Advertisement

ಸಾಂಪ್ರದಾಯಿಕ ಅಡುಗೆಗಳ ಸ್ಥಾನದಲ್ಲಿ ಸಂಸ್ಕರಿತ ಆಹಾರಗಳು

07:02 PM Aug 17, 2019 | Sriram |

ಸಂಸ್ಕರಿತ ಆಹಾರಗಳಾವುವು?
ಆಹಾರವನ್ನು ಸಂರಕ್ಷಿಸಲು ಅಥವಾ ದಿಢೀರ್‌ ತಯಾರಿ ಅಥವಾ ಸೇವನೆಗೆ ಅನುವಾಗುವಂತೆ ಪರಿವರ್ತಿಸಲಾದ ಆಹಾರಗಳನ್ನು ಸಂಸ್ಕರಿತ ಆಹಾರಗಳೆನ್ನುತ್ತಾರೆ. ರೆಡಿ ಮಿಕ್ಸ್‌ಗಳು, ಪಾಸ್ತಾ ಉತ್ಪನ್ನಗಳು, ಕ್ಯಾನ್‌ಡ್‌ ಆಹಾರಗಳು, ಕಾನ್‌ಫೆಕ್ಷನರಿಗಳು, ಬೇಕರಿ ಆಹಾರಗಳು, ಹೈನು ಉತ್ಪನ್ನಗಳು ಮತ್ತು ದಿಢೀರ್‌ ಸೇವನೆ ಮಾಡಬಹುದಾದ ಉಪಾಹಾರ ಹಾಗೂ ಪದಾರ್ಥಗಳನ್ನು ಇದಕ್ಕೆ ಸಾಮಾನ್ಯ ಉದಾಹರಣೆಗಳಾಗಿ ನೀಡಬಹುದು. ಇದಕ್ಕೆ ತಂತ್ರಜ್ಞಾನ ಸಹಾಯ ಬೇಕಾಗಿರುವುದರಿಂದ ಮನೆಯಲ್ಲಿ ತಯಾರಿಸಿದ ಆಹಾರ ವಸ್ತುಗಳಿಗಿಂತ ಹೆಚ್ಚು ದರವಿರುತ್ತದೆ.

Advertisement

ನಮಗೆ ಸಂಸ್ಕರಿತ
ಆಹಾರಗಳು ಬೇಕೇ?
ಜೀವನಶೈಲಿ ಬದಲಾವಣೆಯಿಂದಾಗಿ ಸಂಸ್ಕರಿತ ಆಹಾರಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಇಂದಿನ ದಿನಗಳಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು. ಉದ್ಯೋಗಕ್ಕೆ ತೆರಳುವ ಸ್ತ್ರೀಯರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಸಂಸ್ಕರಿತ ಆಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವತ್ತು ನಾವೆಲ್ಲರೂ ಅನುಕೂಲ, ಸುಲಭ ಅಡುಗೆ ಮತ್ತು ಕಡಿಮೆ ಅವಧಿಯಲ್ಲಿ ತಯಾರಾಗುವ ಅಡುಗೆಯನ್ನು ಬಯಸುತ್ತಿದ್ದೇವೆ. ಹೀಗಾಗಿ ಮನೆಯಲ್ಲಿ ಅಡುಗೆ ಮಾಡುವುದರ ಬದಲು ಮಾರುಕಟ್ಟೆಯಲ್ಲಿ ಸಿಗುವ, ದಿಢೀರ್‌ ಆಗಿ ತಯಾರಿಸಿ ಉಪಯೋಗಿಸಬಹುದಾದ ಸಂಸ್ಕರಿತ ಆಹಾರಗಳನ್ನು ಬಯಸುತ್ತಿದ್ದೇವೆ. ಹೈನು ಉತ್ಪನ್ನಗಳು, ಮಾಂಸ, ಮೀನು, ತಾಜಾ ತರಕಾರಿಗಳು ಮತ್ತು ಹಣ್ಣುಗಳಿಗೂ ಕಡ್ಡಾಯವಾಗಿ ಸಂಸ್ಕರಣೆಯನ್ನು ನಡೆಸುತ್ತಾರೆ, ಅವುಗಳ ಸಾಗಣೆ ಮತ್ತು ರಫ್ತು ಇದರಿಂದ ಸಾಧ್ಯವಾಗುತ್ತದೆ.

ಪೌಷ್ಟಿಕಾಂಶ ಪ್ರಮಾಣಕ್ಕೆ
ಸಂಸ್ಕರಿತ ಆಹಾರಗಳು ಕೊಡುಗೆ
ನೀಡುತ್ತವೆಯೇ?
ಈ ಆಹಾರಗಳನ್ನು ಸಾಮಾನ್ಯವಾಗಿ ಯಾವುದೇ ಹೊತ್ತಿಗೆ ಆಹಾರದ ಭಾಗವಾಗಿ ಅಥವಾ ಉಪಾಹಾರವಾಗಿ ಸೇವಿಸಲಾಗುತ್ತದೆ. ಪೌಷ್ಟಿಕಾಂಶ ಪ್ರಮಾಣಕ್ಕೆ ಈ ಆಹಾರಗಳು ನೀಡುವ ಕೊಡುಗೆಯು ಆಯಾ ಆಹಾರದ ಸಂಸ್ಕರಣೆ, ಫೋರ್ಟಿಫಿಕೇಶನ್‌, ಎಷ್ಟು ಬಾರಿ ಉಪಯೋಗಿಸುತ್ತೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ಸಂಸ್ಕರಿತ ಆಹಾರಗಳಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪು ಅಧಿಕ ಪ್ರಮಾಣದಲ್ಲಿ ಇದ್ದು, ನಾರಿನಂಶ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ಇರುತ್ತದೆ. ಆದ್ದರಿಂದ ಈ ಆಹಾರಗಳನ್ನು ಉಪಯೋಗಿಸುವಾಗ ಎಚ್ಚರಿಕೆ ಅವಶ್ಯ.

ಸಾಂಪ್ರದಾಯಿಕ ಉಪಾಹಾರ ತಿನಿಸುಗಳಾದ ಇಡ್ಲಿ, ದೋಸೆ, ಉಪ್ಪಿಟ್ಟು ಮತ್ತು ರೋಟ್ಟಿ ಇತ್ಯಾದಿಗಳು ಪೌಷ್ಟಿಕಾಂಶ ಸಮೃದ್ಧವಾಗಿರುತ್ತವೆ. ಅರಳು, ಅವಲಕ್ಕಿಗಳು ಗರಿಮುರಿಯಾಗಿರುತ್ತವೆಯಲ್ಲದೆ ರುಚಿಕರವೂ ಆಗಿದ್ದು, ಸುಲಭವಾಗಿ ಜೀರ್ಣವಾಗಬಲ್ಲವು. ಚಿಪ್ಸ್‌, ಕ್ಯಾಂಡಿಗಳು ಮತ್ತು ಚಾಕಲೇಟುಗಳಂತಹವು ಮಕ್ಕಳಿಗೆ ಪ್ರಿಯವಾದರೂ ಅನಾರೋಗ್ಯಕಾರಿ ಎಂದು ಪರಿಗಣಿತವಾಗಿವೆ. ಏಕೆಂದರೆ ಅವುಗಳಲ್ಲಿರುವುದು ಬರೇ ಕ್ಯಾಲೊರಿಗಳು ಮಾತ್ರ. ಇಂತಹ ಸಾಕಷ್ಟು ಆಹಾರಗಳಲ್ಲಿ ಕೃತಕ ಬಣ್ಣಗಳು, ರಾಸಾಯನಿಕಗಳು ಮತ್ತು ಟೇಸ್ಟ್‌ ಮೇಕರ್‌ಗಳಿರುತ್ತವೆ. ಇವು ಸೇವನೆಯ ಬಳಿಕ ಉಲ್ಲಾಸ ಉಂಟು ಮಾಡುತ್ತವೆ. ಆದ್ದರಿಂದ ಇಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.

ದಿಢೀರ್‌ ಆಹಾರ, ಫಾಸ್ಟ್‌ ಫ‌ುಡ್‌,
ಬೀದಿಬದಿ ಆಹಾರ ಮತ್ತು ಜಂಕ್‌
ಫ‌ುಡ್‌ – ವ್ಯತ್ಯಾಸ ಏನು?
ಇನ್‌ಸ್ಟಂಟ್‌ ಆಹಾರಗಳೆಂದರೆ ದ್ರವದಲ್ಲಿ ಹಾಕಿದಾಕ್ಷಣ ಕರಗುವ ಆಹಾರಗಳು. ಉದಾಹರಣೆಗೆ, ಇನ್‌ಸ್ಟಂಟ್‌ ನೂಡಲ್‌ಗ‌ಳು, ಸೂಪ್‌ ಪೌಡರ್‌ ಇತ್ಯಾದಿ. ಈ ಆಹಾರಗಳು ಅನಾರೋಗ್ಯಕರವಲ್ಲದೆ ಅತಿ ಹೆಚ್ಚು ಉಪ್ಪು ಮತ್ತು ಕ್ಯಾಲೊರಿ ಹೊಂದಿರುತ್ತವೆ. ಇವುಗಳಲ್ಲಿ ಕೆಲವು ಅಜಿನಮೊಟೊ ಹೊಂದಿದ್ದು, ಸೋಡಿಯಂ ಹೆಚ್ಚುತ್ತದೆ.

