Advertisement

ಸರ್ಕಾರಿ ಉರ್ದು ಶಾಲೆ ಸಮಸ್ಯೆಗಳ ಅಗರ

04:09 PM Feb 01, 2020 | Suhan S |

ಹೊಸಕೋಟೆ: ನಗರದಲ್ಲಿಯೇ ಹಳೆಯದಾದ ಶಾಲೆಯೆಂಬ ಖ್ಯಾತಿ ಪಡೆದಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯು ಸಮಸ್ಯೆಗಳ ಅಗರವಾಗಿದ್ದು, ದಾಖಲಾತಿ ಕುಂಠಿತಗೊಳ್ಳುತ್ತಿದೆ. 1912ರಲ್ಲಿ ಆರಂಭಗೊಂಡಿರುವ ಶಾಲೆಯ ದುಸ್ಥಿತಿ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದ ದಾಖಲಾತಿ ಕುಂಠಿತಗೊಳ್ಳುತ್ತಿದೆ. 2012ಕ್ಕೆ ಶತಮಾನ ಪೂರೈಸಿದರೂ ಸಹ ಈ ಬಗ್ಗೆ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಾಗಲೀ ಗಮನಹರಿಸಿಲ್ಲ ಎಂದ ಆರೋಪ ಕೇಳಿ ಬರುತ್ತಿದೆ.

Advertisement

8ನೇ ತರಗತಿಗೆ ಇಲಾಖೆ ಅನುಮತಿ: ದಾನಿ ದಿ. ಚಟ್ಟೆಬಸಪ್ಪನವರಿಂದ ಪಡೆದ ಜಮೀನಿನಲ್ಲಿ ಶಾಲೆ ಪ್ರಾರಂಭಗೊಂಡ ವೇಳೆ ಕಲ್ಲಿನ ಮೇಲ್ಛಾವಣಿ ಹೊಂದಿದ್ದ 4 ಹಾಗೂ ಹೆಂಚಿನ ಮೇಲ್ಛಾವಣಿ ಹೊಂದಿದ್ದ 2 ಕೊಠಡಿಗಳನ್ನು ನಿರ್ಮಿಸಲಾಗಿತ್ತು.ಉತ್ತಮವಾಗಿದ್ದ ದಾಖಲಾತಿಯು ನಗರದ ಹಳೆ ಅಂಚೆ ಕಚೇರಿ ರಸ್ತೆಯಲ್ಲಿ ಮತ್ತೂಂದು ಉರ್ದು ಪ್ರಾಥಮಿಕ ಶಾಲೆ ಪ್ರಾರಂಭಗೊಂಡ ಕಾರಣ ಕಡಿಮೆಯಾಗಿತ್ತು. 2005-06ನೇ ಸಾಲಿನಲ್ಲಿ ಶಾಲೆಯಲ್ಲಿ 8ನೇ ತರಗತಿಗಳನ್ನು ಪ್ರಾರಂಭಿಸಲು ಇಲಾಖೆ ಅನುಮತಿ ನೀಡಿದೆ. 10ನೇ ತರಗತಿಗಳನ್ನು ಸಹ ಮುಂದುವರಿಸಿ ಪ್ರೌಢಶಾಲೆಯನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ಇದನ್ನು ಬೇರೆಡೆಗೆ ವರ್ಗಾಯಿಸಲಾಯಿತು.

