ತುಮಕೂರು: ನಾವು ಬದುಕುತ್ತಿರುವ ಕಾಲಘಟ್ಟದಲ್ಲಿ ಭಾವೋದ್ವೇಗ ವಿಜೃಂಭಿಸುತ್ತಿದೆ. ಉದ್ಯೋಗಗಳನ್ನು ಕಿತ್ತುಕೊಳ್ಳುವಂತಹ ಖಾಸಗೀಕರಣ ಬಂದಿದೆ. ಗುತ್ತಿಗೆ ಪದ್ಧತಿ ಬಂದಿದೆ. ಇದು ಸರ್ಕಾರವೇ ತಂದಿರುವ ಅಧಿಕೃತ ಜೀತದ ಕೆಲಸವಾಗಿದೆ. ಜನರ ಮಾಲೀಕತ್ವ ಇರುವ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸಿ, ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದ ಸಂಪತ್ತು ಕ್ಷೀಣ ಗೊಳಿಸಲಾಗುತ್ತಿದೆ ಎಂದು ಜನಪರ ಚಿಂತಕ ಪ್ರೊ.ಕೆ.ದೊರೈರಾಜ್ ತಿಳಿಸಿದರು. ನಗರದ ಟೌನ್‌ಹಾಲ್ನಲ್ಲಿ ಸಿಐಟಿಯು ವತಿ ಯಿಂದ ಬುಧವಾರ ಏರ್ಪ ಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿದ ಅವರು ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾರ್ವ ಜನಿಕ ಉದ್ದಿಮೆಗಳ ಉಳಿವಿಗಾಗಿ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ನೌಕರರ ಶೋಷಣೆ, ನಿರುದ್ಯೋಗ, ಬಡತನ, ಹಸಿವು ಇರುವಂತಹ ಕಾಲ ಘಟ್ಟದಲ್ಲಿ ನಾವಿದ್ದೇವೆ. ಇವು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದವು ಗಳಾಗಿವೆ. ಇಂತಹ ಅಪರಾಧಿ ಮನೋಭಾವದಿಂದ ಸಾಂಸ್ಕೃತಿಕ ವಿಕೃತಿ ಉಂಟಾ ಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯು ತ್ತಿದೆ. ಕೇವಲ ಆರ್ಥಿಕ ಶೋಷಣೆ ಮಾತ್ರವಲ್ಲದೆ, ಸಾಂಸ್ಕೃತಿಕ ವಿಕೃತಿಯೂ ನಡೆಯುತ್ತಿದ್ದು, ಜನರನ್ನು ಘಾಸಿಗೊಳಿಸಿವೆ ಎಂದು ತಿಳಿಸಿದರು.
ಉದ್ಯೋಗ, ಹಸಿವೆ ನೀಗಿಸಲು ಹೋರಾಟ: ಉದ್ಯೋಗ, ಹಸಿವೆ ನೀಗಿಸಲು, ಅತ್ಯಾಚಾರ ವಿರುದ್ಧ ಹೋರಾಟ ಮಾಡುತ್ತೇವೆ. ಆದರೆ, ಈಗ ಹೊಸ ದೊಂದು ಸವಾಲು ಎದುರಾಗಿದ್ದು, ಜನರನ್ನು ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಭಾವೋ ದ್ವೇಗಗೊಳಿಸಿ ಓಟು ಪಡೆದು ಅಧಿಕಾರ ಹಿಡಿಯುವ ತಂತ್ರ ಹೆಚ್ಚಾಗುತ್ತಿದೆ. ಈ ಮೂಲಕ ಬಂಡವಾಳ ಶಾಹಿಗಳಿಗೆ ವ್ಯವಸ್ಥೆಯನ್ನು ಒತ್ತೆ ಇಡುವ ಕೆಲಸ ನಡೆ ಯುತ್ತಿದೆ. ಸರ್ವಾಧಿಕಾರದ ಕಡೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಬಗ್ಗೆ ಕಾರ್ಮಿ ಕರು ಮತ್ತು ಜನರು ಎಚ್ಚರದಿಂದ ಇರಬೇಕು. ಬಂಡವಾಳ ಶಾಹಿ, ಕಾರ್ಪೋರೇಟ್ ಶಕ್ತಿಗಳು ಮತ್ತು ಕೋಮುವಾದಿಗಳನ್ನು ಹಿಮ್ಮೆಟ್ಟಿಸಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಎಲ್ಲಾ ಶ್ರಮಿಕರ ಐಕ್ಯತೆ ಮೂಲಕ ಇದು ಸಾಧ್ಯ. ಧರ್ಮ, ಜಾತಿ, ಮತವನ್ನು ಪ್ರಾದೇಶಿಕತೆ ಮತ್ತು ಭಾಷೆಯನ್ನು ಮೆಟ್ಟಿ ನಿಲ್ಲಬೇಕು. ಸಮಾಜದಲ್ಲಿ ದ್ವೇಷವನ್ನು ಉಂಟು ಮಾಡುವ ಶಕ್ತಿಗಳನ್ನು ಸೋಲಿಸಬೇಕು. ಇದನ್ನು ಸಾವು ಬದುಕಿನ ನಡುವಿನ ಹೋರಾಟ ಎಂದರು.