Advertisement

ಫಾಸ್ಟ್‌ ಫ‌ುಡ್‌ಗಳು ಆರ್ಡರ್‌ ನೀಡಿದ ಕೆಲವೇ ನಿಮಿಷಗಳಲ್ಲಿ ತಯಾರಿಸಿ ತಿನ್ನಲು ಸಿದ್ಧವಾಗುವ ಖಾದ್ಯಗಳು. ಉದಾಹರಣೆಗೆ, ನೂಡಲ್‌ಗ‌ಳು, ಬರ್ಗರ್‌ಗಳು, ಪಿಜಾl, ಕರಿದ ಮೀನು, ಮಿಲ್ಕ್ ಶೇಕ್‌ಗಳು, ಚಿಪ್ಸ್‌ ಇತ್ಯಾದಿ. ಇವುಗಳಲ್ಲಿ ಕ್ಯಾಲೊರಿ ಹೆಚ್ಚಿರುತ್ತದೆ. ಇವುಗಳನ್ನು ಹೇಗೆ ದಾಸ್ತಾನು ಮಾಡಲಾಗುತ್ತದೆ, ಹೇಗೆ ತಯಾರಿಸಲಾಗುತ್ತದೆ ಮತ್ತು ಕಲಬೆರಕೆ ಆಗುತ್ತದೆಯೇ ಎಂಬುದು ಗಮನಿಸಬೇಕಾಗುತ್ತದೆ.

ಬೀದಿಬದಿ ಆಹಾರಗಳು ಬೀದಿ ಬದಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲಿ ತಯಾರಿಸಿ ಮಾರುವಂಥವು. ಉದಾಹರಣೆಗೆ, ಚಾಟ್‌ ಐಟಂಗಳು, ದೋಸೆ, ಇಡ್ಲಿ, ವಡಾ ಮತ್ತು ಭಜಿ, ಬೋಂಡಾ ಇತ್ಯಾದಿ. ನೈರ್ಮಲ್ಯಯುತವಾಗಿ ತಯಾರಿಸಿರದೇ ಇದ್ದರೆ ಇವು ಅಪಾಯಕಾರಿಯಾಗಿರುವ ಸಾಧ್ಯತೆ ಇದೆ.

ಜಂಕ್‌ ಫ‌ುಡ್‌ಗಳು ಯಾವುದೇ ವಿಟಮಿನ್‌ ಅಥವಾ ಖನಿಜಾಂಶಗಳು ಇಲ್ಲದ, ಬರೇ ಉಪ್ಪು ಮತ್ತು ಸಕ್ಕರೆಯಷ್ಟೇ ಹೇರಳವಾಗಿರುವ ಆಹಾರಗಳು. ಉದಾಹರಣೆಗೆ, ಕೃತಕ ರುಚಿಕಾರಕಗಳಿರುವ ಪಾನೀಯಗಳು, ಬಟಾಟೆ ಚಿಪ್ಸ್‌, ಫ್ರೆಂಚ್‌ ಫ್ರೈಸ್‌ ಇತ್ಯಾದಿ.

ಅನಾರೋಗ್ಯಕರ ಸಂಸ್ಕರಿತ
ಆಹಾರಗಳ ಸೇವನೆಯನ್ನು
ಮಿತಗೊಳಿಸಬೇಕು ಏಕೆ?
ಸಂಸ್ಕರಿತ ಆಹಾರಗಳನ್ನು ಆಗಾಗ ಸೇವಿಸುವುದು ದೇಹದಲ್ಲಿ ಬೊಜ್ಜು ಬೆಳೆಯಲು ಪೂರಕ ವಾತಾವರಣ ನಿರ್ಮಿಸುತ್ತದೆ ಮತ್ತು ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕಗಳನ್ನು, ಫ‌ುಡ್‌ ಅಡಿಟಿವ್‌ಗಳನ್ನು ಬೆರೆಸಿದ್ದರೆ ಅದು ಕೂಡ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಭವಿಷ್ಯದಲ್ಲಿ ಮನೆಯಲ್ಲಿ ಕಳೆಯುವ ಸಮಯ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಂಸ್ಕರಿತ ಆಹಾರಗಳಿಗೆ ಬೇಡಿಕೆ ಹೆಚ್ಚುವುದು ಖಂಡಿತ. ಆದ್ದರಿಂದ ಉತ್ತಮ ಗುಣಮಟ್ಟದ, ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರವನ್ನು ಸೇವಿಸಬೇಕು ಎಂಬ ಅರಿವು ಈ ಸಂಸ್ಕರಿತ ಆಹಾರಗಳ ಆಕರ್ಷಣೆಯ ಎದುರು ಮಾಯವಾಗದಿರಲಿ.
– ಅರುಣಾ ಮಲ್ಯ
ಪಥ್ಯಾಹಾರ ತಜ್ಞೆ ,
ಡಯಾಟೆಟಿಕ್ಸ್‌ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next