Advertisement
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ನಾರಾಯಣ ಗುರುಗಳ ಸಂದೇಶದಂತೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಅಂತೆಯೇ ಪ್ರತೀವರ್ಷ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಶೈಕ್ಷಣಿಕ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದೆ. ಅಸೋಸಿಯೇಶನ್‌ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಅನಂತರ ತಮ್ಮ ಮಾತೃ ಸಂಸ್ಥೆಯನ್ನು ಎಂದಿಗೂ ಮರೆಯಬಾರದು, ಅಲ್ಲದೆ ಅಸೋಸಿಯೇಶನ್‌ನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಉಪನ್ಯಾಸಕರಾದ ಕುಶಲ್ ಬಿ. ಸುವರ್ಣ ಅವರು ವೃತ್ತಿಪರ ಮಾರ್ಗದರ್ಶನದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿ ಕಾರ್ಯಾಗಾರವನ್ನು ಉತ್ತಮ ರೀತಿಯಲ್ಲಿ ನೆರವೇರಿಸಿಕೊಟ್ಟರು. ಪಾಲ್ಗೊಂಡ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಉಪಸಮಿತಿಯ ಗೌರವ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ವಂದಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.