Advertisement

ನಿಗದಿಯಂತೆಯೇ ಎಐಸಿಸಿ ಚುನಾವಣೆ: ಕಾಂಗ್ರೆಸ್‌ ಚುನಾವಣ ಸಮಿತಿಯ ಮಿಸ್ತ್ರಿ ಸ್ಪಷ್ಟನೆ

12:36 AM Aug 22, 2022 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ಪಕ್ಷ ಸಂಘಟನೆಯನ್ನು ದೃಢಗೊಳಿಸಲು ಹೊರಟಿರುವಂತೆಯೇ, ಕಾಂಗ್ರೆಸ್‌ ಕೂಡ ನಿಗದಿಯಂತೆ ಸಂಘಟನಾತ್ಮಕ ಚುನಾವಣೆ ನಡೆಸಲು ಮುಂದಾಗಿದೆ.

Advertisement

ಸೆ. 20ರ ಒಳಗೆ ಚುನಾವಣೆ ನಡೆಯುವು ದಿಲ್ಲ ಎಂಬ ವರದಿಯ ಸಂಬಂಧ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಸಂಘಟನ ಚುನಾವಣ ಸಮಿತಿಯ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿ ಅವರು, ಆ. 21ರಿಂದ ಆರಂಭವಾಗಿ, ಸೆ. 20ರ ಒಳಗೆ ಎಐಸಿಸಿ ಅಧ್ಯಕ್ಷರು ಮತ್ತಿತರರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಚುನಾ ವಣೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಚುನಾವಣೆ ನಡೆಯುತ್ತಿಲ್ಲ ಎಂದು ಪಕ್ಷದೊಳಗಿನ ಜಿ23 ಗುಂಪು ಆರೋಪಿಸಿತ್ತು. ಈ ಸಂಬಂಧ ಗುಲಾಂ ನಬಿ ಆಜಾದ್‌, ಆನಂದ್‌ ಸಿಂಗ್‌ ಮತ್ತಿತರ 23 ಮಂದಿ ನಾಯಕರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಇದಾದ ಬಳಿಕ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು ಸಭೆ ಸೇರಿ ಸಾಂಸ್ಥಿಕ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿತ್ತು.

ಅದರಂತೆ ಕಳೆದ ಎ. 16ರಿಂದ ಮೇ 31ರ ವರೆಗೆ ಬ್ಲಾಕ್‌ ಕಾಂಗ್ರೆಸ್‌ ಮತ್ತು ಪಿಸಿಸಿಯ ಒಬ್ಬ ಪದಾಧಿಕಾರಿಯ ಸ್ಥಾನಕ್ಕೆ ಚುನಾವಣೆ ನಡೆದಿದೆ. ಜೂ. 1ರಿಂದ ಜು. 20ರ ವರೆಗೆ ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಕ್ಕೆ ಚುನಾವಣೆ ಹಾಗೂ ಜು. 21ರಿಂದ ಆ. 20ರ ಒಳಗೆ ಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಜತೆಗೆ ಆ. 21ರಿಂದ ಸೆ. 20ರ ಒಳಗೆ ಎಐಸಿಸಿ ಅಧ್ಯಕ್ಷರ ಚುನಾವಣೆಯನ್ನೂ ನಡೆಸಲು ನಿರ್ಧರಿಸಲಾಗಿದೆ. ಅದರಂತೆಯೇ ಚುನಾವಣ ಪ್ರಕ್ರಿಯೆ ನಡೆಯುತ್ತದೆ ಎಂದು ಮಿಸ್ತ್ರಿ ಹೇಳಿದ್ದಾರೆ.

ಈಗಾಗಲೇ ಸಿಡಬ್ಲ್ಯುಸಿ ಮುಂದೆ ಈ ಬಗ್ಗೆ ಪ್ರಸ್ತಾವ ಇರಿಸಲಾಗಿದ್ದು, ಸದ್ಯದಲ್ಲೇ ಅಂತಿಮ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಯವರ ಒಪ್ಪಿಗೆಗಾಗಿ ಪಕ್ಷದ ನಾಯಕರು ಕಾಯುತ್ತಿದ್ದಾರೆ. ಆದರೆ ರಾಹುಲ್‌ ಈ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಎಂಬ ಗೊಂದಲ ಮೂಡಿದೆ ಎನ್ನಲಾಗಿದೆ.

ಆನಂದ್‌ ಶರ್ಮ ರಾಜೀನಾಮೆ
ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸ್ಟೀರಿಂಗ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಜಿ23 ಗುಂಪಿನ ಆನಂದ್‌ ಶರ್ಮ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಮೌನ ವಹಿಸಿದ್ದಾರೆ ಎಂಬ ಕಾರಣಕ್ಕಾಗಿ ಈ ನಾಯಕರು ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿ ದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ತಾನು ಕಾಂಗ್ರೆಸ್‌ ತ್ಯಜಿಸುವುದಿಲ್ಲ ಎಂದು ಆನಂದ್‌ ಶರ್ಮ ತಿಳಿಸಿದ್ದಾರೆ.

ಛತ್ತೀಸ್‌ಗಢ ಸಿಎಂ ಭೂಪೇಶ್‌ ಭಗಲ್‌ ಅವರಿಗೆ ಹಿಮಾಚಲ ಪ್ರದೇಶದ ಉಸ್ತುವಾರಿ ನೀಡಲಾಗಿದ್ದು, ಈಚೆಗೆ ಅವರು ಪದಾಧಿಕಾರಿಗಳ ಸಭೆ ನಡೆಸಿದ್ದರು. ಆನಂದ್‌ ಶರ್ಮ ಅವರನ್ನು ಈ ಸಭೆಗೆ ಕರೆದಿರಲಿಲ್ಲ, ಇದರಿಂದ ಶರ್ಮ ನೊಂದಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next