ಶಾಲೆಯ ದಾಖಲಾತಿ: 2009-10ನೇ ಸಾಲಿನಲ್ಲಿ ಒಟ್ಟು 249, ಒಂದನೇ ತರಗತಿಯಲ್ಲಿ 10, 2014-15ನೇ ಸಾಲಿನಲ್ಲಿ 105, 1ನೇ ತರಗತಿಯಲ್ಲಿ 17, 2019-20ನೇ ಸಾಲಿನಲ್ಲಿ 103, 1ನೇ ತರಗತಿಯಲ್ಲಿ 17 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಶಾಲೆಯಲ್ಲಿ ಬಡ ಮಕ್ಕಳೇ ಹೆಚ್ಚು: ನಗರದ ಫ‌ಕೀರ್‌ ವಾಡಾ, ನಾಲಾಗಲ್ಲಿ ಪ್ರದೇಶದಲ್ಲಿರುವ ಅಲ್ಪಸಂಖ್ಯಾತ ಬಡಜನರ ಮಕ್ಕಳೇ ಈ ಶಾಲೆಗೆ ಹೆಚ್ಚಾಗಿ ದಾಖಲಾಗಿದ್ದಾರೆ. ಕಳೆದ 8-10 ವರ್ಷಗಳಿಂದ ಬಡಜನರೂ ಸಹ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಲು ಆಸಕ್ತಿ ವಹಿಸುತ್ತಿದ್ದಾರೆ. ಈ ಕಾರಣದಿಂದ ಶಾಲೆ ದಾಖಲಾತಿ ಕುಂಠಿತಗೊಳ್ಳುತ್ತಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ,ಸರ್ಕಾರದ ಸೌಲಭ್ಯಗಳ ಅರಿವು ಮೂಡಿಸಿದರೂ ಸಹ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ.

ಕಿಡಿಗೇಡಿಗಳಿಂದ ಬೆಂಕಿ: ಹಳೆಯ ಹೆಂಚಿನ ಕಟ್ಟಡದ ಕಿಟಕಿ, ಬಾಗಿಲುಗಳು ಮುರಿದಿದ್ದ ಕಾರಣ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಸುಮಾರು 10 ವರ್ಷಗಳ ಹಿಂದೆ ನೂತನ ಕಟ್ಟಡವನ್ನು ನಿರ್ಮಿಸಲಾಯಿತು. ಆ ನಂತರ ಜಿಪಂ ಅನುದಾನ ಹಾಗೂ ಸಮುದಾಯದ ಪ್ರಮುಖ ಉದ್ಯಮಿಗಳ ಸಹಕಾರದಿಂದ ಮತ್ತೂಂದು ವಿಶಾಲ ಕೊಠಡಿ ನಿರ್ಮಿಸಿದ್ದು, ಶಿಕ್ಷಣ ಇಲಾಖೆ ಇದನ್ನು ಪಠ್ಯಪುಸ್ತಕಗಳ ದಾಸ್ತಾನಿಗಾಗಿ ಬಳಸುತ್ತಿದೆ.

Advertisement

ಇದರಿಂದ ಒಂದೇ ಕೊಠಡಿಯಲ್ಲಿ ಮಧ್ಯ ಭಾಗದಲ್ಲಿ ವಿಭಜನೆ ಮಾಡಿಕೊಂಡು 7 ಮತ್ತು 8ನೇ ತರಗತಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಹಳೆಯ ಕೊಠಡಿಗಳ ಮೇಲ್ಛಾವಣಿ ಮಳೆ ಬಂದಾಗ ಸೋರಿಕೆಯಾಗುತ್ತಿದೆ. ಗೋಡೆಗಳಲ್ಲಿನ ಮಣ್ಣು ಬೀಳುತ್ತಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದು, ನೆಲಹಾಸು ತೀವ್ರ ಹಾನಿಗೊಂಡಿದೆ. ಈ ಕೊಠಡಿಗಳಲ್ಲಿ ತರಗತಿ ನಡೆಸಿದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಪೋಷಕರ ಹೇಳಿಕೆಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಕಡಿಮೆ ಅನುದಾನ ಬಿಡುಗಡೆ: ಶಾಲೆಯಲ್ಲಿ ವ್ಯಾಸಂಗ ಮಾಡಿದ್ದವರು ಪುರಸಭೆಯ ಅಧ್ಯಕ್ಷರು, ಸದಸ್ಯರು ಮಿತಿಯಾದ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿಯೇ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಷ್ಟೇ ಸಾಧ್ಯವಾಗಿದೆ. ತಾಲೂಕಿನಲ್ಲಿ 2019-20ನೇ ಸಾಲಿನಲ್ಲಿ 5 ಶಾಲೆಗಳಲ್ಲಿ 1ನೇ ತರಗತಿ ಯಿಂದಲೇ ಆಂಗ್ಲ ಮಾಧ್ಯಮ ಬೋಧನೆಯನ್ನು ಪ್ರಾರಂಭಿಸಿದ್ದು, ಈ ಶಾಲೆಯ ಶಿಕ್ಷಕರಿಗೂ ಸಹ ತರಬೇತಿ ನೀಡಿದರೂ ತರಗತಿಗಳನ್ನು ಆರಂಭಿಸಿಲ್ಲ.

