ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ಸಿಕ್ಕ ಸಿಕ್ಕಲ್ಲಿ ಅವೈಜ್ಞಾನಿಕವಾಗಿ ಮೇಲ್ಸೇತುವೆ ನಿರ್ಮಾಣ ಮಾಡದೆ ಅಗತ್ಯ ಇರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ಮೇಲ್ಸೇತುವೆ ಅಥವಾ ಕೆಳ ಸೇತುವೆಗಳನ್ನು ನಿರ್ಮಾಣ ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಗೌರಮ್ಮನಹಳ್ಳಿ ಕ್ರಾಸ್ ಸಮೀಪದ ಎಚ್.ಎಚ್ 4 ರಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಹೆದ್ದಾರಿ ಹಾದು ಹೋಗುವ ಎಲ್ಲ ಹಳ್ಳಿಗಳಲ್ಲಿ ಅಗತ್ಯ ಅಂಡರ್‌ಪಾಸ್ ಸೇತುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಎನ್.ಎಚ್- 4 ಗೌರಮ್ಮನಹಳ್ಳಿ ಹತ್ತಿರ ಅಂಡರ್‌ಪಾಸ್ ನಿರ್ಮಾಣದಲ್ಲಿ ನಾಲ್ಕು ಅಡಿಗಳಷ್ಟು ನೀರು ನಿಲ್ಲುತ್ತಿದೆ. ಇದರಿಂದ ಜನ-ಜಾನುವಾರುಗಳು, ಎತ್ತಿನಗಾಡಿ, ಟ್ರ್ಯಾಕ್ಟರ್, ಬೈಕ್ ಸೇರಿದಂತೆ ಸುಗಮ ಸಂಚಾರ ವ್ಯವಸ್ಥೆಗೆ ಅನಾನುಕೂಲವಾಗಿದೆ. ಇದೀಗ ಮತ್ತೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು 8 ಅಡಿ ಆಳ ತೆಗೆದು ಅವೈಜ್ಞಾನಿಕ ಅಂಡರ್‌ಪಾಸ್ ಮಾಡಲು ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರ ಮುಂದಾಗಿದೆ. ಇಂತಹ ಅವೈಜ್ಞಾನಿಕ ಅಂಡರ್‌ಪಾಸ್ ನಿರ್ಮಾಣದಿಂದಾಗಿ ಚಿಕ್ಕಾಲಘಟ್ಟ, ಗೌರಮ್ಮನಹಳ್ಳಿ, ವಡ್ಡರಸಿದ್ದನಹಳ್ಳಿ ಗ್ರಾಮಸ್ಥರಿಗೆ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ನಿರ್ಮಾಣ ಮಾಡಲಾಗಿರುವ ಅಂಡರ್‌ಪಾಸ್ ಸೇತುವೆಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹಲವಾರು ಬಾರಿ ರಸ್ತೆ ತಡೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮನಬಂದಂತೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ನಿರ್ಮಾಣ ಮಾಡಿ ಅಮೂಲ್ಯವಾದ ಜೀವಹಾನಿಗೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಹೆದ್ದಾರಿ ಹಾದು ಹೋಗುತ್ತಿರುವ ವಿವಿಧ ಗ್ರಾಮಗಳಲ್ಲಿನ ಸೇತುವೆ ಸಮಸ್ಯೆಗಳನ್ನು ಕುರಿತು ಈಗಾಗಲೇ ಹೆದ್ದಾರಿ ಪ್ರಾಕಾರದ ಎಂಜಿನಿಯರ್‌ಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರಾಧಿಕಾರದವರು 2 ಕಿಮೀಗೆ ಒಂದರಂತೆ ಅಂಡರ್‌ಪಾಸ್ ಸೇತುವೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕಲ್ಕುಂಟೆಯಿಂದ ಲಕ್ಷ್ಮೀಸಾಗರ ಮಧ್ಯೆ 2.5 ಕಿಮೀ ಇದ್ದು ಅಲ್ಲಿ 4 ಅಂಡರ್‌ಪಾಸ್ ನಿರ್ಮಾಣ ಮಾಡುತ್ತಿದ್ದಾರೆ. ಸರ್ವೀಸ್ ರಸ್ತೆ ಸಮೀಪದಲ್ಲಿಯೇ ದಾವಣಗೆರೆ- ತುಮಕೂರು ನೇರ ರೈಲ್ವೆ ಮಾರ್ಗವಿದ್ದು, ಗೌರಮ್ಮನಹಳ್ಳಿ ಹತ್ತಿರ ಗೂಡ್ಸ್ ಶೆಡ್ ನಿರ್ಮಾಣ ಮಾಡುವ ನಿರೀಕ್ಷೆ ಇದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸುಸಜ್ಜಿತವಾದ ಮತ್ತು ವೈಜ್ಞಾನಿಕ ಮಾದರಿಯ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಪ್ರಧಾನ ಕಾರ್ಯದರ್ಶಿ ಟಿ. ನೂಲೇನೂರು ಎಂ. ಶಂಕರಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ಸಿ.ಆರ್. ತಿಮ್ಮಣ್ಣ, ಮಹಮ್ಮದ್ ಅಮ್ಜಾದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.