ವಿಟ್ಲ : ತುಳುನಾಡಿನ ಸಂಸ್ಕೃತಿ ವಿಶಿಷ್ಟವಾಗಿದೆ. ತುಳುನಾಡಿನ ಆಹಾರ ಪದ್ಧತಿಯೂ ವಿಶಿಷ್ಟವೂ, ಶ್ರೇಷ್ಠವೂ ಆಗಿದೆ. ಎಲ್ಲೆಡೆ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ತುಳುನಾಡು ಹಾಗೂ ತುಳು ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು. ಆದರೆ ತುಳುನಾಡಿನ ಸಂಸ್ಕೃತಿ ನಾಶವಾಗಲು ನಾವೇ ಕಾರಣರಾಗುತ್ತಿದ್ದೇವೆ. ತುಳು ಭಾಷೆಯಲ್ಲಿ ಮಾತನಾಡುವುದೆಂದರೆ ತಾತ್ಸಾರವಾಗುತ್ತೇವೆ ಎಂಬ ಭಯ ಹಲವು ತುಳುವರಿಗಿದೆ. ಇದೆಲ್ಲ ಕಾರಣಗಳಿಂದ ಹಿಂದಿನ ಆಟಿಯ ಸಂಪ್ರದಾಯಗಳು ಇಂದು ಕಾರ್ಯಕ್ರಮಗಳಾಗಿ ಬಿಟ್ಟಿವೆ ಎಂದು ತುಳು ಒರಿಪುಗ ಸಂಸ್ಥೆಯ ಮುಖ್ಯಸ್ಥ ಮಹೇಂದ್ರನಾಥ ಸಾಲೆತ್ತೂರು ಹೇಳಿದರು.
ಅವರು ಬುಧವಾರ ವಿಟ್ಲ ದ.ಕ. ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿಟ್ಲದ ಆರ್.ಕೆ ಆರ್ಟ್ಸ್ ಸಹಕಾರದಲ್ಲಿ ನಡೆದ ಆಟಿಡೊಂಜಿ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಆರ್.ಕೆ. ಆರ್ಟ್ಸ್ನ ಚಿಣ್ಣರ ಮನೆಯ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ನƒತ್ಯ ಕಾರ್ಯಕ್ರಮ ನಡೆಯಿತು.
ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗದ್ದೆಬೇಸಾಯದ ಮಾಹಿತಿಯನ್ನು ನೀಡುವುದಕ್ಕೆ ಅವಕಾಶ ನೀಡಿರುವ ಬಸವನಗುಡಿ ರಾಮಣ್ಣ ಗೌಡ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಯ್ಯ ಕೆ.ವಿಟ್ಲ ಅರಮನೆ, ವಿಟ್ಲ ಪ.ಪಂ. ನಾಮನಿರ್ದೇಶಿತ ಸದಸ್ಯ ವಿ.ಎಚ್. ಸಮೀರ್ ಪಳಿಕೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವಿಪ್ರಸಾದ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ವಿಶ್ವನಾಥ ಕುಳಾಲು ಸ್ವಾಗತಿಸಿದರು. ಆರ್.ಕೆ.ಆರ್ಟ್ಸ್ ನಿರ್ದೇಶಕ ರಾಜೇಶ್ ವಿಟ್ಲ ಪ್ರಸ್ತಾವನೆಗೈದು ಶಿಕ್ಷಕಿ ರಮಾ ನಿರೂಪಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು.