Advertisement

ನೀರೂರಿಸುತ್ತಿದೆ ನವಣೆಯ ಅವಲಕ್ಕಿ

04:30 PM Sep 24, 2018 | |

ಹುಬ್ಬಳ್ಳಿ: ಸಿರಿಧಾನ್ಯಗಳಲ್ಲಿನ ಪೋಷಕಾಂಶ, ದೇಹಾರೋಗ್ಯದ ಮೇಲೆ ಇದರಿಂದಾಗುವ ಪರಿಣಾಮಗಳ ಜತೆಗೆ, ಸಿರಿಧಾನ್ಯ ಬಳಸಿ ವಿವಿಧ ಪದಾರ್ಥಗಳ ಸವಿ ಉಣಬಡಿಸುತ್ತಿರುವ ಕೃಷಿ ವಿವಿಯ ಗೃಹ ಮತ್ತು ಆಹಾರ ವಿಜ್ಞಾನ ವಿಭಾಗ, ಸಿರಿಧಾನ್ಯ ಬಳಸಿ ಉತ್ಪನ್ನಗಳ ತಯಾರಿಕೆ ತಂತ್ರಜ್ಞಾನ ಹಾಗೂ ತರಬೇತಿಯ ಜಾಗೃತಿ ಮೂಡಿಸತೊಡಗಿದೆ.

Advertisement

ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿನ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸ್ಪಟ್ಟ ಬೇಕರಿ ಉತ್ಪನ್ನಗಳು, ಉಂಡೆ, ಚಕಲಿ, ಅವಲಕ್ಕಿ, ಕೋಡಬಳೆ ಹೀಗೆ ತರಾವಧಿ ಪದಾರ್ಥಗಳು ತಿಂಡಿಪ್ರಿಯರ ಬಾಯಲ್ಲಿ ನೀರೂರಿಸುತ್ತಿದ್ದು, ಅನೇಕರನ್ನು ತನ್ನತ್ತ ಆಕರ್ಷಿಸುತ್ತಿವೆ.

ಧಾರವಾಡ ಕೃವಿವಿಯ ಗೃಹ ಮತ್ತು ಆಹಾರ ವಿಜ್ಞಾನ ವಿಭಾಗ, ಫ‌ುಡ್‌ ಟೆಕ್‌ ವಿಭಾಗದದವರು ಜನರಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಳ ನಿಟ್ಟಿನಲ್ಲಿ ಪ್ರದರ್ಶನ, ಮಾಹಿತಿ ಹಾಗೂ ಮಾರಾಟ ವ್ಯವಸ್ಥೆ ಕೈಗೊಂಡಿದ್ದಾರೆ. ನವಣೆ ಅವಲಕ್ಕಿ, ಕೊರ್ಲೆ ಕುಕ್ಕೀಸ್‌: ಸಿರಿಧಾನ್ಯಗಳಾದ ನವಣೆ, ಸಜ್ಜೆ, ಹಾರಕ, ಕೊರ್ಲೆ, ಊದಲು, ಬರುಗು, ಜೋಳ, ರಾಗಿಯಂತಹ ಸಿರಿಧಾನ್ಯಗಳನ್ನು ಬಳಸಿಕೊಂಡು ಏನೆಲ್ಲಾ ಆಹಾರ ಪದಾರ್ಥ, ತಿನಿಸುಗಳನ್ನು ತಯಾರಿಸಬಹುದು ಎಂಬುದರ ಅಧ್ಯಯನ, ಸಂಶೋಧನೆ ಕೈಗೊಳ್ಳುವ ಮೂಲಕ ಹೊಸ ಹೊಸ ಪದಾರ್ಥಗಳನ್ನು ತಯಾರಿಸಲಾಗುತ್ತದೆ.

