Advertisement

ನ್ಯಾನೋ ತಂತ್ರಜ್ಞಾನದಿಂದ ಲಾಭದಾಯಕ ಕೃಷಿ: ಗೆಹ್ಲೋಟ್

10:52 PM Sep 28, 2022 | Team Udayavani |

ಶಿವಮೊಗ್ಗ: ನ್ಯಾನೋ ತಂತ್ರಜ್ಞಾನದಂತಹ ಆಧುನಿಕ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ತಿಳಿಸಿದರು.

Advertisement

ಬುಧವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾನೋ ತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ನೀರಾವರಿಯಲ್ಲಿ ಯಾಂತ್ರೀಕರಣ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಂಪನ್ಮೂಲ ಬಳಕೆ ದಕ್ಷತೆ ಮತ್ತು ಸುಸ್ಥಿರ ಕೃಷಿ ಪದ್ಧತಿ, ರೈತ ಸ್ನೇಹಿ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವ ಮತ್ತು ಹೊಸ ಸ್ಟಾರ್ಟ್‌ಆ್ಯಪ್‌ಗಳನ್ನು ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದರು.

ಕೆಳದಿ ಶಿವಪ್ಪ ನಾಯ್ಕ ಅವರನ್ನು ಸಮರ್ಥ ಆಡಳಿತಗಾರ ಮತ್ತು ಸೈನಿಕ ಎಂದು ಸ್ಮರಿಸುತ್ತೇವೆ. ಕೃಷಿ ಕ್ಷೇತ್ರದಲ್ಲೂ ಶಿವಪ್ಪ ನಾಯ್ಕ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನೆನಪಿಗಾಗಿ ಸ್ಥಾಪಿತವಾದ ಈ ವಿಶ್ವವಿದ್ಯಾನಿಲಯವು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಿಗದಿತ ಗುರಿಗಳನ್ನು ಸಾಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ತಂತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪ್ರತಿ ಹನಿಗೆ ಹೆಚ್ಚಿನ ಬೆಳೆ ಪಡೆಯಲು, ಕೃಷಿಯಲ್ಲಿನ ಇತ್ತೀಚಿನ ತಂತ್ರಜ್ಞಾನ, ನೈಸರ್ಗಿಕ ಕೃಷಿ, ದೇಶೀಯ ಬೀಜಗಳ ಸಂರಕ್ಷಣೆ ಇತ್ಯಾದಿಗಳ ಕುರಿತು ಹೆಚ್ಚು ವಿವರವಾದ ಸಂಶೋಧನೆ ಮಾಡಬೇಕಾಗಿದೆ. ಇಸ್ರೇಲ್‌ನ ಹವಾಮಾನ ಮತ್ತು ಭೌಗೋಳಿಕತೆಯು ನೈಸರ್ಗಿಕವಾಗಿ ಕೃಷಿಗೆ ಸೂಕ್ತ ಆಗಿರದಿದ್ದರೂ, ಕೃಷಿಯಲ್ಲಿ ಇಸ್ರೇಲ್‌ ವಿಕ್ರಮ ಸಾಧಿಸಿದೆ. ಇದನ್ನು ನಾವು ಮಾದರಿಯಾಗಿಸಬೇಕು. ಕೃಷಿ ವಲಯದಲ್ಲಿ ಸ್ವಾವಲಂಬಿಯಾಗಲು ಮತ್ತು ಜಾಗತಿಕ ಶಕ್ತಿಯಾಗಲು ಭಾರತವು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯ ಆಧುನೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು. ಡಾ| ಆರ್‌.ಕೆ. ಎಸ್‌.ಎಸ್‌. ಶ್ರೀ ಪರೋಡಾ, ಕುಲಪತಿ ಡಾ| ಆರ್‌. ಸಿ. ಜಗದೀಶ್‌, ಕುಲಸಚಿವ ಡಾ|ಆರ್‌. ಲೋಕೇಶ್‌ ಮತ್ತಿತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next