ಕಲಬುರಗಿ: ಹೈ.ಕ.ಭಾಗದ ಹಿರಿಯ ಸಾಧಕ ಸಾಹಿತಿಗಳಿಗೆ ಹೈ.ಕ.ಪ್ರದೇಶಾಭಿವೃದ್ದಿ ಮಂಡಳಿಯಿಂದ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಡಳಿ ಅಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ವಿ.ಜಿ. ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಕನ್ನಡ ನಾಡು ಪ್ರಕಾಶನ ಹೊರತಂದ 11 ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೈ.ಕ. ಭಾಗದಿಂದ ಪ್ರಕಟವಾಗುವ ಪುಸ್ತಕಗಳನ್ನು ಮಂಡಳಿ ಖರೀದಿಸಲಿದೆ.
ಇದಕ್ಕಾಗಿ ಪುಸ್ತಕ ಆಯ್ಕೆ ಸಮಿತಿ ರಚಿಸಲಾಗುವುದು. ಈ ಸಲದ ಬಜೆಟ್‌ನಲ್ಲಿ ಮಂಡಳಿಗೆ 1500 ಕೋಟಿ ರೂ. ನೀಡಲಾಗಿದ್ದು, ಈ ಅನುದಾನದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಪುಸ್ತಕ ಲೋಕಾರ್ಪಣೆ ಮಾಡಿದ ಕಸಾಪ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿ ಗೋದಾಮಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಪುಸ್ತಕಗಳು ಕೊಳೆಯುತ್ತಾ ಬಿದ್ದಿವೆ. ಪುಸ್ತಕಗಳು ಮೌಲ್ಯಯುತವಾಗಿದ್ದರೇ ಓದುಗರು ಅವುಗಳನ್ನು ಖರೀದಿಸಿ ಓದುತ್ತಾರೆ.
ಆದ್ದರಿಂದ ಉತ್ತಮ ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪುಸ್ತಕ ಕೊಂಡು ಓದುವ ಸಂಸ್ಕೃತಿ ನಮ್ಮಲ್ಲಿ ಸಾಕಷ್ಟಿದೆ. ಇದಕ್ಕೆ ರಾಯಚೂರಿನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 3 ಕೋಟಿ ರೂ.ನಷ್ಟು ಪುಸ್ತಕಗಳು ಮಾರಾಟವಾದುದ್ದೇ ತಾಜಾ ನಿದರ್ಶನ ಎಂದು ಹೇಳಿದರು.
ಡಾ| ಮಲ್ಲೇಪುರಂ ಜಿ. ವೆಂಕಟೇಶ, ಮಂಡಲಗಿರಿ ಪ್ರಸನ್ನ, ಬಿ.ಟಿ. ಲಲಿತಾನಾಯಕ , ಡಾ| ಗವಿಸಿದ್ದಪ್ಪ ಪಾಟೀಲ, ಸಿದ್ದರಾಮ ಪೊಲೀಸ್‌ಪಾಟೀಲ, ಎಂ.ಜಿ. ಗಂಗನಪಳ್ಳಿ, ಗುಂಡೂರಾವ ದೇಸಾಯಿ, ಸುರೇಖಾ ಕುಲಕರ್ಣಿ, ಡಾ| ವಿಜಯಕುಮಾರ ಪರೂತೆ, ದೊಡ್ಡಬಸಪ್ಪ ಬಳೂರಗಿ, ಅಲ್ಲಮಪ್ರಭು ಬೆಟ್ಟದೂರು ರಚಿಸಿದ ಪುಸ್ತಕಗಳನ್ನು ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಸ್ವಾಮಿರಾವ ಕುಲಕರ್ಣಿ ನಿರೂಪಿಸಿದರು.