Advertisement

ಉತ್ಪನ್ನಗಳು ಪರಿಸರ ಪೂರಕವಾಗಿರಲಿ: ಡಾ|ಮಂಜಪ್ಪ

06:30 AM Jan 18, 2019 | |

ದಾವಣಗೆರೆ: ಜನರು ಉತ್ಪಾದಿಸುವ ಉತ್ಪನ್ನಗಳು ಪರಿಸರದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು ಎಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಡಾ| ಎಸ್‌. ಮಂಜಪ್ಪ ಹೇಳಿದರು.

Advertisement

ನಗರದ ಬಿಐಇಟಿಯ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಪರಿಸರ ಇಂಜಿನಿಯರಿಂಗ್‌ನ ಸ್ನಾತಕೋತ್ತರ ವಿಭಾಗ, ಸಿವಿಲ್‌ ಇಂಜಿನಿಯರಿಂಗ್‌ ವಿಭಾಗ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಪರಿಸರ ಪರಿಣಾಮಗಳ ಅಧ್ಯಯನದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಆಹಾರ, ಇಂಧನ, ಆರೋಗ್ಯ ಭದ್ರತೆ ಅತ್ಯಗತ್ಯ. ಆದರೆ, ಅಂತಹ ಉತ್ಪನ್ನಗಳು ಪರಿಸರದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಪ್ರತಿಯೊಬ್ಬರು ಅವಲೋಕನ ಮಾಡಬೇಕು. ಪರಿಸರ ಪೂರಕವಾಗಿ ಕೃಷಿ ಮಾಡಲು ಮುಂದಾಗಬೇಕು ಎಂದರು.

ಆರೋಗ್ಯಕ್ಕಾಗಿ ಉತ್ಪಾದಿಸುವ ಔಷಧಿಗಳಿಗಾಗಿ ಅನೇಕ ರಸಾಯನಿಕಗಳು ಅಗತ್ಯವಾಗಿ ಬೇಕಾಗಿರುತ್ತದೆ. ಕೆಲವೊಂದು ರಸಾಯನಿಕ ಉತ್ಪನ್ನಗಳಿಗಿಂತ 100 ಪಟ್ಟು ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ಹೇಳಿದರು.

ಭಾರತ 1960ರಲ್ಲಿ ಬೇರೆ ಭಾಗಗಳಿಂದ ಆಹಾರ ಆಮದು ಮಾಡಿಕೊಳ್ಳುತ್ತಿತ್ತು. ಈಗ ಆಹಾರ ಖಾತ್ರಿ ದೊರೆಯುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಮತ್ತು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಈ ದಾರಿಯಲ್ಲಿ ಪರಿಸರದ ಮೇಲೆ ಅಪಾರ ಪರಿಣಾಮವಾಗಿದೆ ಎಂದು ಹೇಳಿದರು.

Advertisement

ಉದ್ಯಮಗಳು ಪರಿಸರದ ಮೇಲೆ ಒತ್ತಡ ಹೆಚ್ಚಿಸುತ್ತಿವೆ. ಇಂತಹ ಸಮಸ್ಯೆ ಬಗೆಹರಿಸಲು ಪರಿಸರ ಇಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಇತರೆ ಎಲ್ಲಾ ವಿಜ್ಞಾನ ಹಾಗೂ ಸಾಮಾಜಿಕ ವಿಜ್ಞಾನ ವಿಭಾಗಗಳ ಸ್ನೇಹಿತರೊಂದಿಗೆ ಜೊತೆಗೂಡಿ ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ| ಬಸವರಾಜ್‌ ಬಣಕಾರ್‌ ಮಾತನಾಡಿ, ಈಗಿನ ಇಂಜಿನಿಯರ್‌ಗಳು ಸಹಜವಾಗಿ ಹಿತಕರ ವಾತಾವರಣ ಇರುವಂತಹ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಬೇಕು. ಇದಕ್ಕೆ ಸಾಂಪ್ರದಾಯಿಕ ಮನೆಗಳು ಮಾದರಿಯಾಗಿವೆ ಎಂದು ಹೇಳಿದರು.

ಡಾ| ಜಿ.ಪಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಿವಿ ಸಿಂಡಿಕೇಟ್ ಮಾಜಿ ಸದಸ್ಯ ಸಿ.ಎಚ್. ಮುರಿಗೇಂದ್ರಪ್ಪ, ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ಎಚ್.ಬಿ. ಅರವಿಂದ್‌, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾಂತೀಯ ವಿಭಾಗದ ಉಪ ಪರಿಸರ ಅಧಿಕಾರಿ ಎಸ್‌.ಸಿ. ಸುರೇಶ್‌, ಕಾಲೇಜು ಪ್ರಾಂಶುಪಾಲ ಕೆ.ಎಸ್‌. ಬಸವರಾಜಪ್ಪ, ಡಾ| ಬಿ.ಇ. ರಂಗಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next