Advertisement
ಮೊದಲ ದಿನ ಪತ್ರಿಕಾ ಲೋಕಕ್ಕೆ ಕಾಲಿಟ್ಟಾಗ ಕೊಂಚ ಭಯ ನಡುಕ ನನ್ನನ್ನು ಕಾಡಿತ್ತು. ಅಲ್ಲಿ ಸಬ್ ಎಡಿಟರ್ ಸರ್ ವಾರಕ್ಕೆ ಒಂದೊಂದು ಡೆಸ್ಕ್ ನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಮೊದಲ ವಾರವೇ ಅನುವಾದ ಮಾಡುವ ಕೆಲಸ ನನಗೆ ಸಿಕ್ಕಿದ ಕಾರಣ ಬೇರೆ ವಿಷಯಗಳ ಮೇಲೆ ಗಮನಹರಿಸಲು ಕಷ್ಟವಾಯಿತು. ಮೊದಲೇ ನನಗೆ ಅನುವಾದದ ಗಂಧ ಗಾಳಿ ಗೊತ್ತಿಲ್ಲ. ಕಾಲೇಜಿನಲ್ಲಿ ಅಧ್ಯಾಪಕರು ಅನುವಾದ ಕೊಟ್ಟಾಗ ಹೇಗಾದರೂ ಮಾಡಿ, ಏನಾದರೊಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆವು. ಇಂಟರ್ನ್ ಶಿಪ್ ನಲ್ಲಿ ಅನುವಾದ ಮಾಡದೆ ಬೇರೆ ದಾರಿಯಿರಲಿಲ್ಲ. ಹೀಗಾಗಿ ಅನುವಾದದ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಲು ಸಹಾಯವಾಗುವುದರ ಜತೆಗೆ ಕನ್ನಡ ಟೈಪಿಂಗ್ ಸಹ ಸುಧಾರಿಸಿತು. ಮೊದಲಿಗೆ ಕಷ್ಟವೆನಿಸಿದರೂ ದಿನ ಕಳೆದಂತೆ ತಪ್ಪುಗಳು ಕಡಿಮೆಯಾದವು. ವಿದ್ಯಾರ್ಥಿ ಜೀವನವನ್ನೇ ನೋಡಿದ ನನಗೆ ವೃತ್ತಿಜೀವನದ ಕಡೆ ಆಸಕ್ತಿ ಮೂಡಿತು.
Related Articles
Advertisement
ಬೆಳಗ್ಗೆಯಿಂದಲೇ ಸುದ್ದಿಗಳು ಬರಲು ಪ್ರಾರಂಭವಾಗುತ್ತದೆ. ಸುದ್ದಿಗಳಲ್ಲಿ ಯಾವುದನ್ನು ಹಾಕಬೇಕು ಎಂಬುದನ್ನು ನಿರ್ಧಾರ ಮಾಡುವವರು ಎಡಿಟರ್. ಎಲ್ಲ ಸುದ್ದಿಗಳು ಒಮ್ಮೆಗೆ ಕೈ ಸೇರಿದ ತತ್‌ಕ್ಷಣ ಮಧ್ಯಾಹ್ನ ಎಡಿಟರ್ ರೂಮ್‌ನಲ್ಲಿ ಎಲ್ಲ ಡೆಸ್ಕಿನ ಮುಖ್ಯಸ್ಥರ ಜತೆಗೆ ಸಭೆ ನಡೆಯುತ್ತದೆ. ಎಡಿಟರ್ ನಿರ್ಧಾರದಂತೆ ಯಾವ ಸುದ್ದಿಗಳು ಪತ್ರಿಕೆಯಲ್ಲಿ ಮುದ್ರಣವಾಗಬೇಕು ಎಂದು ತಿಳಿಯುತ್ತದೆ. ಎಲ್ಲ ಸುದ್ದಿಗಳು ತಿದ್ದಿ ಪತ್ರಿಕೆಯಲ್ಲಿ ಕೂರಿಸಿದ ಮೇಲೆ ಯಾವುದಾದರೂ ಮುಖ್ಯವಾದ ವರದಿ ದೊರೆತರೆ ಮೊದಲು ಹಾಕಿದ ಸುದ್ದಿಯನ್ನು ತೆಗೆದು ಮತ್ತೆ ಬಂದ ಸುದ್ದಿಯನ್ನು ಹಾಕಬೇಕು. ಇದು ವರದಿಗಾರ ಮತ್ತು ಪುಟ ವಿನ್ಯಾಸಗಾರನಿಗೆ ಇರುವ ಬಹುದೊಡ್ಡ ಸವಾಲು.
ರಾತ್ರಿ 10ಗಂಟೆಗೆ ಪುಟವಿನ್ಯಾಸವಾಗಿ ಮುದ್ರಣಕ್ಕೆ ಹೋಗಬೇಕಾಗಿರುವುದರಿಂದ ಅದರ ಮೊದಲಿನ ಒಂದೆರಡು ಗಂಟೆ ಅಲ್ಲಿದ್ದವರು ಬಹಳ ಬ್ಯುಸಿ ಆಗಿರುತ್ತಾರೆ. ಆ ಸಮಯದಲ್ಲಿ ಅವರ ಜತೆ ಮಾತನಾಡಿದರೆ ಬೈಗುಳದ ಉಡುಗೊರೆಯಂತೂ ಗ್ಯಾರಂಟಿ.
ಹೀಗೆ ಪತ್ರಿಕೆ ಮುದ್ರಣವಾಗಿ ಮುಂಜಾನೆಯ ಅಷ್ಟರಲ್ಲಿ ಜನರ ಕೈ ಸೇರುತ್ತದೆ. ಸುದ್ದಿ ಮಾಡುವುದರಿಂದ ಹಿಡಿದು ಜನರಿಗೆ ಸುದ್ದಿ ತಲುಪಿಸುವುದರ ನಡುವೆ ಇರುವ ಪತ್ರಿಕೆಯವರ ಪರಿಶ್ರಮ ಅಗಾಧ. ಇದು ಕೈ ಎತ್ತಿ ಮುಗಿಯುವಂತಹದ್ದೇ ಸರಿ.
-ಲಾವಣ್ಯ ಎಸ್.
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು