ದಾವಣಗೆರೆ: ಸಮಾಜದಲ್ಲಿರುವ ದೇವದಾಸಿಯಂಥ ಅನಿಷ್ಠ ಪದ್ಧತಿ ಅಳಿಸಿ ಹಾಕುವ ಮೂಲಕ ಮಾನವ ಘನತೆ ಉಳಿಸಬೇಕಾಗಿದೆ. ದೇವದಾಸಿ ಪದ್ದತಿ ಮುಕ್ತ ಸಮಾಜಕ್ಕೆ ನಾವೆಲ್ಲರೂ ಪಣತೊಡಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಆಶ್ರಯದಲ್ಲಿ ದೇವದಾಸಿ ಮಹಿಳೆಯರಿಗೆ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವದಾಸಿ ಪದ್ಧತಿಗೊಳಗಾದ ಮಹಿಳೆಯರು ನರಕ ಅನುಭವಿಸುತ್ತಿದ್ದು, ಸಮಾಜ ಅವರನ್ನು ಪ್ರಾಣಿಗಳಂತೆ ಬಳಸಿಕೊಂಡು ಶೋಷಣೆ ಮಾಡುತ್ತಿರುವುದು ವಿಷಾದನೀಯ. ದೇವದಾಸಿ ನಿರ್ಮೂಲನೆ ಪದ್ಧತಿ ಕಾಯ್ದೆ ಜಾರಿಯಲ್ಲಿದ್ದರೂ ಹಲವಡೆ ಮುತ್ತು ಕಟ್ಟುವ ಮೂಲಕ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ನೂಕುತ್ತಿರುವುದು ಕಂಡು ಬರುತ್ತಿದೆ. ಅನಿಷ್ಠ ಪದ್ಧತಿಯಿಂದ ಶೋಷಣೆಗೆ ಒಳಗಾಗಿರುವ ತಾಯಂದಿರು ಎಲ್ಲಿಯೇ ಆಗಲಿ, ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಿ ತಡೆಯುವ ಕೆಲಸ ಮಾಡಬೇಕು. ದೇವದಾಸಿಯ ಮರು ಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ , ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದರು.
ಇದನ್ನೂ ಓದಿ:ಪ್ರೇಮಿಗಳ ದಿನಕ್ಕೆ ‘ಪ್ರೇಮ್’ ಸಂದೇಶ…’ಏಕ್ ಲವ್ ಯಾ’ ಮೊದಲ ಸಾಂಗ್ ರಿಲೀಸ್
ವಕೀಲರಾದ ಉಷಾ ಕೈಲಾಸದ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ತನ್ನ ಪ್ರತಿಭೆಯಿಂದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ ಸಹ ಮಹಿಳೆಯರ ಶೋಷಣೆ ತಪ್ಪಿಲ್ಲ. ವಿದ್ಯಾವಂತ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಮಹಿಳೆಯರು ಸಂಘಟಿತರಾಗುವ ಮೂಲಕ ತಮ್ಮ ಸಮಸ್ಯೆಗಳ ನಿವಾರಣೆಗೆ ಹಕ್ಕುಪ್ರತಿಪಾದನೆ ಮಾಡಬೇಕಾಗಿದೆ ಎಂದರು.ಮೋಕ್ಷಪತಿ ಅಧ್ಯಕ್ಷತೆ ವಹಿಸಿದ್ದರು.
ವಕೀಲರಾದ ಎನ್.ಎಂ. ಅಂಜನೇಯ ಗುರೂಜಿ, ಸ್ಲಂ ಜನಾಂದೋಲನದ ರೇಣುಕಾ ಎಲ್ಲಮ್ಮ ಉಪಸ್ಥಿತರಿದ್ದರು. ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾ ಅನುಷ್ಠಾನಾಧಿಕಾರಿ ಪ್ರಜ್ಞಾಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಯೋಜನಾ ಅನುಷ್ಠಾನಾಧಿಕಾರಿ ಉಮಾ ಓಂಕಾರ ವಂದಿಸಿದರು.