ದೇವದುರ್ಗ: ಕೃಷಿ ರೈತರ ಜೀವನಾಧಾರವಾಗಿದೆ. ಸುಸ್ಥಿರ ಕೃಷಿ, ಸಮಗ್ರ ಬೇಸಾಯ ಪದ್ಧತಿಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಸ್.ಪ್ರಿಯಾಂಕಾ ಹೇಳಿದರು.
ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದಿಂದ ಪಟ್ಟಣದ ಮುರಿಗೆಪ್ಪ ಖೇಣೇದ ಸಭಾಂಗಣದಲ್ಲಿ ಸೋಮವಾರ ನಡೆದ ರೈತರ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಹಲವು ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಬಿತ್ತನೆಗೂ ಮುನ್ನ ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಪಡೆಯಬೇಕು. ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕ ಹೆಚ್ಚು ಬಳಸದೇ ಸಾವಯವ ರಸಗೊಬ್ಬರ ಬಳಸಬೇಕು. ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ಸುಸ್ಥಿರ ಕೃಷಿಯಲ್ಲಿ ತೊಡಗಬೇಕು ಎಂದರು.
ರೈತರು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೃಷಿ ಸಲಕರಣೆಗಳಿಗಾಗಿ ಪರಾವಲಂಬಿಯಾಗಿದ್ದಾರೆ. ಈ ಹಿಂದೆ ರೈತರೇ ಬಿತ್ತನೆ ಬೀಜ ಆಯ್ದು ತೆಗೆದಿರಿಸುತ್ತಿದ್ದರು. ಹೊಲಕ್ಕೆ ಕೊಟ್ಟಿಗೆ ಗೊಬ್ಬರ, ಗೋಮೂತ್ರ, ಬೀಜಾಮೃತ ತಾವೇ ತಯಾರಿಸುತ್ತಿದ್ದರು. ಇದರಿಂದ ಕಡಿಮೆ ಖರ್ಚಿನಲ್ಲಿ ವಿಷಮುಕ್ತ ಆಹಾರಧಾನ್ಯ ಉತ್ಪಾದಿಸುತ್ತಿದ್ದರು. ಇದರಿಂದ ಅಧಿಕ ಇಳುವರಿ ಪಡೆಯುತ್ತಿದ್ದರು. ನಮ್ಮ ಪೂರ್ವಿಕರು ಕೃಷಿಯನ್ನು ಉದ್ಯಮ ಎನ್ನದೇ, ಕಲೆ, ಜೀವನ ಪದ್ಧತಿಯಾಗಿ ಸ್ವೀಕರಿಸಿದ್ದರು. ಯಾವುದೇ ವಸ್ತುಗಳನ್ನು ಹಣ ಕೊಟ್ಟು ಖರೀದಿ ಮಾಡದೆ, ತಮ್ಮ ಹೊಲದಲ್ಲೇ ಬೆಳೆಯುತ್ತಿದ್ದರು. ಆದರೆ, ಇಂದು ವಾಣಿಜ್ಯ, ಹೈಬ್ರಿಡ್ ಬೆಳೆಯತ್ತ ವಾಲಿದ್ದರಿಂದ ರೈತರು ಪರಾವಲಂಬಿ ಆಗುವಂತಾಗಿದೆ. ಜೊತೆಗೆ ಕೃಷಿಗೆ ಅಧಿಕ ಖರ್ಚು ಮಾಡುತ್ತಿದ್ದಾರೆ. ರೈತರು ತಮ್ಮ ಪಾರಂಪರಿಕ ಕೃಷಿ ಪದ್ಧತಿ ಮರೆಯಬಾರದು ಎಂದರು.
ರೈತರು ಸಿರಿಧಾನ್ಯ ಬೆಳೆಯುವ ಜೊತೆಗೆ ಕೃಷಿಗೆ ಪೂರಕವಾದ ಕುರಿ, ಕೋಳಿ, ಜೇನು ಸಾಕಣೆ, ಹೈನುಗಾರಿಕೆ, ಅರಣ್ಯ ಕೃಷಿ ಮಾಡಬೇಕು. ಶೂನ್ಯ ಬಂಡವಾಳ ಕೃಷಿಯಲ್ಲಿ ತೊಡಗಬೇಕು ಎಂದರು. ಕೃಷಿಕ ಸಮಾಜ ಸದಸ್ಯ ಹನುಮಂತ್ರಾಯ, ಕೃಷಿಕ ಸಮಾಜ ಅಧ್ಯಕ್ಷ ಬಸವರಾಜ ಗೌರಂ ಪೇಟೆ, ರೈತ ಹನುಮರೆಡ್ಡಿ, ಕೀಟ ತಜ್ಞೆ ಡಾ| ಶ್ರೀವಾಣಿ, ಡಾ| ಅಶ್ವತ್ಥ ನಾರಾಯಣ, ಮೌನೇಶ, ಶಿವಪ್ಪ ಇತರರು ಇದ್ದರು. ಸಾಧಕ ರೈತರಿಗೆ ಸನ್ಮಾನ: ರೈತರ ದಿನಾಚರಣೆ ಅಂಗವಾಗಿ ತಾಲೂಕಿನ ಐವರು ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ರೇಷ್ಮೆ ಬೆಳೆಯಲ್ಲಿ ಉತ್ತಮ ಸಾಧನೆ ತೋರಿದ ದಿಲೀಪ ಆಲ್ಕೋಡ್, ಸಿರಿಧಾನ್ಯ ಬೆಳೆದ ಸೋಫಿಸಾಬ್ ಗಾಣಧಾಳ, ಸಮಗ್ರ ಕೃಷಿ ಸಾಧಕ ಹೊನ್ನಪ್ಪ ಗುಂಡಗುರ್ತಿ, ಅರಣ್ಯ ಕೃಷಿಕ ಚಂದ್ರಶೇಖರ, ತೋಟಗಾರಿಕೆ ಕೃಷಿಕ ಹನುಮರೆಡ್ಡಿ ಹಾಗೂ ರೈತ ಮಹಿಳೆ ಮಲ್ಲಮ್ಮ ಅವರನ್ನು ಕೃಷಿ ಇಲಾಖೆಯಿಂದ ಗೌರವಿಸಲಾಯಿತು.