ಶಿರಸಿ: ಜಿಲ್ಲೆಯ ಜನತೆ ಬೆಟ್ಟ ಪ್ರದೇಶಗಳನ್ನು ಸೂಕ್ತವಾಗಿ ಬಳಸಿಕೊಂಡು ಲಾಭದಾಯಕ ಕೋಕಂ ಬೆಳೆ ಬೆಳೆಯುವ ಮೂಲಕ ಆರ್ಥಿಕಾದಾಯ ಹೆಚ್ಚಿಕೊಳ್ಳಬೇಕೆಂದು ಗೋವಾದ ಕೋಕಂ ಫೌಂಡೇಶನ್ ಅಧ್ಯಕ್ಷ ಅಜಿತ್ ಶಿರೋಳಕರ್ ಕರೆ ನೀಡಿದರು.
ಶಿರಸಿಯಂತ ಸಣ್ಣ ಪಟ್ಟಣದಲ್ಲಿನ ಕೃಷಿಕರು ಕೋಕಂ ಬೆಳೆಯ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಬೇಕು. ಶೇ. 70ರಷ್ಟು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕೃಷಿಕರು ಬದಲಾವಣೆ ಹಾದಿಯಲ್ಲಿ ಸಾಗಬೇಕು. ಮುಂದಿನ ಪೀಳಿಗೆಯ ಜನರಿಗೆ ಕೃಷಿ ಪಾಠ ಹೇಳಿಕೊಡುವ ಕಾರ್ಯಗಳು ಅವಶ್ಯವಾಗಿ ನಡೆಯಬೇಕಿದೆ ಎಂದರು. ನೆರೆಯ ಗೋವಾದಲ್ಲಿ ಕೋಕಂ ಬೆಳೆಯನ್ನು ದೇಶದಲ್ಲೆ ಅತಿಯಾಗಿ ಬೆಳೆಯಲಾಗುತ್ತಿದೆ. ಮುರುಗಲ ಹಣ್ಣು ಆರೋಗ್ಯದಾಯಕದ ಜೊತೆಗೆ ಹೆಚ್ಚಿನ ಆದಾಯ ತಂದುಕೊಡುವ ಬೆಳೆಯಾಗಿದೆ. ಮುರುಗಲಿನಿಂದ ತಯಾರಿಸಲ್ಪಡುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಆಯುರ್ವೇದ ವೈದ್ಯರ ಸಲಹೆಯಿಂದ ತಯಾರಿಸುವುದು ಉತ್ತಮ ಎಂದರು.
ಮುರುಗಲ ಹಣ್ಣು ಕ್ಯಾನ್ಸರ್ ರೋಗ ನಿಯಂತ್ರಿಕ ಅಂಶಗಳನ್ನು ಹೊಂದಿದೆ. ಒಮ್ಮೆ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೋಕಂ ಬೆಳೆ ಬೆಳೆಯುತ್ತೇವೆಂದು ತೋರ್ಪಡಿಸಿ, ಆ ನಂತರದಲ್ಲಿ ಕೋಕಂ ಉತ್ಪನ್ನಗಳನ್ನು ತಯಾರಿಸಲ್ಪಡುವ ಕಂಪನಿಗಳು ರೈತರ ಮನೆ ಬಾಗಿಲಿಗೆ ಬರುತ್ತವೆ. ಮಾರುಕಟ್ಟೆ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ಕೃಷಿ ಅಧಿಕಾರಿ ಸತೀಷ ಹೆಗಡೆ ಮಾತನಾಡಿ, ಸಹ್ಯಾದ್ರಿ ತಪ್ಪಲಿನಲ್ಲಿ ಮುರುಗಲು ವ್ಯಾಪಕವಾಗಿ ಬೆಳೆಯಲ್ಪಡುತ್ತದೆ. ಕೇರಳದಿಂದ ಮಹಾರಾಷ್ಟ್ರದ ತನಕ ಮುರುಗಲು ಬೆಳೆ ವ್ಯಾಪಕವಾಗಿ ಹಬ್ಬಿದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಉದ್ಯಮದ ರೀತಿಯಲ್ಲಿ ಕೋಕಂ ಬೆಳೆಯಲಾಗುತ್ತಿದೆ. ಇಲಾಖೆಯಿಂದ ಲಕ್ಷಕ್ಕೂ ಅಧಿಕ ಕೋಕಂ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಮೊದಲು ನಾಲ್ಕು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕೋಕಂ ಬೆಳೆ ಈಗ ಜಿಲ್ಲೆಯ 41.45 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದರು.
Advertisement
ಇಲ್ಲಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ ಹಾಗೂ ನಾನಾ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಕದಂಬ ಮಾರ್ಕೆಟಿಂಗ್ ಆವರಣದಲ್ಲಿ ಶನಿವಾರ ನಡೆಸಲಾದ ರಾಜ್ಯಮಟ್ಟದ ಕೋಕಂ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಕೋಕಂ ದರದಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸದಿಂದ ರೈತರಿಗೆ ನಷ್ಟ ಉಂಟಾಗುತ್ತಿತ್ತು. ಆ ನಿಟ್ಟಿನಲ್ಲಿ ಕೋಕಂ ಸಂಸ್ಕರಿಸುವ ಘಟಕಗಳನ್ನು ತಯಾರಿಸಲಾಗಿದೆ. ಕೋಕಂ ಸಂಸ್ಕರಿಸಿ ಮಾರಾಟ ಮಾಡುತ್ತಿರುವುದಿಂದ ನಿರ್ದಿಷ್ಟ ದರ ಕೃಷಿಕರಿಗೆ ದೊರೆಯುತ್ತಿದೆ. ಸಂಸ್ಕರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯತೆ ಇದೆ. ಗುಣಮಟ್ಟ ಕಾಯ್ದುಕೊಳ್ಳಲು ಸಂಸ್ಕರಣ ಘಟಕಗಳ ನಿರ್ವಹಣಾದಾರರಿಗೆ ಅಗತ್ಯ ಮಾಹಿತಿ ನೀಡಬೇಕಿದೆ ಎಂದರು. ಕದಂಬ ಅಧ್ಯಕ್ಷ ಶಂಭುಲಿಂಗ ಹೆಗಡೆ, ನಬಾರ್ಡ್ ಡಿ.ಡಿ.ಎಂ. ಯೋಗೇಶ, ಪಿ.ಆರ್. ಭಟ್ಟ, ಕೃಷಿ ವಿಜ್ಞಾನ ಕೇಂದ್ರದ ಡಾ| ರೂಪಾ ಪಾಟೀಲ್, ಐಭವನ ಸಿಂಗ್, ಕೋಕಂ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಸಾಗರ ಗೋಖಲೆ ಹಾಗೂ ಅಮಯ್ ಕುಲಕರ್ಣಿ, ವಿಜ್ಞಾನಿ ಐಬೋ ಎಮಿನೋ ಸಿಂಗ್ ಇದ್ದರು.
ಕದಂಬ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟ ಸ್ವಾಗತಿಸಿದರು. ಮಂಜುನಾಥ ಭಟ್ಟ ನಿರೂಪಿಸಿದರು.