ಕೋಲಾರ: ಸರ್ಕಾರದ ವಿವಿಧ ಯೋಜನೆಗಳ ಮೂಲಕ ಜಿಲ್ಲೆಯಲ್ಲಿರುವ ಕಲ್ಯಾಣಿಗಳನ್ನು ಸುಂದರ ಗೊಳಿಸಲು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಹೆಚ್ಚು ಕೆಲಸ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಗ್ರಾಮಾಂತರ ಶಾಲೆಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಗಾಗಿ ಆದೇಶ ಮಾಡಲಾಯಿತು. ಶಾಲಾ ಹಂತದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾರ್ಯಕ್ರಮ ರೂಪಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ಗ್ರಾಪಂ ವತಿಯಿಂದ ಗ್ರಂಥಾಲಯದ ಕಾರ್ಡ್ ವಿತರಿಸಬೇಕು ಎಂದರು.
ಕೋವಿಡ್ ಸಮಯದಲ್ಲಿ ವಲಸೆ ಹೋದ ವಿದ್ಯಾರ್ಥಿ ಗಳ ದಾಖಲಾತಿ ಬಗ್ಗೆ ಮಾಹಿತಿ ಸಂಗ್ರಹಿಸ ಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.ವಿವಿಧ ತರಬೇತಿ: ಈ ವರ್ಷದಲ್ಲಿ ಕೃಷಿ ಚಟುವಟಿಕೆ ಉತ್ತಮವಾಗಿದೆ. ಪಂಚಾಯತಿಗಳು ಸೂಕ್ತವಾಗಿ ತೆರಿಗೆ ವಸೂಲಿ ಮಾಡಬೇಕು. ಗ್ರಾಮೀಣ ಭಾಗದಲ್ಲಿಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು. ಮಹಿಳೆಯರು ಕಸ ವಿಲೇವಾರಿ ವಾಹನಗಳನ್ನು ಚಲಾಯಿಸುವಂತೆ ಆಗಬೇಕು. ನಿರ್ಮಿತಿ ಕೇಂದ್ರಗಳಲ್ಲಿ ಮಹಿಳೆಯರಿಗೆ ವಿವಿಧ ತರಬೇತಿ ನೀಡಬೇಕು ಎಂದರು.
ಕೃಷಿ ಚಟುವಟಿಕೆ ಹೆಚ್ಚು: ಹಾಲು ಉತ್ಪಾದನೆಯಲ್ಲಿ ಕೋಲಾರ 2ನೇ ಸ್ಥಾನದಲ್ಲಿದ್ದು, ಪಶುಗಳ ಆರೈಕೆ ಮಾಡುವ ಜೊತೆ ಜೊತೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯ ಸ್ಥಳೀಯ ಪ್ರವಾಸದ್ಯೋಮಕ್ಕೆ ಪ್ರೋತ್ಸಾಹಿಸಬೇಕು. ಕೆ.ಸಿ.ವ್ಯಾಲಿ ನೀರಿನ ಹರಿವಿನಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
9 ತಿಂಗಳಿಗೆ ಆಗುವಷ್ಟು ಮೇವು ಲಭ್ಯ :
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲೆಯಲ್ಲಿ ಕಸ ವಿಲೇವಾರಿ ಪ್ರಮುಖ ಸಮಸ್ಯೆಯಾಗಿದೆ ಮತ್ತು ಮಾರುಕಟ್ಟೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು. ಮೈಕ್ರೋ ಎಂಟರ್‌ಪ್ರೈಸಸ್‌ನಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸಬೇಕು. ಜಿಲ್ಲೆಯಲ್ಲಿ 9 ತಿಂಗಳಿಗೆ ಸಾಕಾಗುವಷ್ಟು ಜಾನುವಾರು ಮೇವು ಲಭ್ಯವಿದೆ. ತಾಲೂಕು ಆಸ್ಪತ್ರೆಗಳಲ್ಲಿಕೋವಿಡ್ ಲಸಿಕೆಯ ಬಗ್ಗೆ ಸರಿಯಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.