ತುಮಕೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಸದ್ಯದಲ್ಲೇ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ತುಮಕೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ತಿಳಿಸಿದರು.
ತುಮಕೂರು ವಿವಿಯ ನೀತಿ ಆಯೋಗ ಮತ್ತು ಭಾರತೀಯ ಶಿಕ್ಷಣ ಮಂಡಲ್ ಸಹಭಾಗಿತ್ವದಲ್ಲಿವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ತಜ್ಞರು,ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಕೈಗಾರಿಕೆಗಳು,ಶಿಕ್ಷಣ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದ ಬಳಿಕವೇ, ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.
ಮೌಲ್ಯಗಳು ಅಸ್ತಿತ್ವ ಕಳೆದುಕೊಂಡಿವೆ: ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬದಲಾವಣೆಗಳ ಪ್ರಭಾವ ದಿಂದ ಮೌಲ್ಯಗಳು ಅಸ್ತಿತ್ವ ಕಳೆದುಕೊಂಡಿವೆ. ಒಂದೊಂದು ರಾಷ್ಟ್ರಕ್ಕೆ ಒಂದೊಂದು ಗುರುತಿದೆ. ಹಾಗೆಯೇ ಭಾರತಕ್ಕೆ ಒಂದು ಗುರುತಿದೆ. ತನ್ನದೆ ಆದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು,ಶ್ರೇಯಸ್ಸು ಮತ್ತು ಯಶಸ್ಸನ್ನು ಸಾಧಿಸುವ ಉದ್ದೇಶದಿಂದ ಈ ಶಿಕ್ಷಣ ನೀತಿ ಸಹಾಯಕವಾಗಲಿದೆ. ಗುಣಮಟ್ಟದ ಸಂಶೋಧನೆಗೆ ಒತ್ತು ನೀಡದಿದ್ದರೆ, ನಮಗೆ ಭವಿಷ್ಯವಿಲ್ಲ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲ್‌ನ ಬಿ.ಪ್ರದೀಪ್ ಗುರುರಾಜ್ ಮಾತನಾಡಿ, ಪ್ರಾದೇಶಿಕವಾಗಿ ಶಿಕ್ಷಣನೀತಿಗಳನ್ನು ಅಳವಡಿಸಿಕೊಳ್ಳುವುದು ಯಾವಾಗಲೂ ಉತ್ತಮ. ಅದನ್ನು ಹೊಸ ಶಿಕ್ಷಣ ನೀತಿ ಮಾಡುತ್ತಿದೆ.ಮುಂದಿನ ದಿನಗಳಲ್ಲಿ ಕೋರ್ಸ್‌ಗಳ ಕಲಾ ವಿಭಾಗ, ವಿಜ್ಞಾನ ವಿಭಾಗ ಇತ್ಯಾದಿ ವ್ಯತ್ಯಾಸಗಳಿರುವುದಿಲ್ಲ. ಎಲ್ಲರಿಗೂ, ಎಲ್ಲ ವಿಷಯಗಳನ್ನೂ ಅಧ್ಯಯನಮಾಡುವ ಅವಕಾಶ ಇರುತ್ತದೆ. ಸಂಶೋಧನಾವಿವಿಗಳು, ಪದವಿ ನೀಡುವ ವಿವಿಗಳು ಹೀಗೆ ವಿವಿಧಮಾದರಿಗಳು ತೆರೆದುಕೊಳ್ಳಲಿವೆ. ವಿದೇಶಿ ವಿವಿಗಳು ಪ್ರವೇಶಿಸಲಿವೆ. ಅವುಗಳ ಮಟ್ಟಕ್ಕೆ ನಾವು ಬೆಳೆಯುವ ಸವಾಲನ್ನು ಸ್ವೀಕರಿಸಬೇಕಾಗಿದೆ ಎಂದರು.
ಭಾರತೀಯ ಶಿಕ್ಷಣ ಮಂಡಲ್‌ನ ಅರುಣ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ಕುಲ ಸಚಿವ ಪ್ರೊ.ಬಿ.ಟಿ.ಸಂಪತ್ ಕುಮಾರ್, ಡಾ.ಜಾಯ್ ನೆರೆಲ್ಲಾ, ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.
ಆಧುನಿಕ ಯುಗಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಅಗತ್ಯ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ.ಹೀಗಾಗಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿಗುಣಮಟ್ಟ ಕಾಪಾಡಬೇಕಿದೆ. ತಜ್ಞರ ಸಲಹೆ, ಸೂಚನೆ ಬಳಿಕ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬರಲಿದೆ.
– ಪ್ರೊ.ವೈ.ಎಸ್.ಸಿದ್ದೇಗೌಡ, ತುಮಕೂರು ವಿವಿ ಕುಲಪತಿ