ರಾಣಿಬೆನ್ನೂರ: ತಾಲೂಕಿನ ಮಾಕನೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಜಮೀನಿನಲ್ಲಿ ತೆರೆದಿರುವ ಸಿಎಲ್-2 ಮದ್ಯದ ಅಂಗಡಿಯಿಂದಾಗಿ ಅಕ್ಕ ಪಕ್ಕ ಇರುವ ಕವಲೆತ್ತು, ಕರೂರು, ಮಾಕನೂರು ಗ್ರಾಮದ ಕೆಲ ರೈತರ ಜಮೀನುಗಳಲ್ಲಿ ಕುಡಿದ ಬಾಟಲಿಗಳನ್ನು ಎಸೆಯುತ್ತಿದ್ದು ಇದರಿಂದ ಮುಂಗಾರು ಉಳುಮೆ ಮಾಡುವುದು ರೈತರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಸಂಜೆಯಾದ ಕೂಡಲೇ ಅಂಗಡಿಗೆ ಜಮಾಯಿಸುವ ಕೆಲವರು ಕುಡಿದ ಅಮಲಿನಲ್ಲಿ ಬಾಟಲಿಗಳನ್ನು ಜಮೀನಿನ ತುಂಬೆಲ್ಲಾ ಎಸೆದಿರುವುದಲ್ಲದೆ ಅಲ್ಲಲ್ಲಿ ಬಾಟಲಿಗಳನ್ನು ಒಡೆದು ಚೂರು ಮಾಡಲಾಗಿದೆ. ಇದರಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಿ ಬಿತ್ತನೆ ಮಾಡುವ ವೇಳೆ ರೈತರ ಕಾಲುಗಳಿಗೆ ಚುಚ್ಚಲಿವೆ ಎಂದು ರೈತರು ಆತಂಕಗೊಂಡಿದ್ದಾರೆ.
Advertisement
ಅಸಮರ್ಪಕ ಮುಂಗಾರು ಮಳೆಯಿಂದಾಗಿ ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ ಆದರೆ, ಇಲ್ಲಿನ ರೈತರು ಮತ್ತೂಂದು ರೀತಿಯ ತೊಂದರೆ ಎದುರಿಸುವಂತಾಗಿದೆ. ಸಿಎಲ್-2 ಬಾರ್ ಅನ್ನು ತೆರೆಯಲು ಅನುಮತಿ ನೀಡಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಜನರು ಕುಡಿದು ಸೀಸಗಳನ್ನು ಬಿಸಾಡಿದ್ದಾರೆ.
ತಾಲೂಕಿನ ಮಾಕನೂರು ಕ್ರಾಸ್ ಹತ್ತಿರದ ಜಮೀನಿನಲ್ಲಿ ತೆರೆದಿರುವ ಸಿಎಲ್-2 ಮದ್ಯದ ಅಂಗಡಿಯಿಂದಾಗಿ ರೈತರಿಗೆ ತೊಂದರೆಯಾಗಿದ್ದು, ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಬೇಕೆಂದು ಮನವಿ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವುದು ವಿಳಂಬವಾದಲ್ಲಿ ರೈತ ಹೋರಾಟಗಾರರು, ಸ್ತ್ರೀ-ಶಕ್ತಿ ಸಂಘಗಳು ಹಾಗೂ ಪರಿಸರ ಸ್ನೇಹಿ ಸಂಘಟನೆಗಳೊಂದಿಗೆ ಹೋರಾಟ ಮಾಡಲಾಗುವುದು.
•ಹನುಮಂತಪ್ಪ ಕಬ್ಟಾರ, ಅಧ್ಯಕ್ಷರು ತಾಲೂಕು ರೈತ ಸಂಘ ರಾಣಿಬೆನ್ನೂರ
ಮಾಕನೂರು ಕ್ರಾಸ್ ಹತ್ತಿರದ ಜಮೀನಿನಲ್ಲಿ ತೆರೆದಿರುವ ಮದ್ಯದ ಅಂಗಡಿ ಅಧಿಕೃತವಾಗಿದ್ದು, ಅಕ್ಕ ಪಕ್ಕದ ಕೆಲ ರೈತರ ಜಮೀನುಗಳಲ್ಲಿ ಕುಡಿದು ಬಾಟಲಿಗಳನ್ನು ಎಸೆದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಕುಡಿದು ಎಲ್ಲೆಂದರಲ್ಲಿ ಎಸೆಯದಂತೆ ಕ್ರಮ ಕೈಗೊಳ್ಳಲಾಗುವುದು.•ಹನುಮಂತಪ್ಪ ವಜ್ರಮಟ್ಟಿ, ಅಬಕಾರಿ ನಿರೀಕ್ಷಕರು ರಾಣಿಬೆನ್ನೂರ
ಮಾಕನೂರು ಕ್ರಾಸ್ ಹತ್ತಿರದ ಜಮೀನಿನಲ್ಲಿ ತೆರೆದಿರುವ ಮದ್ಯದ ಅಂಗಡಿಗೆ ಕಟ್ಟಡ ಪರವಾನಗಿ ಪಡೆದಿದ್ದಾರೆ.•ಗೀತಾ ಪಿಡಿಓ ಗ್ರಾಪಂ ನದಿಹರಳಳ್ಳಿ