ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎನ್ನುವ ಕಾರಣವನ್ನಿಟ್ಟುಕೊಂಡು ಈ ಬಾರಿ ಶೇ. 10ರಷ್ಟು ಶುಲ್ಕ ಹೆಚ್ಚಳ ಮಾಡಲು ಹೊರಟಿರುವುದು ಸಮಂಜಸವಾದ ನಿರ್ಧಾರವಲ್ಲ. ಈ ಬಗ್ಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ನಿರ್ಧಾರ ಮಾಡಿ ರಾಜ್ಯ ಸರಕಾರದ ಮುಂದೆ ಬೇಡಿಕೆ ಇಟ್ಟಿವೆ. ಸದ್ಯ ಸರಕಾರ ಇನ್ನೂ ಒಪ್ಪಿಲ್ಲವಾದರೂ, ಒಂದು ವೇಳೆ ಈ ಶುಲ್ಕ ಹೆಚ್ಚಳ ಜಾರಿಯಾದರೆ ವಿದ್ಯಾರ್ಥಿಗಳ ಪೋಷಕರ ಬದುಕು ಶೋಚನೀಯವಾಗುವುದು ಖಂಡಿತ.
ತೀರಾ ಎಲ್ಲರಿಗೂ ಅನ್ವಯವಾಗುವಂತೆ ಹೇಳುವುದಾದರೆ, ಕೊರೊನಾ ಕೆಲವೇ ಕೆಲವು ಮಂದಿಗಷ್ಟೇ ಕಾಟ ಕೊಟ್ಟಿಲ್ಲ. ಸಿರಿವಂತ, ಬಡವ ಅನ್ನದೇ ಎಲ್ಲರಿಗೂ ಇದು ಸಂಕಷ್ಟ ನೀಡಿದೆ. ಇಂಥ ಸಮಯದಲ್ಲಿ ನಮಗೆ ಕಷ್ಟ ಎಂದು, ಇನ್ನೊಬ್ಬರ ಮೇಲೆ ಹೊರೆ ಹಾಕಲು ಹೊರಟಿರುವುದು ನ್ಯಾಯವೇ ಎನ್ನುವ ಪ್ರಶ್ನೆಯೂ ಜನರ ಕಡೆಯಿಂದ ಕೇಳಿ ಬರುತ್ತಿವೆ.
ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ನಿರ್ಧಾರ ಈ ವರ್ಷದ ಪ್ರಸ್ತಾಪವೇನಲ್ಲ. ಕಳೆದ ವರ್ಷವೂ ಖಾಸಗಿ ಕಾಲೇಜುಗಳು ಶೇ. 25ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಆದರೆ ಕೊರೊನಾ ಸಂಕಷ್ಟದ ಕಾರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ ಒಪ್ಪಿಗೆ ನೀಡಿರಲಿಲ್ಲ. ಆದರೆ ಕಾಲೇಜು ಸೇರುವಾಗ ಇತರ ಶುಲ್ಕವಾಗಿ ಗರಿಷ್ಠ 20 ಸಾವಿರ ರೂ. ಗಳನ್ನು ಪಡೆದುಕೊಳ್ಳಲು ಅವಕಾಶ ನೀಡಿತ್ತು.
ಕಳೆದ ವರ್ಷ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ಕೊಟ್ಟಿಲ್ಲ ಎನ್ನುವ ಕಾರಣ ದಿಂದಾಗಿ ಈ ವರ್ಷ ಖಾಸಗಿ ಕಾಲೇಜುಗಳು ಶುಲ್ಕ ಹೆಚ್ಚಳ ಮಾಡಲು ಹೊರಟಿವೆ. ಕಾಲೇಜುಗಳ ಆಡಳಿತ ಮಂಡಳಿಗಳ ಈ ಪ್ರಸ್ತಾವದ ಬಗ್ಗೆ ರಾಜ್ಯ ಸರಕಾರವೂ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳಿದೆ. ಸರಕಾರದ ಹೇಳಿಕೆಯಂತೆಯೇ ಸದ್ಯ ಶುಲ್ಕ ಹೆಚ್ಚಳ ಮಾಡಿಲ್ಲವಾದರೂ, ಮುಂದೆ ಹೆಚ್ಚಳ ಮಾಡುವ ಸಾಧ್ಯತೆ ಗಳಂತೂ ಇದ್ದೇ ಇವೆ.
