ಬೆಂಗಳೂರು: ದೇವಭಾಷೆಯಾಗಿರುವ ಸಂಸ್ಕೃತ ಲೋಕಾಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬುಧವಾರ ಹಮ್ಮಿಕಕೊಂಡಿದ್ದ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ದೇವ ಭಾಷೆ ಎನ್ನುತ್ತಾರೆ. ಆದರೆ, ಈ ಭಾಷೆ ಲೋಕ ಭಾಷೆ ಆಗಬೇಕು. ಹೀಗಾದರೆ, ಮಾತ್ರ ಸಂಸ್ಕೃತ ಶಾಶ್ವತವಾಗಿ ಉಳಿಲು ಸಾಧ್ಯ. ಸಂಸ್ಕೃತ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ, ಮಹಾಕಾವ್ಯ, ತರ್ಕ, ವಿಜ್ಞಾನ, ಅಧ್ಯಾತ್ಮ, ಆಯುರ್ವೇದ ಇನ್ನೂ ಅನೇಕ ವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ರಚನೆಯಾಗಿದೆ. ಭಾರತ ದೇಶದ ಮೂಲ ಸಂಸ್ಕೃತಿ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ ಎಂದರು.
ಭಗವದ್ಗೀತೆಯಲ್ಲಿ ಯಾವುದೇ ರೀತಿಯಲ್ಲಿ ಮಾನವ ಹಾನಿಕಾರಕ ಸಂದೇಶಗಳಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲಾಗದೆ ಭಗವದ್ಗೀತೆಯನ್ನು ಸುಡುವ ಕಾರ್ಯ ಮಾಡುತ್ತಿದ್ದಾರೆ. ಭಗವದ್ಗೀತೆ ಮನುಕುಲಕ್ಕೆ ಒಳ್ಳೆಯದನ್ನೇ ಬೋಧಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಹಿಂದಿನ ದಿನಗಳಂತೆ ಈಗೀನ ಕಾಲದಲ್ಲೂ ತರುಣ ಕುಟೀರ ಹಾಗೂ ಗುರುಕುಲಗಳಲ್ಲಿ ಸಂಸ್ಕೃತ ಕಲಿಯುವುದಲ್ಲ. ಕಾಲ ಬದಲಾಗಿದೆ. . ಬದಲಾದ ಕಾಲಕ್ಕೆ ಹೊಂದಿಕೊಂಡು ಮೂಲ ಸ್ವರೂಪ ಕಳೆದುಕೊಳ್ಳದಂತೆ ಸಂಸ್ಕೃತ ಭಾಷೆಯನ್ನು ಬೆಳೆಸಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಸಂಸ್ಕೃತ ಭಾಷೆಯ ಮಹತ್ವ ಅರಿತು ವಿದೇಶಿಗರು ಸಂಸ್ಕೃತ ಅಧ್ಯಯನಕ್ಕೆಂದು ಭಾರತಕ್ಕೆ ಆಗಮಿಸುತ್ತಾರೆ. ಆದರೆ ಭಾರತೀಯರು ಸಂಸ್ಕೃತದಿಂದ ದೂರ ಉಳಿಯುತ್ತಿದ್ದಾರೆ. ಜಗತ್ತಿಗೆ ಜ್ಞಾನ ನೀಡಿದ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.