Advertisement

ಅರ್ಹರಿಗೆ ವಸತಿ ಯೋಜನೆ ತಲುಪಿಸಿ: ಸೋಮಣ್ಣ

01:20 PM Aug 26, 2020 | Suhan S |

ಚಾಮರಾಜನಗರ: ವಸತಿ ಇಲಾಖೆಯಡಿ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಗಳನ್ನು ಬಡವರು, ಅರ್ಹರಿಗೆ ಶೀಘ್ರ ತಲುಪಿಸಿ ಅನುಕೂಲ ಕಲ್ಪಿಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಭಾಂಗಣದಲ್ಲಿ, ವಸತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಗೃಹ ಮಂಡಳಿ, ರಾಜೀವಗಾಂಧಿ ವಸತಿ ನಿಗಮ, ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ಇಲಾಖೆಯಲ್ಲಿ ಹೊಸ ಬದಲಾವಣೆ ಆಗಬೇಕಾದರೆ ಕೊಳಗೇರಿಗಳಲ್ಲಿ ಮನೆ ನಿರ್ಮಾಣ ಹಾಗೂ ಮೂಲ ಸೌಕರ್ಯವನ್ನು ಒದಗಿಸಿ ಕೊಡಬೇಕು. ರಾಜೀವ್‌ ಗಾಂಧಿ ವಸತಿ ನಿಗಮ, ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಡಾ. ಬಿ.ಆರ್‌ ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾಗದ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಧಿಕಾರಿಗಳು ವಸತಿ ಯೋಜನೆ ಸಂಬಂಧ ದಾಖಲೆಗಳನ್ನು ಕೂಡಲೇ ಪರಿಶೀಲಿಸಿ ಹಣ ಬಿಡುಗಡೆಗೆ ಮಾಡಿಸಿ ಎಂದು ತಿಳಿಸಿದರು.

ವಸತಿ ಸಂಕೀರ್ಣ ನಿರ್ಮಾಣ: ಪ್ರಸ್ತುತ 30 ಎಕರೆ ಸರ್ಕಾರಿ ಜಮೀನು ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಗೃಹ ಮಂಡಳಿಯಿಂದ ಬೃಹತ್‌ ಬಡಾವಣೆ, ವಸತಿ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶವಿದೆ. ಇದಕ್ಕಾಗಿ 100 ಎಕರೆ ಜಮೀನನ್ನು ಜಿಲ್ಲಾಡಳಿತ ಗುರುತಿಸಿ ನೀಡಿದ್ದಲ್ಲಿ ಹಣವನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಕ್ರಮವಹಿಸುವುದಾಗಿ ಅವರು ತಿಳಿಸಿದರು.

ಕಾರ್ಮಿಕರಿಗೆ ಸೂರು ಕಲ್ಪಿಸಿ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸಿಸುತ್ತಿರುವ ಪೌರ ಕಾರ್ಮಿಕರಿಗೆ ಸೂರು ಕಲ್ಪಿಸಿಕೊಡುವುದು ಮುಖ್ಯ ಧ್ಯೇಯವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಅವಶ್ಯವಿರುವ ಜಾಗ ಗುರುತಿಸಿ ನೀಲನಕ್ಷೆಯನ್ನು ತಯಾರಿಸಿ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಗುಡ್ಡಗಾಡು ಜನರು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು. ಜಿಲ್ಲೆಯ ಹನೂರು ತಾಲೂಕಿನಲ್ಲಿ ವಸತಿ ಯೋಜನೆಗೆ ವಿಶೇಷ ಗಮನ ನೀಡಲಾಗುವುದು. ಎಲ್ಲಾ ತಾಲೂಕುಗಳಲ್ಲಿಯು ವಸತಿ ಯೋಜನೆಯಡಿ ಮನೆ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇರೆಗೆ ಅನುಷ್ಟಾನ ಮಾಡಲಾಗುವುದು ಎಂದರು.

Advertisement

ನೀಲ ನಕಾಶೆ ಸಿದ್ಧ: ಜಿಲ್ಲಾಧಿಕಾರಿ ಡಾ. ಎಂ. ಆರ್‌ ರವಿ ಮಾತನಾಡಿ, ಜಿಲ್ಲೆಯಲ್ಲಿ 50 ಸಾವಿರ ವಸತಿ ರಹಿತರು 38 ಸಾವಿರಕ್ಕೂ ಹೆಚ್ಚು ನಿವೇಶನ ರಹಿತರು ಇದ್ದಾರೆ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ವಸತಿ ಯೋಜನೆ ಅನುಷ್ಠಾನ ಕುರಿತು ನೀಲ ನಕಾಶೆ ಸಿದ್ಧಪಡಿಸಲಾಗುವುದು ಎಂದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ ಮಾತನಾಡಿದರು. ಶಾಸಕ ಸಿ.ಎಸ್‌ ನಿರಂಜನ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಆರ್‌. ಧರ್ಮಸೇನ, ಜಿಪಂ ಅಧ್ಯಕ್ಷೆ ಅಶ್ವಿ‌ನಿ, ಉಪಾಧ್ಯಕ್ಷೆ ಶಶಿಕಲಾ, ಮುಖ್ಯ ನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣ್‌ ರಾವ್‌, ಸದಸ್ಯ ಆರ್‌. ಬಾಲರಾಜು ಉಪಸ್ಥಿತರಿದ್ದರು.

ಕ್ರಿಯಾ ಯೋಜನೆ ಸಿದ್ಧ : ವಸತಿ ಯೋಜನೆಗೆ ಸರ್ಕಾರದಿಂದ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಇದರ ಸದುಪಯೋಗವಾಗಬೇಕಿದೆ. ಮನೆಗಳ ಪ್ರಗತಿ ಹಂತದಲ್ಲಿದ್ದು, ಸಂಪೂರ್ಣ ಪ್ರಗತಿಯನ್ನು ಸಾಧಿಸಲು ಎಲ್ಲರ ಪರಿಶ್ರಮ ಅಗತ್ಯ. ಬುಡಕಟ್ಟು ಸಮುದಾಯದ ಆದಿವಾಸಿಗಳು, ಅರಣ್ಯವಾಸಿಗಳು ವಾಸಿಸುವ ಮನೆಯನ್ನು ಪುನರ್‌ ನಿರ್ಮಾಣ ಮಾಡಲು ಅವರಿಗೆ ಬೇಗ ಯೋಜನೆ ತಲುಪುವಂತೆ ಮಾಡಬೇಕು. ಜಿ.ಪಿ.ಎಸ್‌ ನಿಂದ ಅಡಚಣೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next