Advertisement

Challenging Star; ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ! ;ಇಂದು ‘ಡೆವಿಲ್‌’ ಡಬ್ಬಿಂಗ್‌!

05:59 PM Jan 01, 2025 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ 6 ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್‌ 2025ರ ನೂತನ ವರ್ಷದ ಮೊದಲ ದಿನ ಸಿನಿಮಾ ಕೆಲಸಕ್ಕೆ ಮುಹೂರ್ತ ಇಟ್ಟಿದ್ದಾರೆ. ಡಬ್ಬಿಂಗ್‌ ಮಾಡುವ ಮೂಲಕ “ಡೆವಿಲ್‌ ಈಸ್‌ ಬ್ಯಾಕ್‌’ ಎಂದು ಹೇಳಲು ಹೊರಟಿದ್ದಾರೆ. ಡೆವಿಲ್‌ ಚಿತ್ರಕ್ಕೆ 1 ಗಂಟೆ ಕಾಲ ಡಬ್ಬಿಂಗ್‌ ಮಾಡಲಿದ್ದು, ಸಿನಿಮಾ ಕೆಲಸಕ್ಕೆ ಚಾಲನೆ ನೀಡಲಿದ್ದಾರೆ. ನಟ ದರ್ಶನ್‌ ಪ್ರತಿ ಹೊಸ ವರ್ಷದ ಮೊದಲ ದಿನ ಸಿನಿಮಾ ಕೆಲಸ ಮಾಡುವ ಮೂಲಕ ವರ್ಷವನ್ನು ಆರಂಭಿಸುತ್ತಿದ್ದರು.

Advertisement

ಅದು ಶೂಟಿಂಗ್‌ ಇರಬಹುದು, ಡಬ್ಬಿಂಗ್‌ ಇರಬಹುದು… ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗುತ್ತಿದ್ದರು. ಆದರೆ, ಈ 2024ರಲ್ಲಿ ಅವರು ಕೊಲೆ ಪ್ರಕರಣದಲ್ಲಿ ಬಂಧಿತರಾದ ಬಳಿಕ ಸಿನಿ ಜೀವನವೇ ಅಂತ್ಯ ಎಂಬಂತೆಲ್ಲ ಚರ್ಚೆ ಗಳು ನಡೆದಿದ್ದವು. ಈ ಮಧ್ಯೆ ತೀವ್ರ ಬೆನ್ನು ನೋವಿನ ಸಮಸ್ಯೆಯೂ ಅವರನ್ನು ಕಾಡಿತ್ತು. ಕೊನೆಗೆ ಆರೋಗ್ಯ ದೃಷ್ಟಿಯಿಂದ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ಹೈಕೋರ್ಟ್‌ ಜಾಮೀನನ್ನೂ ಮಂಜೂರು ಮಾಡಿತ್ತು. ಈ ಬಾರಿ ಹೊಸ ವರ್ಷಕ್ಕೆ ದರ್ಶನ್‌ ಏನು ಮಾಡುತ್ತಾರೆ ಎಂಬ ಕುತೂಹಲ ಸಹಜವಾಗಿ ಅವರ ಅಭಿಮಾನಿಗಳನ್ನು ಕಾಡಿತ್ತು.

ಅದಕ್ಕೆ ಉತ್ತರ ಸಿಕ್ಕಿದ್ದು, ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳಲು ಮುಂದಾಗಿ ದ್ದಾರೆ. ದರ್ಶನ್‌ ಬುಧವಾರ ತಮ್ಮ “ಡೆವಿಲ್‌’ ಚಿತ್ರಕ್ಕೆ ಡಬ್ಬಿಂಗ್‌ ಮಾಡಲಿದ್ದಾರೆ. 1 ಗಂಟೆ ಡಬ್ಬಿಂಗ್‌: ಈಗಾಗಲೇ ‘ಡೆವಿಲ್‌’ ಚಿತ್ರದ ಒಂದಷ್ಟು ಚಿತ್ರೀಕರಣ ಪೂರೈಸಿದೆ. ಈಗ ಅಲ್ಲಿನ ದೃಶ್ಯಗಳಿಗೆ ದರ್ಶನ್‌ ಡಬ್ಬಿಂಗ್‌ಮಾಡಲಿದ್ದಾರೆ. ನಗರದ ಸ್ಟುಡಿಯೋವೊಂದರಲ್ಲಿ ಸುಮಾರು 1 ಗಂಟೆ ಕಾಲ ಡಬ್ಬಿಂಗ್‌ ಮಾಡಿ ಸಿನಿಮಾ ಕೆಲಸಕ್ಕೆ ಹೊಸ ವರ್ಷದಲ್ಲಿ ಚಾಲನೆ ನೀಡಲಿದ್ದಾರೆ.

ಸದ್ಯ ದರ್ಶನ್‌ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ಬಳಿಕ “ಡೆವಿಲ್‌’ ತಂಡ ಸೇರಿಕೊಳ್ಳಲಿದ್ದಾರೆ. ಇನ್ನು, ಅವರ ‘ಡೆವಿಲ್‌’ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.22ರ ನಂತರ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಮಿಲನ ಪ್ರಕಾಶ್‌ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಪೂರೈಸಿದೆ. “ಕಾಟೇರ’ದ ಯಶಸ್ಸಿನ ನಂತರ ಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ.

■ ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next