ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನ ಇಲಾಖೆಗಳು ಈ ತಿಂಗಳ ಅಂತ್ಯದೊಳಗೆ ಹೆಚ್ಚಿನ ಪ್ರಗತಿ ಸಾಧಿಸುವಂತೆ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸೂಚನೆ ನೀಡಿದರು.
ಯಳಂದೂರು ತಾಪಂ ಸಭಾಂಗಣದಲ್ಲಿ ಮಂಗಳವಾರ, ತಾಲೂಕು ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎರೆಹುಳು ಗೊಬ್ಬರ ಘಟಕ, ಬದು ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳನ್ನು ತೆಗೆದುಕೊಂಡು ಮಾನವ ದಿನಗಳ ಸೃಜನೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಕ್ರಮವಹಿಸಬೇಕು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಜಿಯೋಟ್ಯಾಗ್ ಮಾಡಿ ಎಂಐಎಸ್‌ನಲ್ಲಿ ಅಪ್ ಡೇಟ್ ಮಾಡಲು ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು.
ಕೆರೆ, ಕಾಲುವೆ, ದನದ ಕೊಟ್ಟಿಗೆ, ಸೋಕ್ ಪಿಟ್ ಇತರೆ ಕಾಮಗಾರಿಗಳನ್ನು ನಿರ್ವಹಿಸ ಬೇಕು. ಈ ಮಾಹೆಯ ಅಂತ್ಯದೊಳಗೆ ನರೇಗಾ ಯೋಜನೆಯಡಿ ಹೆಚ್ಚಿನ ಪ್ರಗತಿ ಸಾಧಿಸಬೇಕು. ನರೇಗಾ ಕೂಲಿ ಪಾವತಿಸಲು ವಿಳಂಬವಾಗಿರುವ ಗ್ರಾಪಂಗಳು ವಿಳಂಬಕ್ಕೆ ಆಸ್ಪದ ನೀಡದೇ ಕೂಲಿ ಪಾವತಿಸಲು ಕ್ರಮವಹಿಸಬೇಕು ಎಂದು ಹೇಳಿದರು. ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಕ್ರಿಯಾ ಯೋಜನೆಯನ್ನು ತಯಾರಿಸಬೇಕು ಎಂದು ಜಿಪಂ ಸಿಇಒ, ಪಿಡಿಒಗಳಿಗೆ ಸೂಚನೆ ನೀಡಿದರು.
ಸ್ಮಶಾನ ಅಭಿವೃದ್ಧಿಗೆ ಕ್ರಮ: ಎನ್.ಆರ್. ಎಲ್.ಎಂ ಶೆಡ್ ನಿರ್ಮಾಣ ಸಂಬಂಧ ಸ್ಥಳ ಗುರುತಿಸಿರುವ ಗ್ರಾಪಂಗಳಲ್ಲಿ ಈ ವಾರದೊಳ ಗಾಗಿ ಕಾಮಗಾರಿಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು. ಸ್ಮಶಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಮೀನು ಲಭ್ಯವಿಲ್ಲದ ಪಿಡಿಒಗಳು ಸಂಬಂಧಪಟ್ಟ ತಹಶೀಲ್ದಾರ್‌ಗೆ ಜಮೀನು ಮಂಜೂರು ಮಾಡಿಕೊಡುವ ಕುರಿತ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಈಗಾಗಲೇ ಜಮೀನು ಮಂಜೂರಾಗಿರುವ ಕಡೆ ಸ್ಮಶಾನ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಗ್ರಂಥಾಲಯಗಳ ಕಟ್ಟಡಗಳ ನಿರ್ಮಾಣ: ಗ್ರಾಪಂಗಳಲ್ಲಿನ ಡಿಜಿಟಲ್ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಕ್ರಮವಹಿಸಬೇಕು. ಗ್ರಂಥಾಲಯ ಕಟ್ಟಡವು ಹಳೆಯದಾಗಿದ್ದಲ್ಲಿ ದುರಸ್ತಿಗೊಳಿಸಬೇಕು. ಜಾಗ ಲಭ್ಯತೆ ಇದ್ದಲ್ಲಿ ಕೂಡಲೇ ಗ್ರಂಥಾಲಯಗಳ ಕಟ್ಟಡಗಳ ನಿರ್ಮಾಣ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಸೇವೆ ನೀಡಿ: ವಸತಿ ಯೋಜನೆಗೆ ಸಂಬಂಧಿಸಿದಂತೆ ಛಾವಣಿ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ ಜಿಪಿಎಸ್‌ಗೆ ಅಳವಡಿಸಬೇಕು. ಗ್ರಾಪಂ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಎಲ್ಲಾ ರೀತಿಯ ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ವಿವರಿಸಿದರು.
ಕಸ ಸಂಗ್ರಹಣೆಗೆ ಅಗತ್ಯ ಕ್ರಮವಹಿಸಿ: ಘನತ್ಯಾಜ್ಯ ನಿರ್ವಹಣಾ ಘಟಕ ಅನುಷ್ಠಾನ ಸಂಬಂಧ ಈಗಾಗಲೇ ನಿವೇಶನ ಲಭ್ಯವಿರುವ ಗ್ರಾಪಂಗಳು ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿ ಕೆಲಸಗಳನ್ನು ಪ್ರಾರಂಭಿಸ ಬೇಕು. ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಬಾಕಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಗ್ರಾಪಂಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮಹಿಳಾ ಸ್ವ-ಸಹಾಯ ಸಂಘಗಳಿಂದ ಕಸ ಸಂಗ್ರಹಣೆಗೆ ಅಗತ್ಯ ಕ್ರಮವಹಿಸಬೇಕೆಂದು ಕೆ.ಎಂ. ಗಾಯತ್ರಿ ಸೂಚಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಹಾಯಕ ಯೋಜನಾಧಿಕಾರಿ ಪ್ರೇಮ್‌ಕುಮಾರ್, ಯಳಂದೂರು ತಾಪಂ ಇಒ ಉಮೇಶ್ ಇತರರು ಸಭೆಯಲ್ಲಿ ಹಾಜರಿದ್ದರು.