ಹೋರಾಟದಿಂದ ಕಾರ್ಮಿಕರಿಗೆ ನ್ಯಾಯ: ಮನುಷ್ಯರ ಘನತೆಯ ಬದುಕಿಗಾಗಿ ಶತಮಾನದ ಹಿಂದಿನಿಂದಲೂ ಕಾರ್ಮಿಕರು ಹೋರಾಟ ನಡೆಸಿದ ಪರಿಣಾಮ ಇಂದು ಕಾರ್ಮಿಕರು ಉಸಿರಾಡುವ, ನ್ಯಾಯ ಪಡೆಯುವಂತಹ ವಾತಾವರಣ ನಿರ್ಮಾಣ ವಾಗಿದೆ. ಇದಕ್ಕೆ ಎಡಪಂಥೀಯ ಹೋರಾಟವೇ ಕಾರಣವಾಗಿದೆ. ಪ್ರತಿವರ್ಷದ ಮೇ 1ರಂದು ಕಾರ್ಮಿಕ ದಿನವನ್ನು ಅಚರಣೆ ಮಾಡುವಂತಹ ಕಾಲ ಘಟ್ಟದಲ್ಲಿ ನಾವಿಲ್ಲ. ಹೀಗಾಗಿ ನಮ್ಮ ಚಿಂತನೆಗಳನ್ನು ವಿಸ್ತಿರಿಸಿಕೊಳ್ಳುವಂತಹ, ನಮ್ಮ ಹೋರಾಟಕ್ಕೆ ಹೆಚ್ಚಿನ ಬಲವನ್ನು ಚೈತನ್ಯವನ್ನು ತುಂಬಿಕೊಳ್ಳುವಂತಹ ಕೆಲಸವನ್ನು ನಾವಿಂದು ಮಾಡಬೇಕಾಗಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆಸಿ ಹೋರಾಟ ಮಾಡಬೇಕಾಗಿದೆ. ನಾವು ಬದುಕುತ್ತಿರುವ ಕಾಲಘಟ್ಟದಲ್ಲಿನ ಸವಾಲು ಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ: ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಉಪಮುಖ್ಯ ಮಂತ್ರಿಗಳ ವಿದ್ಯಾಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ. ಕಾರ್ಮಿಕ ಸಚಿವ ವೆಂಕಟರವಣಪ್ಪ ಕಾರ್ಮಿಕರ ಸಂಘದ ಪ್ರಮುಖರ ಜೊತೆ ಇದುವರೆಗೂ ಸಭೆ ನಡೆಸಿ ಕಾರ್ಮಿಕರ ಅಹವಾಲನ್ನು ಕೇಳುವ ಗೋಜಿಗೆ ಹೋಗಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಅಧಿಕಾರಿ, ಇನ್ಸ್‌ಪೆಕ್ಟರ್ ಹುದ್ದೆಗಳ ಖಾಲಿ ಇದ್ದರೂ ಗಮನಹರಿಸುತ್ತಿಲ್ಲ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಬಿಎಸ್‌ಎನ್‌ಎಲ್ ನೌಕರರ ಸಂಘದ ಮುಖಂಡ ನರೇಶ್‌ರೆಡ್ಡಿ, ಜೀವ ವಿಮಾ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಯುವ ಮುಖಂಡ ಎಸ್.ರಾಘವೇಂದ್ರ, ಪ್ರಾಂತ ರೈತ ಸಂಘದ ಸಂಚಾಲಕ ಸಿ. ಅಜ್ಜಪ್ಪ, ಅಂಗನವಾಡಿ ನೌಕರರ ಸಂಘದ ಜಿ.ಕಮಲ, ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯ ಪ್ರಧಾನ ಕಾರ್ಯ ದರ್ಶಿ ಎನ್.ಕೆ.ಸುಬ್ರಮಣ್ಯ, ಆಸ್ಪತ್ರೆ ನೌಕರರ ಸಂಘದ ರಂಗಮ್ಮ, ಮತ್ತಿತರರು ಹಾಜರಿದ್ದರು.