ಕಾರವಾರ: ರಾಜ್ಯದ ಮೊಟ್ಟ ಮೊದಲ ಬ್ಲೂಫ್ಲಾಗ್ ಬೀಚ್ ಎಂಬ ಹೆಸರು ಪಡೆಯಲು ಹೊನ್ನಾವರದ ಕಾಸರಕೋಡು ಬಳಿಯ ಬೀಚ್ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಾಸರಕೋಡು ಇಕೋ ಬೀಚ್ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.
ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲು ಕೇಂದ್ರ ಸರ್ಕಾರ ರಾಜ್ಯಕ್ಕೆ 8 ಕೋಟಿ ರೂ. ನೆರವು ನೀಡಿದ್ದು, ಈ ಅನುದಾನ ಎರಡು ವರ್ಷಗಳವರೆಗೆ ಮುಂದುವರಿಯಲಿದೆ. ಸಿಆರ್ ಝಡ್ ನಿಯಮಗಳಿಂದ ರಿಯಾಯಿತಿ ಪಡೆದ ಮೊಟ್ಟ ಮೊದಲ ಬೀಚ್ ಎಂಬ ಹೆಗ್ಗಳಿಕೆ ಸಹ ಇದೀಗ ಕಾಸರಕೋಡ ಬೀಚಗೆ ಲಭ್ಯವಾಗಿದೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಗುಣ ಮಟ್ಟದ ಸೌಲಭ್ಯಗಳನ್ನು ಕಾಸರಕೋಡು ಬೀಚನಲ್ಲಿ ಕಲ್ಪಿಸಲಾಗಿದೆ. ಸದ್ಯವೇ ಈ ಬೀಚನ್ನು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ.
ಏತನ್ಮಧ್ಯೆ ಬ್ಲೂಫ್ಲಾಗ್ ಕಮಿಟಿ ಸದಸ್ಯರು ಕಾಸರಕೋಡು ಬೀಚ್‌ಗೆ ಭೇಟಿ ನೀಡಿಲಿದ್ದಾರೆ. ಅಂತಿಮವಾಗಿ ಇದೇ ಜೂನ್‌ನಲ್ಲಿ ಕಾಸರಕೋಡು ಬೀಚ್‌ನ ಸೌಲಭ್ಯಗಳು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಿವೆ ಎಂದು ಅವರಿಗೆ ಅನ್ನಿಸಿದಲ್ಲಿ ಮಾತ್ರ ಕಾಸರಕೋಡು ಬೀಚ್‌ಗೆ ಬ್ಲೂಫ್ಲಾಗ್ ಕಿರೀಟ ದಕ್ಕಲಿದೆ. ಬ್ಲೂಫ್ಲಾಗ್ ಬೀಚ್ ಎಂಬ ಹೆಗ್ಗಳಿಕೆ ಪಡೆಯಲು ಬೀಚ್ ಕನಿಷ್ಠ 750 ಮೀಟರ್ ಉದ್ದವಿರಬೇಕು. ಮಕ್ಕಳು, ಪ್ರವಾಸಿಗರು ಓಡಾಡಲು ವಿಶಾಲ ಬೀಚ್ ಬಯಲು ಇರಬೇಕು. ಸಮುದ್ರಕ್ಕೆ 2 ಕಿಮೀ. ವ್ಯಾಪ್ತಿಯಲ್ಲಿ ನದಿಯ ನೀರು, ಹಳ್ಳ, ಕೊಳ್ಳಗಳ ನೀರು, ಕೊಳಚೆ ಕಾಲುವೆಯ ನೀರು ಹರಿದು ಸೇರುತ್ತಿರಬಾರದು. ಸ್ವಚ್ಛ ವಾತಾವರಣ, ಗಿಡ ಮರಗಳು ಇರಬೇಕು. ಮಕ್ಕಳಿಗೆ ಆಟದ ಸೌಲಭ್ಯಗಳಿರಬೇಕು. ಸ್ನಾನಕ್ಕೆ ಶವರ್ ಸೌಲಭ್ಯ, ಮಹಿಳೆಯರು ಮತ್ತು ಪುರುಷರಿಗೆ ಬಟ್ಟೆ ಬದಲಿಸುವ ಪ್ರತ್ಯೇಕ ಕೋಣೆಗಳು, ಪ್ರತ್ಯೇಕ ಶೌಚಾಲಯಗಳು, ಮಾಹಿತಿ ಕೇಂದ್ರ, ದೂರವಾಣಿ ಸೌಲಭ್ಯ, ಬೋಟಿಂಗ್, ಬೀಚ್‌ನಲ್ಲಿ ವಿಶ್ರಾಂತಿ ಸೌಲಭ್ಯಗಳಿರಬೇಕು. ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಮತ್ತು ಪರಿಸರ ಕಾಪಾಡಲು ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಇರಬೇಕು. ಕುಡಿಯುವ ನೀರಿನ ಗುಣಮಟ್ಟ ಮತ್ತು ಸ್ನಾನಕ್ಕೆ ಬಳಸುವ ನೀರು ಸಹ ಗುಣಮಟ್ಟದ್ದಾಗಿರಬೇಕು ಎಂಬ ನಿಯಮಗಳಿವೆ.
ಬೀಚ್‌ನಲ್ಲಿ ಮಕ್ಕಳಿಗೆ ಹಾನಿ ಮಾಡುವಂತಹ ಬೀದಿನಾಯಿಗಳ ಹಾವಳಿ ಇರಬಾರದು. ಬೀಚ್ ಸಮತಟ್ಟು ಮಾಡುವ ಮತ್ತು ಕಸ ಸಂಗ್ರಹಿಸುವ ಸ್ವಚ್ಛತಾ ಯಂತ್ರವಿರಬೇಕು. ಕಾಸರಕೋಡು ಬೀಚನಲ್ಲಿ ನೀರಿನ ಪರಿಶುದ್ಧತೆ ಹೊಣೆಯನ್ನು ಆಕ್ವಾಗಾರ್ಡ್ ಸಂಸ್ಥೆ ಹೊತ್ತುಕೊಂಡಿದ್ದು, ನಿರ್ವಹಣೆ ಹೊಣೆ ಸಹ ಹೊತ್ತಿದೆ. ಫೌಂಡೇಶನ್ ಫಾರ್ ಎನ್ವಿರಾಲ್‌ಮೆಂಟ್ ಎಜುಕೇಶನ್ ಸಂಸ್ಥೆ ರೂಪಿಸಿರುವ ಎಲ್ಲಾ ನಿಯಮಗಳನ್ನು ಕಾಸರಗೋಡು ಬೀಚ್‌ನಲ್ಲಿ ಅನುಷ್ಠಾನ ಮಾಡಲು ಜಿಲ್ಲಾಡಳಿತ ಕಳೆದ 8 ತಿಂಗಳಿಂದ ಶ್ರಮಿಸಿದೆ. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಕೈಜೋಡಿಸಿವೆ. ಕೇಂದ್ರದ 8 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 5 ಕೋಟಿ ವೆಚ್ಚ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇರುವ ಗುಣಮಟ್ಟದ ಸ್ನಾನದ ವ್ಯವಸ್ಥೆ, ವಿಶ್ರಾಂತಿ ಹಾಗೂ ಶೌಚಾಲಯ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಕೇಂದ್ರ ರೂಪಿಸಲಾಗಿದೆ. 80 ಲಕ್ಷ ರೂ. ಮೊತ್ತದ ಬೀಚ್ ಸಮತಟ್ಟು ಮಾಡುವ, ಕಸ ಹೆಕ್ಕುವ ಯಂತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೇ 50 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
-ನಾಗರಾಜ ಹರಪನಹಳ್ಳಿ