ಸಿರಿಧಾನ್ಯಗಳನ್ನು ಬಳಸಿ ಉಂಡೆ, ಚಕಲಿ, ಕೋಡಬಳೆ, ಸೇವ್‌, ಶಂಕರಪೊಳೆ, ಬರ್ಫಿ, ಬ್ರೆಡ್‌, ಬನ್‌, ಬಿಸ್ಕಿಟ್‌ ಇನ್ನಿತರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ವರ್ಷ ಹೊಸ ಪದಾರ್ಥವಾಗಿ ನವಣೆ ಅವಲಕ್ಕಿ, ಹಾರಕ ಮತ್ತು ಕೊರ್ಲೆಗಳನ್ನು ಬಳಸಿಕೊಂಡು ಕುಕ್ಕೀಸ್‌ ತಯಾರಿಸಲಾಗಿದೆ. ನವಣೆಯಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದರೂ ಅವಲಕ್ಕಿ ತಯಾರಿಸುವುದರ ಕುರಿತಾಗಿ ನಡೆದ ಅಧ್ಯಯನ ಇದೀಗ ಉತ್ಪನ್ನ ರೂಪದಲ್ಲಿ ಹೊರಬಂದಿದೆ.

ನವಣೆಯನ್ನು ಅಕ್ಕಿಯಾಗಿಸಿ ರೋಟರ್‌ ಫ್ಲೆಕರ್‌ ಯಂತ್ರದಲ್ಲಿ ಅದನ್ನು ಹಾಕುವ ಮೂಲಕ ನವಣೆ ಅಕ್ಕಿಯನ್ನು ಅವಲಕ್ಕಿ ರೂಪಕ್ಕೆ ತರಲಾಗುತ್ತದೆ. ಒಂದು ರೀತಿಯಲ್ಲಿ ರವಾದಂತೆ ಕಾಣುವ ನವಣೆ ಅವಲಕ್ಕಿಗೆ ಶೇಂಗಾ, ಪುಟಾಣಿ, ಒಣಕೊಬ್ಬರಿ, ಅರಿಶಿಣದೊಂದಿಗೆ ಒಗ್ಗರಣೆ ಕೊಡುವ ಮೂಲಕ ಅವಲಕ್ಕಿ ತಯಾರಿಸಲಾಗುತ್ತದೆ. ಒಂದು ಕೆಜಿ ಅವಲಕ್ಕಿ 300ರೂ.ಗೆ ದೊರೆಯಲಿದ್ದು, ಸುಮಾರು ಎರಡು ತಿಂಗಳವರೆಗೆ ಇದನ್ನು ಇರಿಸಿದರೂ ಏನು ಆಗುವುದಿಲ್ಲ ಎಂಬುದು ಗೃಹ ಮತ್ತು ಆಹಾರ ವಿಜ್ಞಾನ ವಿಭಾಗದ ಅಧಿಕಾರಿಗಳ ಅನಿಸಿಕೆ. 

Advertisement

ಗೃಹ ಮತ್ತು ಆಹಾರ ವಿಜ್ಞಾನ ವಿಭಾಗದಿಂದ ಸಿರಿಧಾನ್ಯಗಳನ್ನೇ ಬಳಸಿಕೊಂಡು ಇದುವರೆಗೆ ಸುಮಾರು 75 ಆಹಾರ ಪದಾರ್ಥ ಹಾಗೂ ತಿನಿಸುಗಳನ್ನು ಹೊರತಲಾಗಿದೆ. ಮಧುಮೇಹಿಗಳಿಗೆ ಉತ್ಪನ್ನ: ಸಿರಿಧಾನ್ಯ ಮಧುಮೇಹಿಗಳಿಗೆ ಅತ್ಯಂತ ಸ್ನೇಹಿಯಾಗಿವೆ. ಈ ಹಿನ್ನೆಲೆಯಲ್ಲಿ ಮಧುಮೇಹಿಗಳಿಗೆ ಪೂರಕವಾಗಿ ನವಣೆ ಸೇರಿದಂತೆ ವಿವಿಧ ಸಿರಿಧಾನ್ಯ ಬಳಸಿಕೊಂಡು ಅನ್ನ, ಉಪ್ಪಿಟ್ಟು ಇನ್ನಿತರ ಆಹಾರ ಪದಾರ್ಥ ತಯಾರಿಸಲಾಗಿದೆ. ಸಿರಿಧಾನ್ಯಗಳನ್ನೇ ಬಳಸಿಕೊಂಡು ಮಕ್ಕಳಿಗೆ ಪೂರಕ ಆಹಾರ ಪೌಡರ್‌ ತಯಾರಿಸಲಾಗಿದ್ದು, ನೈಸರ್ಗಿಕ ಪೋಷಕಾಂಶಗಳನ್ನು ಒಳಗೊಂಡಿದೆ.

