Advertisement

ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಕಾರ್ಯಸೂಚಿ ಸಿದ್ಧ: ಬೊಮ್ಮನಹಳ್ಳಿ

05:02 PM May 31, 2018 | Team Udayavani |

ಧಾರವಾಡ: ಜಿಲ್ಲಾದ್ಯಂತ ವಿವಿಧ ಅಧಿಕಾರಿ ನೇತೃತ್ವದಲ್ಲಿ ಪ್ಲಾಸ್ಟಿಕ್‌ ವಿರುದ್ಧ ಕಾರ್ಯಾಚರಣೆ ಹಾಗೂ ವಿವಿಧ ಕಾರ್ಯ ಚಟುವಟಿಕೆ ಮೂಲಕ ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ| ಎಸ್‌ .ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ನಗರದ ಡಿಸಿ ಕಚೇರಿಯಲ್ಲಿ ಜೂ. 5ರಂದು ವಿಶ್ವ ಪರಿಸರ ದಿನ ಹಾಗೂ ವನ ಮಹೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂ. 5ರಂದು ಬಿಟ್‌ ಪ್ಲಾಸ್ಟಿಕ್‌ ಪೊಲ್ಯೂಷನ್‌ ಧ್ಯೇಯವಾಕ್ಯದಡಿ ಭಾರತದ ಆತಿಥ್ಯದಲ್ಲಿ ಈ ವರ್ಷದ ವಿಶ್ವ ಪರಿಸರ ದಿನಾಚರಣೆ ನಡೆಯಲಿದೆ. ಹೀಗಾಗಿ ಜನರಲ್ಲಿ ಜಾಗೃತಿಗಾಗಿ ಅಗತ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಜೂ. 5ರಿಂದ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಜೂನ್‌ ಮಾಸಾಂತ್ಯದವರೆಗೆ ಪ್ಲಾಸ್ಟಿಕ್‌ ರೇಡ್‌ ಡ್ರೈವ್  ಆಯೋಜಿಸಲಾಗುತ್ತದೆ. ಈ ಮೂಲಕ ನಿಷೇಧಿತ ಪ್ಲಾಸ್ಟಿಕ್‌ ಬಳಸುವ ಅಂಗಡಿ, ಹೋಟೆಲ್‌ ಹಾಗೂ ಇತರ ವ್ಯಾಪಾರ ವಹಿವಾಟು ಕೇಂದ್ರಗಳ ಮೇಲೆ ದಾಳಿ ಮಾಡಿ, ಕಾನೂನು ಅನುಸಾರ ದಂಡ ಹಾಗೂ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು.

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಬೊಮ್ಮನಹಳ್ಳಿ, ಅವಳಿ ನಗರದ ಕಲ್ಯಾಣ ಮಂಟಪ, ಹೋಟೆಲ್‌, ಲಾಡ್ಜ್ ಮತ್ತು ಸಮುದಾಯ ಭವನಗಳ ಮುಖ್ಯಸ್ಥರ ಸಭೆ ಜರುಗಿಸಿ, ಆಯಾ ಕಟ್ಟಡ, ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲು ಸೂಕ್ತ ಕ್ರಮ ಜರುಗಿಸಬೇಕು. ‘ಪ್ಲಾಸ್ಟಿಕ್‌ ಮುಕ್ತ ಪ್ರದೇಶ’ ಎಂಬ ನಾಮಫಲಕ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾ ವ್ಯಾಪ್ತಿಯ ಎಲ್ಲ ವಿಶ್ವವಿದ್ಯಾಲಯ, ಅವುಗಳ ಅಧಿಧೀನ ಕಾಲೇಜುಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ, ಸರಕಾರಿ ಇಲಾಖೆಗಳ ಕಚೇರಿ ಮುಖ್ಯಸ್ಥರು ಸುತ್ತೋಲೆ ಹೊರಡಿಸುವ ಮೂಲಕ ತಮ್ಮ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜು, ಕಚೇರಿಗಳು ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌ ಆಗಿ ರೂಪುಗೊಳ್ಳಲು ಸೂಕ್ತ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

Advertisement

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಮಾತನಾಡಿ, ಜೂ. 5ರಂದು ಆಚರಿಸಲಿರುವ ವಿಶ್ವ ಪರಿಸರ ದಿನ ಹಾಗೂ ವನಮಹೋತ್ಸವ ಪ್ರಯುಕ್ತ ಒಂದು ವಾರ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕಾಲ್ನಡಿಗೆ ಜಾಥಾ, ಸ್ತಬ್ಧಚಿತ್ರ ಸಂಚಾರ, ಸಂಚಾರಿ ಸಸಿ ಸಂತೆ, ಬೀದಿ ನಾಟಕ, ಪ್ಲಾಸ್ಟಿಕ್‌ ಮುಕ್ತ ಪ್ರದೇಶ, ಸ್ವತ್ಛ ಅರಣ್ಯ, ಬೀಜ ಬಿತ್ತನೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ ಮತ್ತು ಜೂ. 8 ರಂದು ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ಪ್ರಮುಖ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಪರಿಸರ ಅಭಿಯಂತರಾದ ನಯನಾ ಮಾತನಾಡಿ, ಪಾಲಿಕೆಯಿಂದ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಯಂತ್ರಣ ತರಲು ಮತ್ತು ಬಳಸಿದ ಪ್ಲಾಸ್ಟಿಕ್‌ನ್ನು ಪರಿಸರ ಹಾನಿಯಾಗದಂತೆ ತಡೆಯಲು ವಿವಿಧ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಪರಿಸರ ದಿನ ಅಂಗವಾಗಿ ಸ್ತ್ರೀ ಶಕ್ತಿ ಸಂಘ ಹಾಗೂ ಮಹಿಳಾ ಒಕ್ಕೂಟದ ಸದಸ್ಯರಿಗೆ ತರಬೇತಿ ಆಯೋಜಿಸಲಾಗುವುದು. ಉಣಕಲ್‌ ಮತ್ತು ಸಾಧನಕೇರಿ ಕೆರೆಗಳ ದಡದಲ್ಲಿ ಸ್ವಚ್ಚತೆ ಕುರಿತು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಜಿಪಂ ಸಿಇಒ ಸ್ನೇಹಲ್‌ ಆರ್‌, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌. ಎಸ್‌. ಚಿಣ್ಣನ್ನವರ್‌, ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ, ಉಪವಿಭಾಗಾಧಿ ಕಾರಿ ಜಯಮಾಧವ ಪಿ, ತಹಶೀಲ್ದಾರ್‌ ಪ್ರಕಾಶ ಕುದರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ವಿಜಯಕುಮಾರ ಟಿ.ಕೆ., ಉಪಪರಿಸರ ಅಧಿಕಾರಿ ಶೋಭಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಆರ್‌.ಎಂ.ದೊಡ್ಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ರಂಗಣ್ಣವರ್‌, ಪರಿಸರವಾದಿ ಶಂಕರ ಕುಂಬಿ, ಪ್ರಕಾಶ ಭಟ್‌ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next