ಮುಂಬಯಿ: ವಡಾಲದ ದ್ವಾರಕಾನಾಥ ಭವನದ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 66ನೇ ವಾರ್ಷಿಕ ಶ್ರೀ ಗಣೇಶೋತ್ಸವವು ಫೆ. 15ರಂದು ಮಾಘ ಚತುರ್ಥಿಯ ದಿನದಂದು ವಡಾಲದ ಶ್ರೀರಾಮ ಮಂದಿರದ ವಠಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಮತ್ತು ಅವರ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಆದೇಶ ಹಾಗೂ ಅನುಗ್ರಹದ ಮೇರೆಗೆ ಸಮಿತಿಯ ವಿಶ್ವಸ್ಥ ಕಾರ್ಯಾಧ್ಯಕ್ಷ, ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಮಾಘ ಚತುರ್ಥಿಯಂದು ಒಂದು ದಿನದ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಯೋಜಿಸಿದರು
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಶ್ರೀರಾಮ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಶ್ರೀ ಸಿದ್ಧಿವಿನಾಯಕ ದೇವರ ಪ್ರಾಣ ಪ್ರತಿಷ್ಠೆ ನಡೆಯಿತು. ಬಳಿಕ ಗಣಪತಿ ಸನ್ನಿಧಿಯಲ್ಲಿ ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷರು, ಇತರ ಪದಾಧಿಕಾರಿಗಳು, ಸಂಚಾಲಕ ಮಂಡಳಿ, ಉತ್ಸವ ಸಮಿತಿಯ ಅಧ್ಯಕ್ಷರು, ಸ್ವಯಂಸೇವಕರು, ಸಮಾಜ ಬಾಂಧವರ ಪರವಾಗಿ ಗಣಪತಿಹೋಮ ನಡೆಯಿತು. ಕೋವಿಡ್ ಮಹಾಮಾರಿಯಿಂದ ಸರ್ವರನ್ನು ಮಹಾಗಣಪತಿ ದೇವರು ರಕ್ಷಿಸಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.
ಅಪರಾಹ್ನ 1ರಿಂದ ಶ್ರೀ ಗಣೇಶ ದೇವರಿಗೆ ಮಹಾಪೂಜೆ, ನೈವೇದ್ಯ ಪೂಜೆ, ಮಹಾಮಂಗಳಾರತಿ, ಸಂಜೆ ಭಜನೆ, ದೇವರ ಸ್ತುತಿ, ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯೂಟ್ಯೂಬ್ ಮುಖಾಂತರ ಎಲ್ಲ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗಿತ್ತು. ದಿನಪೂರ್ತಿ ವಿವಿಧ ರೀತಿಯ ಪೂಜೆಗಳು ನಡೆದವು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವು ನಡೆಯಿತು.
ರಾತ್ರಿ ಪೂಜೆಯ ಬಳಿಕ ವೇ| ಮೂ| ಅನಂತ ಭಟ್ ಅವರು ಗಣೇಶೋತ್ಸವದ ವಿಶೇಷತೆಯನ್ನು ವಿವರಿಸಿದರು. ಬಳಿಕ ವಿಸರ್ಜನ ಪೂಜೆ, ಆರತಿ ನಡೆಯಿತು. ಬಳಿಕ ಗಣೇಶ ಮೂರ್ತಿಯನ್ನು ದೇವಸ್ಥಾನದ ಪ್ರಾಂಗಣದ ಬಾವಿಯಲ್ಲಿ ವಿಸರ್ಜಿಸ ಲಾಯಿತು. ವೇ| ಮೂ| ಸುಧಾಮ ಭಟ್, ಅನಂತ್ ಭಟ್, ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಗೋವಿಂದಾಚಾರ್ಯ, ತ್ರಿವಿಕ್ರಮ ಆಚಾರ್ಯ ಮತ್ತು ಇತರ ಅರ್ಚಕ ವೃಂದದವರು ಸಹಕರಿಸಿದರು. ಸಮಿತಿಯ ವಿಶ್ವಸ್ಥ ಸಂಚಾಲಕರು, ಸ್ವಯಂಸೇವಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.