ಅದೇ ರೀತಿ ಕ್ರೀಡಾಪಟುಗಳ ದೇಹಾರೋಗ್ಯಕ್ಕೆ ಶಕ್ತಿದಾಯಕ ಮಿಕ್ಸ್‌ ನ್ನು ಹೊರತರಲಾಗಿದೆ. ಬಾಸ್ಕೆಟ್‌ಬಾಲ್‌ ಕ್ರೀಡಾಪಟುಗಳ ಮೇಲೆ ಪ್ರಯೋಗ ಮಾಡಿ, ಅದರ ಪರಿಣಾಮದ ಆಧಾರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಮಾರುಕಟ್ಟೆಯಲ್ಲಿ ಕ್ರೀಡಾಪಟುಗಳಿಗೆ ಶಕ್ತಿದಾಯಕ ಮಿಕ್ಸ್‌ಗಳು ದುಬಾರಿಯಾಗಿದ್ದು, ಕೃವಿವಿಯಲ್ಲಿ ತಯಾರಿಸಿದ ಶಕ್ತಿವರ್ಧಕ ಮಿಕ್ಸ್‌ ಒಂದು ಕೆಜಿಗೆ ಕೇವಲ 120ರೂ.ನಲ್ಲಿ ದೊರೆಯುತ್ತದೆ. ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳಿಂದ ದೇಹಾರೋಗ್ಯಕ್ಕೆ ಪೂರಕ ಕಾರ್ಯ, ಅದರೊಳಗಿನ ಪೋಷಕಾಂಶ ಇನ್ನಿತರ ಮಾಹಿತಿ ನೀಡಲಾಗುತ್ತಿದ್ದು, ಪ್ರದರ್ಶನ ಮಳಿಗೆಗೆ ಹೊಂದಿಕೊಂಡ ಇನ್ನೊಂದು ಮಳಿಗೆಯಲ್ಲಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿದೆ. 

ಸಿರಿಧಾನ್ಯಗಳ ಮಹತ್ವವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಪಡಿಸಬೇಕಾಗಿದೆ. ಸಂಪ್ರದಾಯ ರೀತಿಯಲ್ಲಿ ಬಳಕೆಗೆ ಹೇಳಿದರೆ ಬಳಸುವವರ ಸಂಖ್ಯೆ ಹೆಚ್ಚದು ಎಂಬುದನ್ನು ಅರಿತು, ಇಂದಿನ ಯುವ ಸಮೂಹ ಇಷ್ಟಗಳಿಗೆ ಪೂರಕವಾಗಿ ಬೇಕರಿ ಇನ್ನಿತರ ಉತ್ಪನ್ನಗಳನ್ನು ತಯಾರಿಸಲಾಗಿದೆ. ಸಹಜವಾಗಿಯೇ ಇವು ಆಕರ್ಷಿಸುತ್ತಿವೆ. ಸಿರಿಧಾನ್ಯ ಮೌಲ್ಯವರ್ಧನೆ ಉತ್ಪನ್ನಗಳ ಮಹತ್ವದ ಜತೆಗೆ, ನಾವು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ಉದ್ಯಮಾಸಕ್ತರಿಗೆ ಅಗತ್ಯ ತರಬೇತಿಯೊಂದಿಗೆ ನೀಡಲು ಸಿದ್ಧರಿದ್ದೇವೆ.
. ಡಾ| ಕಸ್ತೂರಿಬಾ,
  ಮುಖ್ಯಸ್ಥರು, ಗೃಹ-ಆಹಾರ ವಿಜ್ಞಾನ ವಿಭಾಗ, ಕೃವಿವಿ.

ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next