ಯಾದಗಿರಿ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದ ವಸತಿ ರಹಿತ ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ಹಕ್ಕುಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ, ವಸತಿ ಮತ್ತು ನಿವೇಶನಗಳ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ತಾಲೂಕುವಾರು ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ವಸತಿ ರಹಿತರ ಪಟ್ಟಿ ಆಧಾರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ಗುರುತಿಸಿ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದರು.
ಇದಕ್ಕು ಮೊದಲು ಜಿಪಂ ಯೋಜನಾಧಿಕಾರಿ ಗುರುನಾಥರಿಂದ ಗ್ರಾಪಂ ವ್ಯಾಪ್ತಿಗಳಲ್ಲಿ ನಿವೇಶನ ರಹಿತರು ಮತ್ತು ಸರ್ಕಾರಿ ಜಮೀನು ಲಭ್ಯತೆ ಕುರಿತು ಮಾಹಿತಿ ಪಡೆದರು. ಸರ್ಕಾರಿ ಜಮೀನು ಇಲ್ಲದಿದ್ದ ಪಕ್ಷದಲ್ಲಿ ಅಧಿಕಾರಿಗಳು ದೃಢೀಕರಣ ಸಲ್ಲಿಸಿದರೆ ಖಾಸಗಿ ಪಟ್ಟೆದಾರರಿಂದ ಜಮೀನು ಖರೀದಿ ಕುರಿತು ಚಿಂತಿಸಿ ಅವಶ್ಯಕತೆಯಿದ್ದರೆ ಜಮೀನು ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ನಗರದ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ ಹಾಗೂ ಪಪಂಗಳು ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿ ಕಾರಿಗಳಿಂದ ಮಾಹಿತಿ ಪಡೆದರು.
ಸಮರ್ಪಕ ಘನತ್ಯಾಜ್ಯ ನಿರ್ವಹಣೆ ಜವಾಬ್ದಾರಿಂದ ನಿರ್ವಹಿಸುವಂತೆ ಸೂಚಿಸಿದರು. ಬಳಿಕ ವಿವಿಧ ಘನತ್ಯಾಜ್ಯ ನಿರ್ವಹಣಾ ಅಭಿವೃದ್ಧಿ ಕಾಮಗಾರಿ ಎಲ್ಲ ಸ್ಥಳೀಯ ಸಂಸ್ಥೆಗಳು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆ ಸಿಬ್ಬಂದಿಗಳ ಅಧಿಕಾರಿಗಳಿಂದ ವಿವರಣೆ ಕೇಳಿದ ಡಿಸಿ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಿ ಸಮರ್ಪಕ ನಿರ್ವಹಣೆ ಮಾಡುವಂತೆ ತಾಕೀತು ಮಾಡಿದರು. ಸ್ಥಳೀಯ ಸಂಸ್ಥೆಗಳು ಒಣ ಮತ್ತು ಹಸಿ ಕಸ ಬೇರ್ಪಡಿಸಿ ಸಂಗ್ರಹಿಸುತ್ತಿರುವ ಕುರಿತು ಖಾತರಿ ಪಡಿಸಿಕೊಂಡರು. ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರ್ ಗೌಡ ಸೋಮನಾಳ ಸೇರಿದಂತೆ ತಹಶೀಲ್ದಾರರು, ತಾಪಂ ಇಒಗಳು, ನಗರಸಭೆ, ಪುರಸಭೆ ಅಧಿಕಾರಿಗಳು, ಪರಿಸರ ಇಂಜಿನಿಯರ್‌ಗಳು ಇದ್ದರು.