Advertisement
ಭಾರತ ಸ್ವಾತಂತ್ರ್ಯ ಗಳಿಸುವ 7 ವರ್ಷಗಳ ಮುನ್ನ ಕೃಷ್ಣಾ ತೀರದ ಕೊಲ್ಹಾರ ಎಂಬ ಪುಟ್ಟ ಹಳ್ಳಿಯಲ್ಲಿ ಜನ್ಮ ತಳೆದ ಕೃಷ್ಣ ಕೊಲ್ಹಾರ ಕುಲಕರ್ಣಿ ಎಂಬ ಪ್ರತಿಭೆ, ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಬಹು ವಿಷಯಗಳಲ್ಲಿ ಪ್ರಭುತ್ವ ಸಾಧಿಸಿರುವ ವ್ಯಕ್ತಿತ್ವ.
Related Articles
Advertisement
ಇದಲ್ಲದೇ ವಿಜಪುರ ಆದಿಲ್ ಶಾಹಿ ಇತಿಹಾಸದ ಕುರಿತು ಅತ್ಯಂತ ಸ್ಪಷ್ಟವಾಗಿ ಮಾತನಾಡ ಬಲ್ಲ ಇವರು, ನಾಡಿನ ನೀರಾವರಿ ಅದರಲ್ಲೂ ಕೃಷ್ಣಾ-ಕಾವೇರಿ ನೀರಾವರಿ ಸಮಸ್ಯೆ, ಸವಾಲುಗಳ ಕುರಿತು ಅತ್ಯಂತ ನಿಖರವಾಗಿ ಮಾತನಾಡುವ ಜ್ಞಾನ ಸಂಪತ್ತು ಹೊಂದಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಅಂತರಾಜ್ಯ ಜಲವಿವಾದ ಸಮಸ್ಯೆ ತಲೆದೋರಿದಾಗ ಇವರ ಸಲಹೆ, ಮಾರ್ಗದರ್ಶನಕ್ಕೆ ಮೊರೆ ಹೋಗುತ್ತದೆ ಎಂಬುದು ನಾಡಿಗೆ ಹೆಮ್ಮೆ.
80 ರ ಈ ಹರೆಯದಲ್ಲೂ ಬಿಎಲ್‍ಡಿಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಆದಿಲ್ ಶಾಹಿ ಕಾಲದ ಸಾಹಿತ್ಯದ 18 ಸಂಪುಟಗಳ ಸಂಶೋಧನೆ, ಅನುವಾದ ಹಾಗೂ ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಸಂಶೋಧನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಇದಲ್ಲದೇ ನಾಡಿನ ಹಾಗೂ ದೇಶದ ವಿವಿಸ ಸಂಶೋಧನೆ, ಸಂಘ-ಸಂಸ್ಥೆಗಳು ಇವರಲ್ಲಿರುವ ಜ್ಞಾನಶಕ್ತಿಯನ್ನು ಬಳಸಿಕೊಂಡಿದ್ದು, ಇವರ ಸೇವೆಗೆ ನೂರಾರು ಪ್ರಶಸ್ತಿ, ಸಮ್ಮಾನಗಳೂ ಲಭಿಸಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಇವರ ಅನುವಾದ ಸಾಹಿತ್ಯದ ಸಾಧನೆಗೆ ಜೀವಮಾನದ ಪ್ರಶಸ್ತಿ ನೀಡಿದ್ದರೆ, 2013 ರಲ್ಲಿ ರಾಜ್ಯ ಸರ್ಕಾರ ಕನಕಶ್ರೀ ಪ್ರಶಸ್ತಿ ನೀಡಿದೆ.ಇದಲ್ಲದೇ ದೇಶದ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಇವರ ವೈವಿಧ್ಯಮಯ ಸಾಧನೆಗೆ ತಮ್ಮ ಪ್ರಶಸ್ತಿಗಳನ್ನು ನೀಡಿ ತಮ್ಮ ಸಂಸ್ಥೆ ಹಾಗೂ ಪ್ರಶಸ್ತಿ ಗೌರವ ಹೆಚ್ಚಿಸಿಕೊಂಡಿವೆ. ಇದೀಗ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಬಸವನಾಡಿನ ಸುಪುತ್ರನಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ”ಸರ್ಕಾರ ನಾನು ಮಾಡಿದ ಸಾಹಿತ್ಯ, ಸಂಶೋಧನೆಯಂಥ ಎಲ್ಲ ಸೇವೆಯನ್ನೂ ಗುರುತಿಸಿ, ಕಾಲಕಾಲಕ್ಕೆ ಗೌರವ ನೀಡುತ್ತಲೇ ಬಂದಿದೆ. ಎಂಟು ವರ್ಷಗಳ ಹಿಂದೆ ಕನಕಶ್ರೀ ಪ್ರಶಸ್ತಿ ನೀಡಿದ್ದ ಸರ್ಕಾರ, ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ.”