ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗದ ಉಪನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಐದು ವರ್ಷದ ಕಾಮಗಾರಿ ಬಳಿಕ ಅಧಿಕೃತವಾಗಿ ಉದ್ಘಾಟನೆಗೊಂಡರೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ವಲಯದ ಮುಕ್ತ ಬಳಕೆಗೆ ದೊರೆತಿಲ್ಲ.
ಕೆಲ ದಿನಗಳ ಹಿಂದಷ್ಟೆ ಉಪರಾಷ್ಟ್ರಪತಿಯಿಂದ ಬಿಆರ್‌ಟಿಎಸ್ ಯೋಜನೆ ಅಧಿಕೃತ ಉದ್ಘಾಟನೆಗೊಂಡಿದ್ದು, ಅದರ ಜೊತೆಗೆ ಈ ನಿಲ್ದಾಣವೂ ಉದ್ಘಾಟನೆಗೊಂಡಿದೆ. ಆದರೆ ಈವರೆಗೂ ಸಾರ್ವಜನಿಕರಿಗೆ ಈ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ. ಉಪನಗರ ಹಾಗೂ ಗ್ರಾಮಾಂತರ ಬಸ್ ಗಳ ಸಂಚಾರ ಆರಂಭಗೊಂಡು ಒಂದುವರ್ಷ ಕಳೆದ ಬಳಿಕ ಈಗ ಉದ್ಘಾಟನೆ ಆಗಿರುವ ನಿಲ್ದಾಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಸ್ವತ್ಛತೆ ಕೊರತೆ ಜೊತೆಗೆ ವಾಣಿಜ್ಯ ಮಳಿಗೆಗಳು ಹಾಗೂ ಉಪಾಹಾರ ಗೃಹ ನಿರ್ಮಿಸಿದ್ದರೂ ಕಾರ್ಯಾರಂಭಗೊಂಡಿಲ್ಲ. ನಿಲ್ದಾಣದ ಕೆಳಮಹಡಿಯಲ್ಲಿ ನಿರ್ಮಿಸಿರುವಪಾರ್ಕಿಂಗ್ ಜಾಗದ ಸೌಲಭ್ಯವೂ ಸಾರ್ವಜನಿಕರಿಗೆ ಸಿಕ್ಕಿಲ್ಲ.
ಕಾರ್ಯಾರಂಭವಿಲ್ಲ: ನಿಲ್ದಾಣದ ಪಕ್ಕದಲ್ಲಿ 9ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಮುಖ್ಯ ಕಟ್ಟಡದಲ್ಲಿ ಉಪಾಹಾರ ಗೃಹ ನಿರ್ಮಿಸಲಾಗಿದ್ದು, ಶುದ್ಧ ಕುಡಿವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ ಇವುಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಕಟ್ಟಡದ ಮೊದಲ ಮಹಡಿಯಲ್ಲಿರುವ ಉಪಾಹಾರ ಗೃಹಕ್ಕೆ, ಅದರ ಪಕ್ಕದಲ್ಲೇ ಇರುವ ಅಧಿಕಾರಿಗಳ ಕೊಠಡಿಗಳಿಗೂ ಬೀಗ ಜಡಿಯಲಾಗಿದೆ. ಆದಷ್ಟು ಬೇಗ ಮಳಿಗೆಗಳ ಜೊತೆಗೆ ಉಪಾಹಾರ ಗೃಹ ಕಾರ್ಯಾರಂಭ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಮುಕ್ತವಾಗದ ಪಾರ್ಕಿಂಗ್: ನಿಲ್ದಾಣ ಪಕ್ಕದಲ್ಲಿಯೇ ಸೂಪರ್ ಮಾರುಕಟ್ಟೆ ಸೇರಿದಂತೆ ಹೆಚ್ಚಿನ ಅಂಗಡಿ-ಮುಂಗಟ್ಟುಗಳು ಇರುವುದರಿಂದ ಪಾರ್ಕಿಂಗ್ ಸಮಸ್ಯೆ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದ ನೆಲಮಹಡಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಪರ್ಯಾಸವೆಂದರೆ ನಿಲ್ದಾಣ ಉದ್ಘಾಟನೆಗೊಂಡರೂ ಪಾರ್ಕಿಂಗ್ ಜಾಗ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಆದಷ್ಟು ಬೇಗ ಬಳಕೆಗೆ ಮುಕ್ತವಾದರೆ ಈ ಭಾಗದಲ್ಲಿ ಉಂಟಾಗುವಪಾರ್ಕಿಂಗ್ ಸಮಸ್ಯೆಯಾದರೂ ತಗ್ಗಬಹುದು. ಹಳೇ ಬಸ್ ನಿಲ್ದಾಣಕ್ಕೆ ಹೊಸ ರೂಪ ಸಿಕ್ಕಿದ್ದರೂ ಸ್ವತ್ಛತೆ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಅಧಿಕಾರಿ ವರ್ಗ ಲಕ್ಷ್ಯ ವಹಿಸುವುದರ ಜೊತೆಗೆ ಗ್ರಾಮೀಣ ಭಾಗಕ್ಕೂ ಹೊಸ ಬಸ್‌ಗಳ ಸಂಚಾರ ಆಗುವಂತೆ ಮಾಡಬೇಕಿದೆ.
ಪಾರ್ಕಿಂಗ್ ಜಾಗದ ನಿರ್ವಹಣೆ, ಮಳಿಗೆಗಳು, ಉಪಹಾರ ಗೃಹ, ಕುಡಿಯುವ ನೀರಿನ ಘಟಕ ನಿರ್ವಹಣೆಗಾಗಿ ಏಕರೂಪದದಲ್ಲಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಟೆಂಡರ್ ಕರೆಯಲಾಗುವುದು. ಈ ಟೆಂಡರ್ ಆಗುವವರೆಗೂ ತಾತ್ಕಾಲಿಕವಾಗಿ ನಮ್ಮ ಸಿಬ್ಬಂದಿಯಿಂದಲೇ ಪಾರ್ಕಿಂಗ್ ಜಾಗ ನಿರ್ವಹಣೆ ಮಾಡುವ ಮೂಲಕ 2-3 ದಿನದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು.
– ಬಸಲಿಂಗಪ್ಪ ಬೀಡಿ, ನಿಯಂತ್ರಣಾಧಿಕಾರಿ, ಧಾರವಾಡ ವಿಭಾಗ
-ಶಶಿಧರ್ ಬುದ್ನಿ