂದಿಗಳಿಲ್ಲದಿದ್ದರೆ ಹೊರಗುತ್ತಿಗೆ ಆದಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶವಿದ್ದರೆ ಕ್ರಮ ಜರುಗಿಸಿ ಮೇಲಾಧಿಕಾರಿಗಳಿಗೆ ಶಿಪಾರಸು ಮಾಡಿದರೆ ಚರ್ಚಿಸುವುದಾಗಿ ಶಾಸಕರು ಪ್ರತಿಕ್ರಿಯಿಸಿದರು. ಪುರಸಭಾ ಸದಸ್ಯ ರಂಗಹನುಮಯ್ಯ, ಎಚ್‌. ಜೆ.ಪುರುಷೋತ್ತಮ್‌, ಶಿವಕುಮಾರ್‌,ರಿಯಾಜ್‌, ಭಾಗ್ಯಮ್ಮ ಹೇಮಲತಾ, ಮಮತಾ, ಶಿವರುದ್ರಮ್ಮ, ಅನಿಲ್‌ಕುಮಾರ್‌,ರೇಖಾ, ಎಂಜಿನಿಯರ್‌ ಪ್ರಶಾಂತ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next