ಸದ್ಯ ವೃತ್ತಿಪರ ಕೋರ್ಸ್‌ಗಳ ಸಿಇಟಿ ಆರಂಭವಾಗಿದ್ದು, ಮೊದಲ ದಿನ ಅಂತ್ಯವಾಗಿದೆ. ಇಂಥ ಸಮಯದಲ್ಲಿ ಶುಲ್ಕ ಹೆಚ್ಚಳದಂಥ ಮಾತುಗಳನ್ನು ಹೇಳಿ ವಿದ್ಯಾರ್ಥಿಗಳ ಮನಸ್ಸನ್ನು ಅಳುಕಿಸಬಾರದಿತ್ತು. ಈಗಲೇ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿನ ಶುಲ್ಕ ಹೆಚ್ಚೇ ಇದೆ. ಇದರ ಜತೆಗೆ ಇನ್ನಷ್ಟು ಹೆಚ್ಚಳ ಮಾಡುತ್ತಾರೆ ಎಂದರೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಆಘಾತಕಾರಿ ಸುದ್ದಿಯೇ ಹೌದು.
ಖಾಸಗಿ ಕಾಲೇಜುಗಳ ಪ್ರಸ್ತಾವದಂತೆ ಒಂದೊಮ್ಮೆ ಶುಲ್ಕ ಹೆಚ್ಚಳವಾದರೆ, ಉತ್ತಮ ಮೂಲಸೌಕರ್ಯವಿರುವ ಕಾಲೇಜುಗಳಲ್ಲಿ 71,896 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಸದ್ಯ ಇದು 65,360 ರೂ.ಗಳಿದೆ. ಇನ್ನು ಮೂಲಸೌಕರ್ಯ ಕೊಂಚ ಕಡಿಮೆ ಇರುವ ಕಾಲೇಜುಗಳಲ್ಲಿ ಶುಲ್ಕ 58,806 ರೂ.ಗಳಿಂದ 64,686 ರೂ.ಗಳಿಗೆ ಏರಿಕೆಯಾಗುತ್ತದೆ. ಕಾಮೆಡ್-ಕೆ ಕಾಲೇಜುಗಳಲ್ಲಿನ ಶುಲ್ಕವಂತೂ ತುಸು ಹೆಚ್ಚೇ ಆಗುತ್ತದೆ.
ಏನೇ ಆಗಲಿ, ಸದ್ಯದ ಮಟ್ಟಿಗಂತೂ ಕೊರೊನಾ ಇನ್ನೂ ಹೋಗಿಲ್ಲ. ಜನರ ಆರ್ಥಿಕ ಸ್ಥಿತಿಯೂ ಅಷ್ಟಕ್ಕಷ್ಟೇ ಎನ್ನುವಂತಹ ಸ್ಥಿತಿಯಲ್ಲಿದೆ. ಹಾಗಾಗಿ ಜನರ ನೋವನ್ನೂ ಅರ್ಥ ಮಾಡಿಕೊಂಡು, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಸರಕಾರ ಮಾತನಾಡಿ, ಶುಲ್ಕ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು. ಜತೆಗೆ, ಶುಲ್ಕ ಹೆಚ್ಚಿಸದೇ ಬೇರೆ ಮಾರ್ಗವಿಲ್ಲ ಎನ್ನುವ ಸ್ಥಿತಿ ಎದುರಾದರೆ, ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ಆಡಳಿತ ಮಂಡಳಿಗಳಿಗೆ ಹೊರೆಯಾಗದಂತೆ ಒಂದು ಮೊತ್ತವನ್ನು ನಿಗದಿ ಮಾಡಬೇಕು. ಈ ವಿಚಾರದಲ್ಲಿ ಪೋಷಕರ ಸಮಸ್ಯೆಯನ್ನೂ ಆಲಿಸಬೇಕು ಎಂಬ ಒತ್ತಾಯವೂ ಜನರ ಕಡೆಯಲ್ಲಿದೆ.