ಪ್ರತ್ಯೇಕ ಶೌಚಾಲಯ ವ್ಯವಸ್ಥೆ: 2009-10ನೇ ಸಾಲಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ತಯಾರಿಸಲು ಪ್ರತ್ಯೇಕ ಅಡುಗೆ ಕೋಣೆ ನಿರ್ಮಿಸಲಾಗಿದೆ. ಇದೇ ರೀತಿ ರೀಚಿಂಗ್‌ ಹ್ಯಾಂಡ್‌ ಸಂಸ್ಥೆ ವತಿಯಿಂದ 2 ವರ್ಷಗಳ ಹಿಂದೆ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಮಾಡಲಾಗಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ, ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಭಾಷಾ ಜ್ಞಾನದ ಕೊರತೆ :  1ರಿಂದ 8ನೇ ತರಗತಿಯವರಿಗೂ ಶಾಲೆಯಲ್ಲಿ ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ನಂತರ ಸರಕಾರಿ ಬಾಲಕರ, ಬಾಲಕಿಯರ ಪ್ರೌಢಶಾಲೆಗಳಲ್ಲಷ್ಟೇ ಶಿಕ್ಷಣ ಮುಂದುವರಿಸಬಹುದಾಗಿದೆ. ಆದರೆ, ಇಲ್ಲಿ ಆಂಗ್ಲ ಮಾಧ್ಯಮಕ್ಕೆ ದಾಖಲಾಗಿ ಉರ್ದುವನ್ನು ಒಂದು ಭಾಷೆಯನ್ನಾಗಿ ಮಾತ್ರ ಕಲಿಯಲು ಅವಕಾಶವಿದೆ. ಉಳಿದ ಪ್ರಮುಖ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಆಂಗ್ಲ ಭಾಷೆಯಲ್ಲಿಯೇ ಕಲಿಯಬೇಕಾಗಿದೆ. ಭಾಷಾ ಜ್ಞಾನದ ಕೊರತೆಯಿಂದ ವಿಶೇಷವಾಗಿ ಬಾಲಕರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶದ ಮೇಲೂ ಗಂಭೀರ ಪರಿಣಾಮ ಭೀರುತ್ತಿರುತ್ತಿದೆ. ಕೆಲ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಶಾಲೆ ತೊರೆಯುತ್ತಿದ್ದಾರೆ.

ಶಾಲೆಯ ಹಳೆಯ ಕೊಠಡಿ ಕೆಡವಿ ನೂತನ ಕಟ್ಟಡ ನಿರ್ಮಿಸಬೇಕು. 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಬೇಕು. ಶಾಲೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸಿ, 10ನೇ ತರಗತಿಯವರೆಗೂ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕೆಂಬುದು ಬಹುತೇಕ ಪೋಷಕರ ಒತ್ತಾಯವಾಗಿದೆ. ಇಂತಹ ವ್ಯವಸ್ಥೆಯಿಂದ ಮಾತ್ರ ಸರಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗಿ ಅಲ್ಪಸಂಖ್ಯಾತರು ಅಭಿವೃದ್ಧಿ ಸಾಧ್ಯವಿದೆ.  –ಸೈಯದ್‌ ಮುಷ್ತಾಕ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next