ಹಾಸನ: ಅಲ್ಪ ಸಂಖ್ಯಾತರ ಮಕ್ಕಳಿಗೆ ಗುಣಮಟ್ಟದಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ಹಾಗೂ ವಿಭಾಗಕ್ಕೊಂದು ಪಾಲಿಟೆಕ್ನಿಕ್ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಜವಳಿ, ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾ ಸಾಹೇಬ ಪಾಟೀಲ್‌ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 30 ಕೈಗಾರಿಕಾ ತರಬೇತಿ ಕೇಂದ್ರ, 4 ಪಾಲಿಟೆಕ್ನಿಕ್‌ಗಳ ಆರಂಭಕ್ಕೆ ಅನುಮೋದನೆ ಕೋರಿ ಕೇಂದ್ರ ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಲಾಗಿದೆ. ಈ ತಿಂಗಳಿನಲ್ಲಿಯೇ ಮಂಜೂರಾತಿ ದೊರೆಯುವ ನಿರೀಕ್ಷೆಯಿದ್ದು, ಎಲ್ಲಮೂಲ ಸೌಕರ್ಯ ಮಾಡಿಕೊಂಡು ಮುಂದಿನ ಶೈಕ್ಷಣಿಕವರ್ಷದಿಂದ ಅಲ್ಪಸಂಖ್ಯಾತರ ಐಟಿಐ ಮತ್ತುಪಾಲಿಟೆಕ್ನಿಕ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಮೀಸಲಾತಿ ನಿಗದಿ: ಈ ಸಂಸ್ಥೆಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಅನುದಾನ ನೀಡಲಿದೆ. ಪ್ರವೇಶಾತಿಯಲ್ಲಿ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿ ಸಮುದಾಯದವರಿಗೆ ಶೇ.75, ಇತರರಿಗೆ ಶೇ.25ಮೀಸಲಾತಿ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಪಾಲಿಟೆಕ್ನಿಕ್ ಕಾಲೇಜು ತೆರೆಯಿರಿ: ಅಲ್ಪ ಸಂಖ್ಯಾತರಲ್ಲಿ ಶೇ.90 ಬಡವರಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಉದ್ಯೋಗಾವಕಾಶ ಕಲ್ಪಿಸಿದರೆ ಮಾತ್ರ ಅವರು ಬಡತನ ರೇಖೆಗಿಂತ ಮೇಲೆ ಬರಲು ಸಾಧ್ಯವಾಗುತ್ತದೆ. ಹಾಗಾಗಿ ಅಲ್ಪಸಂಖ್ಯಾತರಿಗಾಗಿಯೇ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ನಿಟ್ಟಿನಲ್ಲಿ ಐಟಿಐ ಹಾಗೂ ಪಾಲಿಟೆಕ್ನಿಕ್ ತೆರೆಯಲಾಗುತ್ತಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ಸ್ ಉದ್ಯಮ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಕೆಐಡಿಬಿಯ ವಿಶೇಷ ಆರ್ಥಿಕ ವಲಯದಲ್ಲಿ ಕೇವಲ 13 ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಉದ್ಯಮಗಳ ಸ್ಥಾಪಿಸಲು ಇನ್ನೂ ಸಾಕಷ್ಟು ಭೂಮಿ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಇದೆ. ಮುಂದಿನ ದಿನಗಳಲ್ಲಿ ಟೆಕ್ಸ್‌ಟೈಲ್ಸ್ ಉದ್ಯಮಿಗಳು ಹಾಸನದಲ್ಲಿ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.