Advertisement

ಗ್ರಾಮ ವಾಸ್ತವ್ಯದಲ್ಲೇ ಸಮಸ್ಯೆಗಳ ಸರಮಾಲೆ… 

01:32 PM Oct 16, 2017 | Team Udayavani |

ತಿ.ನರಸೀಪುರ: ಪೊಲೀಸ್‌ ಇಲಾಖೆ ವತಿಯಿಂದ ಮೂಗೂರು ಗ್ರಾಮದಲ್ಲಿ  ನಡೆದ ಜನ ಸಂಪರ್ಕ ಸಭೆ ಹಾಗೂ ಗ್ರಾಮ ವ್ಯಾಸ್ತವ್ಯದಲ್ಲಿ ಗ್ರಾಮಸ್ಥರಿಂದ ಸಮಸ್ಯೆ ಸರಮಾಲೆಯೇ ಹರಿದು ಬಂದಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣನವರ್‌ ಮಾರ್ಗದರ್ಶನದಂತೆ ನಡೆದ ಜನ ಸಂಪರ್ಕ ಸಭೆ, ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲಾ ಅಪಾರ ಪೊಲೀಸ್‌ ವರಿಷ್ಠಾಧಿಕಾರಿ ರುದ್ರಮುನಿ ಉದ್ಘಾಟಿಸಿ ಮಾತನಾಡಿದರು.

Advertisement

ಗ್ರಾಮಸ್ಥರು ಪೊಲೀಸ್‌ ಇಲಾಖೆಗೆ ಸಹಕಾರ ನೀಡುವ ಮೂಲಕ ಗ್ರಾಮದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರಸಿದ್ಧ ಶ್ರೀತ್ರಿಪುರ ಸುಂದರಿ ಅಮ್ಮನವರು ನೆಲೆಸಿ, ಯಾತ್ರಾ ಸ್ಥಳವೇ ಆಗಿರುವ ಮೂಗೂರು ಗ್ರಾಮಕ್ಕೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸೂಕ್ತ ಮೂಲ ಸೌಲಭ್ಯ ದೊರಕದೇ ಪರಿತಪಿಸುವಂತಾಗಿದೆ.

ಹೀಗಾಗಿ ಸಂಬಂಧಪಟ್ಟ ಮುಜರಾಯಿ ಇಲಾಖೆ ಮೂಲ ಸೌಕರ್ಯ ಒದಗಿಸಿ ಸಮಸ್ಯೆ ಬಗೆಹರಿಸಬೇಕೆಂದು ಮುಗೂರು ಗ್ರಾಪಂ ಮಾಜಿ ಸದಸ್ಯ ಕೆ.ಶೇಷಣ್ಣ ಒತ್ತಾಯಿಸಿದರು. ಕುರುಬೂರು ಪಟೇಲ್‌ ಬಸಪ್ಪ, ರಾಷ್ಟ್ರೀಯ ಹೆದ್ದಾರಿ 212 ತಿ.ನರಸೀಪುರದಿಂದ ಚಾಮರಾಜನಗರದವರೆಗಿನ ರಸ್ತೆಯ ಎರಡು ಬದಿಯಲ್ಲಿ ಸೂಚನಾ ಫ‌ಲಕ ಅಳವಡಿಸಬೇಕು. ಹಾಗೂ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಹೆಚ್ಚಿನ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಮೂಗೂರು ದಯಾನಂದ, ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರಕುತ್ತಿಲ್ಲ. ಕೂಡಲೇ ವೈದ್ಯರು-ಸಿಬ್ಬಂದಿಯನ್ನು ನೇಮಿಸಬೇಕೆಂದರು. ಮೂಗೂರು ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಆಗಿಂದ್ದಾಗ್ಗೆ ಬಯೋಮೆಟ್ರಿಕ್‌ ಸಮಸ್ಯೆ ಕಾಡುತ್ತಿದ್ದು, ಪಡಿತರದಾರರು ಆಹಾರ ಧಾನ್ಯ ಪಡೆಯಲು ಪರಿತಪಿಸುವಂತಾಗಿದೆ. ಗ್ರಾಮದ ಹಲವು ರಸ್ತೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆಂದು ಮೂಗೂರು ಗ್ರಾಮದ ಬಸವಣ್ಣ ಆರೋಪಿಸಿದರು.

ಟೈಲರ್‌ ಸಿದ್ದಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಪೊಲೀಸ್‌ ಇಲಾಖೆ ಗಸ್ತು ಹೆಚ್ಚಿಸಬೇಕೆಂದು ತಿಳಿಸಿದರು. ಕುರುಬೂರು ಗ್ರಾಮಸ್ಥ ಕೆ.ಎಸ್‌.ಶಿವಕುಮಾರ್‌, ನಾಡ ಕಚೇರಿಗಳಲ್ಲಿ ಅಂತಜಾìಲ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆ ಸಕಾಲದಲ್ಲಿ ರೈತರಿಗೆ  ಆರ್‌ಟಿಸಿ ದೊರಕುತ್ತಿಲ್ಲ ಎಂದರು. 

Advertisement

ಸಂಜೆ 8 ಗಂಟೆಗೆ ಆರಂಭವಾದ ಸಭೆ ರಾತ್ರಿ 10 ಗಂಟೆಗೆ ಮುಕ್ತಾಯಗೊಂಡಿತು. ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಸಭೆಗೆ ಮುನ್ನ ಅಧಿಕಾರಿಗಳು ಶ್ರೀತ್ರಿಪುರ ಸುಂದರಿ ಅಮ್ಮನವರ ದೇಗುದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸರ್ಕಾರಿ ಸಾರ್ವಜನಿಕರ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಪೊಲೀಸ್‌ ಅಧಿಕಾರಿಗಳು, ತಾಲೂಕು ಮಟ್ಟದ ಕೆಲ ಅಧಿಕಾರಿಗಳು ವ್ಯಾಸ್ತವ್ಯ ಹೂಡಿದ್ದರು.

ನಂಜನಗೂಡು ಉಪವಿಭಾಗದ ಎಎಸ್‌ಪಿ ಮಹಮ್ಮದ್‌ ಸುಜೀತಾ, ತಹಶೀಲ್ದಾರ್‌ ಬಸವರಾಜುಚಿಗರಿ, ಇಒ ಬಿ.ಎಸ್‌.ರಾಜು, ಸಿಪಿಐ ಎಂ.ಮನೋಜ್‌ಕುಮಾರ್‌, ಪಿಎಸ್‌ಐ ಎನ್‌.ಆನಂದ್‌, ಲತೇಶ್‌ಕುಮಾರ್‌, ಸಿಬ್ಬಂದಿಗಳಾದ ಮಂಚಿಗಯ್ಯ, ಮಹಮ್ಮದ್‌ ಇಮ್ರಾನ್‌, ಬಿ.ಸಿದ್ದರಾಜು, ಬಸವರಾಜು,  ಬಿಇಒ ಮರಿಸ್ವಾಮಿ ಮತ್ತಿತರರಿದ್ದರು.

ಕಣ್ಣೀರಿಟ್ಟ ಮಹಿಳೆ: ಮೈಸೂರಿನ ಗಾಂಧಿನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನ ಪತಿ ಕರ್ಪಯ್ಯ ಸೇವಾ ಅವಧಿಯಲ್ಲೇ ಮೃತರಾಗಿದ್ದಾರೆ. ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ತನಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಪತ್ನಿ ಮೂಗೂರು ಮೀನಾಕ್ಷಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next