ಚಿಕ್ಕಬಳ್ಳಾಪುರ: ಜಿಲ್ಲೆಯ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ನಗರದ ಎಲ್ಲಾ ಬೀದಿಗಳಲ್ಲೂ ವಿದ್ಯುತ್ ದೀಪದ ಬದಲಾಗಿ ಎಲ್‌ಇಡಿ ದೀಪ ಅಳವಡಿಕೆ ಉಪಯುಕ್ತವಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಬಳಿಕ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲುಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 158 ವಾರ್ಡ್‌ಗಳಿದ್ದು, 24,802 ಕಂಬಗಳಲ್ಲಿ 19,538 ಬೀದಿ ದೀಪಗಳಿವೆ. ಅದರಲ್ಲಿ ಶೇ.12ರಷ್ಟು ಎಲ್‌ಇಡಿ ದೀಪ ಇರುವುದರಿಂದ, ಜಿಲ್ಲಾದ್ಯಂತ ಪೂರ್ಣವಾಗಿ ಎಲ್‌ಇಡಿ ದೀಪ ಅಳವಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಹಾಗೆಯೇ ವಿದ್ಯುತ್ ಬಿಲ್ ಅನ್ನು ತಗ್ಗಿಸಿದಂತಾಗುವುದರ ಜತೆಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಶೀಘ್ರದಲ್ಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಎಲ್ ಇಡಿ ಅಳವಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆಯಾದಕೂಡಲೇ ತುರ್ತಾಗಿ ಟೆಂಡರ್ ಕರೆದುಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ನಿರ್ವಹಣೆ ಮಾಡಿ: ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಿ, ಕಸ ವಿಂಗಡಣೆ ಅತಿ ಮುಖ್ಯ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡುತ್ತಿರುವ ಮಾದರಿಯಲ್ಲೇ ಇತರೆ ತಾಲೂಕುಗಳ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದ ಜಿಲ್ಲಾಧಿಕಾರಿಗಳು, ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ಮನೆಗಳಲ್ಲಿ ಕಸ ವಿಂಗಡಣೆ ಮಾಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು. ಹೀಗೆ ಸಂಗ್ರಹವಾದ ಕಸವನ್ನು ವೈಜ್ಞಾನಿಕ ವಿಂಗಡಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಜರುಗಿಸಲಾಗುವುದುಎಂದುಎಚ್ಚರಿಕೆ ನೀಡಿದರು.
ಸರ್ವೇ ಮಾಡಲಾಗಿದೆ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಣುಕಾ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂಧನ ಕಾರ್ಯಕ್ಷಮತೆ ಸಾಧಿಸುವ ಸಂಬಂಧ ಸಿಸಿಎಂಎಸ್(ಸೆಂಟ್ರಲ್ ಕಂಟ್ರೋಲ್ ಅಂಡ್ ಮಾನಿಟರಿಂಗ್ ಸಿಸ್ಟಿಂ) ಮೂಲಕ ಬೀದಿ ದೀಪಗಳ ನಿರ್ವಹಣೆಗೆ ಪೌರಾಡಳಿತ ನಿರ್ದೇಶನಾಲಯದ ಟ್ರ್ಯಾನ್ಸಾಕ್ಷನ್ ಅಡ್ವೈಸರ್ ಆಗಿರುವ ಪ್ರೈಸ್ ವಾಟ್‌ಹೌಸ್ ಕಾಪರ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ಸರ್ವೇಗೆ ಸೂಚಿಸಲಾಗಿತ್ತು. ಅದರಂತೆ ಸದರಿಯವರು ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ವೇ ಮಾಡಿ, ಒಟ್ಟು 24,802 ಕಂಬಗಳಲ್ಲಿ 19,538 ಬೀದಿ ದೀಪಗಳಿದ್ದು, ಅದರಲ್ಲಿ ಶೇ.12 ಎಲ್‌ಇಡಿ ದೀಪ ಇರುವುದಾಗಿ ಮಾಹಿತಿ ನೀಡಿದ್ದಾರೆಂದರು.
ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರರು, ಜಿಲ್ಲೆಯ ಎಲ್ಲಾ ಪೌರಾಯುಕ್ತರು, ಎಲ್ಲಾ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಸ್ವಚ್ಛ ಸರ್ವೇಕ್ಷಣಾ ಅಭಿಯಾನಯನ್ನುಯಶಸ್ವಿಗೊಳಿಸಲು ಹೆಚ್ಚಿನ ರೀತಿಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತಾ ಕ್ಯಾಪ್ಟನ್ ನೇಮಕ ಮಾಡಿ, ಸ್ವತ್ಛತಾಕಾರ್ಯದ ಬಗ್ಗೆ ಪ್ರತಿನಿತ್ಯ ಮಾಹಿತಿ ನೀಡಬೇಕು.
–ಆರ್.ಲತಾ, ಜಿಲ್ಲಾಧಿಕಾರಿ