ಗದಗ: ಕಾಲಕ್ಕೆ ತಕ್ಕಂತೆ ಆಗುತ್ತಿರುವ ತಂತ್ರಜ್ಞಾನ ಬಳಕೆಯಿಂದ ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣಬೇಕು. ಆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಶಾಸಕ ಎಚ್.ಕೆ.ಪಾಟೀಲ ಸಲಹೆ ನೀಡಿದರು.
ಟ್ಯಾಲಿ ಪ್ರೋ ಸಲ್ಯೂಷನ್ಸ್ ಆಶ್ರಯದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ನಡೆದ ದತ್ತಿ ಉಪನ್ಯಾಸದಲ್ಲಿ ಇ-ವೇ ಬಿಲ್, ಇ-ಇನ್‌ವೈಸಿಂಗ್ ಟ್ಯಾಲಿಯಲ್ಲಿ ಲೆಕ್ಕ ಪತ್ರ ನಿರ್ವಹಣೆ ಕುರಿತ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಡಿಜಿಟಲೀಕರಣದತ್ತ ಹೆಚ್ಚೆಚ್ಚು ತೆರೆದುಕೊಳ್ಳುತ್ತಿದೆ ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗುತ್ತಿವೆ. ಅವುಗಳಿಂದಾಗಿ ವ್ಯಾಪಾರ, ವಹಿ ವಾಟು ಮತ್ತು ಸಂಪರ್ಕ ಮಾಧ್ಯಮಗಳಲ್ಲಿ ಭಾರೀ ಸುಧಾ ರಣೆ ಕಂಡಿವೆ. ಅದರ ಮುಂದುವರಿದ ಇ-ವೇ ಬಿಲ್, ಇನ್‌ವೈಸಿಂಗ್ ಟ್ಯಾಲಿ ಕುರಿತು ಸಪರ್ಕವಾಗಿ ಮಾಹಿತಿ ಪಡೆದುಕೊಳ್ಳಬೇಕು. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸುಧಾರಣೆ ಕಾಣಬೇಕೆಂದರು.
ಉದ್ಯಮಿಗಳು ಪ್ರಾಮಾಣಿಕತೆಯಿಂದ ತೆರಿಗೆ ಪಾವತಿಸಬೇಕು. ಅಂದಾಗ ಮಾತ್ರ ಆರ್ಥಿಕವಾಗಿ ಸುಭದ್ರ ರಾಷ್ಟ್ರವನ್ನಾಗಿಸಲು ಸಾಧ್ಯವಾಗುತ್ತದೆ. ಸ್ವಾಭಿಮಾನ ವ್ಯವಹಾರಕ್ಕೆ, ಸ್ವಾಭಿಮಾನ ಉತ್ಪಾದನೆಗೆ ಚೇಂಬರ್ ಧ್ವನಿಯಾಗಬೇಕು. ದೇಶದ ವಾಣಿಜ್ಯ, ಉದ್ಯಮ ಮತ್ತು ಕೈಗಾರಿಕೆಯಲ್ಲಿ ಆಗಬೇಕಾದ ಬದಲಾವಣೆ, ಸುಧಾರಣೆಗಳ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ಗಟ್ಟಿಯಾಗಿ ಧ್ವನಿ ಎತ್ತಬೇಕೆಂದು ಹೇಳಿದರು.
ಬೆಂಗಳೂರು ಮೂಲದ ಟ್ಯಾಲಿ ಹಿರಿಯ ವ್ಯವಸ್ಥಾಪಕ ಷಣ್ಮುಖ ಜಿ. ಉಪನ್ಯಾಸ ನೀಡಿ, ಇಂದಿನ ದಿನಗಳಲ್ಲಿ ಬಹುತೇಕ ಆರ್ಥಿಕ ವ್ಯವಹಾರಗಳು ತಂತ್ರಜ್ಞಾನ ಆಧಾರಿತವಾಗಿವೆ. ವ್ಯಾಪಾರಸ್ಥರು 50 ಸಾವಿರ ರೂ. ಮೇಲೆ ಇದ್ದರೆ ತಮ್ಮ ಗೂಡ್ಸ್‌ಗಳನ್ನು ಮಾರಾಟ ಮತ್ತು ಸಾಗಾಣಿಕೆ ಸಂದರ್ಭದಲ್ಲಿ ಇ-ವೇ ಬಿಲ್ ತೆಗೆದುಕೊಳ್ಳಬೇಕಾಗುತ್ತದೆ. ಅದರ ರಶೀದಿಯನ್ನು ವಾಹನದ ಜೊತೆಗೆ ತೆಗೆದುಕೊಂಡು ಹೋಗುವುದು ಕಡ್ಡಾಯ. ಚೆಕ್‌ಪೋಸ್ಟ್ ಸೇರಿದಂತೆ ಯಾವುದೇ ಭಾಗದಲ್ಲಿ ವಾಹನ ತಪಾಸಣೆಗೆ ಒಳಪಡಿಸಿದಾಗ ಇ-ವೇ ಬಿಲ್ ಪ್ರಸ್ತುತಪಡಿಸಬೇಕು. ಇಲ್ಲವೇ, ದಂಡ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೋರ್ವ ಅತಿಥಿ ಉಪನ್ಯಾಸಕ ಟ್ಯಾಲಿ ವಿಶ್ಲೇಷಕ ಗೋಪಾಲ ಬಿ.ಐ. ಪ್ರಸ್ತಾವಿಕವಾಗಿ ಮಾತನಾಡಿ, ಟ್ಯಾಲಿ ಅವಳವಡಿಸಿಕೊಳ್ಳುವಿಕೆ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಮನ ಗೌಡ ಬಿ. ದಾನಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಗೌರವ ಕಾರ್ಯದರ್ಶಿ ಹರೀಶಕುಮಾರ ಎಸ್. ಶಹಾ, ಟ್ಯಾಲಿ ಸಲ್ಯೂಷನ್‌ನ ಶ್ರೀನಿವಾಸ ಬಿ., ಸಂಸ್ಥೆಯ ಪದಾಧಿ ಕಾರಿಗಳು ಉಪಸ್ಥಿತರಿದ್ದರು.